ಪಾತೂರು ಮಾತು
ಅರ್ಧ ವರುಷ ಇರದ ಹರುಷ.....!


Positive with Pathuru
ನಮಸ್ಕಾರ
2020 ಎನ್ನುವ ವರ್ಷದ ಬಗ್ಗೆ ಬಹಳ ಹಿಂದೆಯೇ ಸಾಕಷ್ಟು ನಿರೀಕ್ಷೆಗಳನ್ನು ಕನಸುಗಳನ್ನು ಕಟ್ಟಿಕೊಟ್ಟಂಥ ವರ್ಷವಾಗಿತ್ತು. ಆದರೆ ಈ ವರ್ಷಾರಂಭದಿಂದ ನಡೆದ ಘಟನೆಗಳೆಲ್ಲ ಪ್ರತಿಯೊಬ್ಬರನ್ನು ಕೂಡ ಚಿಂತೆ, ನಿರಾಶೆಗೆ ದೂಡುವಂತೆ ಇತ್ತು ಎನ್ನುವುದು ಸುಳ್ಳಲ್ಲ. ಮುಖ್ಯವಾಗಿ ಕೊರೊನಾ ವೈರಸ್ ಕಾಟ ಕಾರಣವಾದರೆ ಅದಕ್ಕೆ ಪೂರಕವಾಗಿ ಸಾವು, ನೋವು ಸಂಕಷ್ಟಗಳು ಸಾಮಾನ್ಯರಿಂದ ಚಿತ್ರೋದ್ಯಮಿಗಳ ತನಕ ಎಲ್ಲರನ್ನೂ ಕಾಡಿತು.
ಈ ವರ್ಷ ಬಿಡುಗಡೆಯಾದ ಸಿನಿಮಾದಲ್ಲಿ ನಾಗರಿಹಳ್ಳಿಯವರ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳನ್ನು ಇರಿಸಲಾಗಿತ್ತು. ವಿಪರ್ಯಾಸ ಎನ್ನುವಂತೆ ವಸಿಷ್ಠ ಸಿಂಹ ಅವರಿಗೆ ಚಿತ್ರ ನಾಯನಾಗಿ ಬ್ರೇಕ್ ನೀಡಲಿಲ್ಲ ಎನ್ನಬಹುದು. ಆದರೆ ವೇದಿಕೆಯಲ್ಲಿ ಕಾಮಿಡಿ ಮಾಡಿಕೊಂಡಿದ್ದ ಶಿವರಾಜ್ ಕೆ.ಆರ್ ಪೇಟೆ 'ನಾನು ಮತ್ತು ಗುಂಡ' ಎನ್ನುವ ಚಿತ್ರದಲ್ಲಿ ನೀಡಿದ ನಟನೆ ಎಲ್ಲರ ನಿರೀಕ್ಷೆಯನ್ನು ಮೀರಿತ್ತು! ಹಾಸ್ಯ ಮಾತ್ರವಲ್ಲ, ಸೆಂಟಿಮೆಂಟ್ ಸನ್ನಿವೇಶಗಳಲ್ಲಿಯೂ ಚೆನ್ನಾಗಿ ಅಭಿನಯಿಸಬಲ್ಲ ಕಲಾವಿದ ಎನ್ನುವುದನ್ನು ಅವರು ಚಿತ್ರದ ಮೂಲಕ ಸಾಬೀತು ಮಾಡಿದರು.
`ಕಾಣದಂತೆ ಮಾಯವಾದನು' ಎನ್ನುವುದು ಚಿತ್ರದ ಹೆಸರು. ಆದರೆ ಒಂದೊಳ್ಳೆಯ ಕಮರ್ಷಿಯಲ್ ಚಿತ್ರವಾಗಿದ್ದರೂ ಸಿನಿಮಾ ಕೂಡ ಒಂದೇ ವಾರದಲ್ಲಿ ಥಿಯೇಟರ್‌ಗಳಿಂದ ಕಾಣದಂತೆ ಮಾಯವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕನ್ನಡ ಸಿನಿ ಪ್ರೇಕ್ಷಕರ ದುರಂತ ಎಂದೇ ಹೇಳಬೇಕು. ಇದರ ನಡುವೆ ಒಂದು `ಆಟೋಗ್ರಾಫ್' ಮಾದರಿಯ ಸಾಧಾರಣ ಪ್ರೇಮಕತೆಯನ್ನು ಇರಿಸಿಕೊಂಡು `ಲವ್ ಮಾಕ್ಟೇಲ್' ಎನ್ನುವ ಚಿತ್ರ ಮಾಡಿದ ಮದರಂಗಿ ಕೃಷ್ಣ ಎಲ್ಲರ ಲವ್ ಪಡೆಯುವಲ್ಲಿ ಯಶಸ್ವಿಯಾದರು. ಪ್ರಜ್ವಲ್ ದೇವರಾಜ್ ನಟನೆಯ ಇದುವರೆಗಿನ ಚಿತ್ರಗಳಲ್ಲಿ `ಜಂಟಲ್ ಮನ್' ನಂಬರ್ ಒನ್ ಅನಿಸಿತು. ವಿಜಯ ರಾಘವೇಂದ್ರ ಅವರನ್ನು ನಾಯಕರನ್ನಾಗಿಸಿ ಕಿಶೋರ್ ಮೂಡಬಿದ್ರೆ ನಿರ್ದೇಶಿಸಿದ 'ಮಾಲ್ಗುಡಿ ಡೇಸ್' ಕ್ಲಾಸ್ ಎನ್ನುವ ಪ್ರಶಂಸೆ ಪಡೆಯಿತು. 6-5=2 ಚಿತ್ರದ ನಿರ್ದೇಶಕ ಅಶೋಕ್ ಅವರು ತಮ್ಮ `ದಿಯಾ' ಸಿನಿಮಾದ ಮೂಲಕ 'ಪೃಥ್ವಿ ಅಂಬಾರ್' ಮತ್ತು 'ಖುಷಿ' ಎನ್ನುವ ಕಲಾವಿದರನ್ನು ಸ್ಟಾರ್ ಪಟ್ಟಕ್ಕೆ ಏರಿಸಿದರು. ಕೋಡ್ಲು ರಾಮಕೃಷ್ಣ ಅವರು ತಮ್ಮ ಜನಪ್ರಿಯ ಚಿತ್ರ `ಉದ್ಭವ'ದ ಎರಡನೇ ಭಾಗ ತೆಗೆಯುವುದಾಗಿ ಹೇಳಿ ಮಾಡಿದ 'ಮತ್ತೆ ಉದ್ಭವ' ಈ ಬಾರಿ ಹಿಂದಿನ ಮ್ಯಾಜಿಕ್ ಮಾಡಲಿಲ್ಲ. `ದ್ರೋಣ' ನೋಡಿದವರು ಶಿವಣ್ಣ ಈ ಸಿನಿಮಾ ಮಾಡಬಾರದಿತ್ತು ಎಂದರು. `ಬಿಚ್ಚುಗತ್ತಿ'ಯಂಥ ಐತಿಹಾಸಿಕ ಚಿತ್ರ ಮಾಡಿದ ನಿರ್ದೇಶಕ ಹರಿ ಸಂತು ತಾನು ಎಲ್ಲ ಮಾದರಿಯ ಚಿತ್ರಗಳನ್ನು ಮಾಡಲು ಸರಿ ಇದ್ದೇನೆ ಎಂದು ಸಾರಿದಂತಿತ್ತು! ಹಾಗೂ ಹೀಗೂ ಯಶಸ್ಸಿನ ರುಚಿ ಪಡೆದು ಚಿತ್ರಮಂದಿರದಲ್ಲಿ ಮುಂದುವರಿಯುತ್ತಿದ್ದ ಒಂದಷ್ಟು ಸಿನಿಮಾಗಳಿಗೆ ಕೊವಿಡ್ 19 ಕಾರಣದಿಂದ ಹೇರಲಾದ ಲಾಕ್ಡೌನ್ ದೊಡ್ಡ ಅಡ್ಡ ಪರಿಣಾಮ ಉಂಟುಮಾಡಿತು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಒಟಿಟಿ ಮೂಲಕ ಚಿತ್ರ ವೀಕ್ಷಿಸಿದ ಕನ್ನಡಿಗರು ಹೆಚ್ಚು ಮೆಚ್ಚಿದ ಚಿತ್ರವಾಗಿ `ದಿಯಾ' ಮತ್ತು `ಲವ್ ಮಾಕ್ಟೇಲ್' ಗುರುತಿಸಿಕೊಂಡಿತು.
ಇದೀಗ ಒಟ್ಟು ಜೂನ್ ಅಂತ್ಯದ ತನಕ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳನ್ನು ಲೆಕ್ಕ ಹಾಕಿದರೆ ಸುಮಾರು 60ರಷ್ಟು ಮಾತ್ರ ಸಿಗುತ್ತವೆ. ವರ್ಷಕ್ಕೆ 400ರಷ್ಟು ಸಿನಿಮಾಗಳನ್ನು ತೆರೆಕಾಣಿಸಿ ದಾಖಲೆ ಮಾಡಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಅರ್ಧವರ್ಷವಾದರೂ ಚಿತ್ರಗಳ ಸಂಖ್ಯೆ ಅರವತ್ತು ದಾಟಿಲ್ಲ ಎನ್ನುವುದು ವಿಪರ್ಯಾಸ. ಯಾಕೆಂದರೆ ಮಾರ್ಚ್ ಬಳಿಕ ಸಿನಿಮಾಗಳೇ ತೆರೆಕಂಡಿಲ್ಲವಲ್ಲ! ಆದರೆ ಮುಂದಿನ ತಿಂಗಳಿನಿಂದ ಕನ್ನಡ ಸಿನಿಮಾಗಳು ಕೂಡ `ಒಟಿಟಿ' ಫ್ಲಾಟ್ಫಾರ್ಮ್ ಮೂಲಕ ನೇರವಾಗಿ ಬಿಡುಗಡೆಯಾಗುವ ತಯಾರಿ ನಡೆದಿದೆ.
ಇತರ ಉದ್ಯಮಗಳ ಹಾಗೆ ಚಿತ್ರೋದ್ಯಮ ಕೂಡ ಬಾಗಿಲು ಹಾಕಿಕೊಂಡಾಗ ಸಹಜವಾಗಿ ಚಂದನವನ ವಿಪರೀತ ಕಷ್ಟಕ್ಕೊಳಗಾಗಿದೆ. ಇಲ್ಲಿನ ಕಲಾವಿದ ಮತ್ತು ತಂತ್ರಜ್ಞರಿಗೆ ಇತರ ವಿಭಾಗದ ಹಾಗೆ ಬೇರೆ ಕೆಲಸದಲ್ಲಿ ತಕ್ಷಣ ತೊಡಗಿಕೊಳ್ಳಲು ಸಾಧ್ಯವಾಗದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿತ್ತು. ಅದರ ನಡುವೆ ಜೀವನದಲ್ಲಿನ ನಷ್ಟ, ನಿರಾಶೆಗಳು ಬಹಳ ಮಂದಿಯನ್ನು ಆತ್ಮಹತ್ಯೆಯತ್ತ ಸಾಗುವಂತೆ ಮಾಡಿತು. ಅದರಲ್ಲಿ ಚಿತ್ರರಂಗದವರಿಗೂ ಕೊರತೆ ಇರಲಿಲ್ಲ.
ಕನ್ನಡ ಮಾತ್ರವಲ್ಲ, ಒಟ್ಟು ಭಾರತೀಯ ಚಿತ್ರರಂಗದಲ್ಲೇ ಡಿಪ್ರೆಶನ್ ಎಲ್ಲರಿಗೂ ಕಾಡಿತ್ತು. ಒಂದಷ್ಟು ಆತ್ಮಹತ್ಯೆಗಳ ಜತೆಗೆ ಪ್ರತಿಭಾವಂತರ ವಯೋಸಹಜ ಸಾವು ಕೂಡ ಸೇರಿದಾಗ ಲಾಕ್ಡೌನ್ ಮೀರಿದ ನೀರವತೆ ಕಾಡುವಂತಾಗಿದ್ದು ಸುಳ್ಳಲ್ಲ. ಜನವರಿ 24ರಂದು ಕಿರುತೆರೆಯ ಯುವ ನಟಿ ಸೆಜಲ್ ಶರ್ಮ ಆತ್ಮಹತ್ಯೆ ಮಾಡಿಕೊಂಡರು. ಮಾರ್ಚ್ 25ರಂದು ಬಾಲಿವುಡ್‌ನ ಹಿರಿಯ ನಟಿ ನಿಮ್ಮಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ಮಾರ್ಚ್ 23ರಂದು ಕನ್ನಡ ಸಿನಿಮಾ ನಿರ್ಮಾಪಕರಲ್ಲೋರ್ವರಾದ ಕಪಾಲಿ ಮೋಹನ್ ಅವರು ಆತ್ಮಹತ್ಯೆಗೈದಿರುವ ವಿಚಾರ ಹೊರಗೆ ಬಂತು. ಮಾರ್ಚ್ 26ರಂದು ತಮಿಳಿನ ಯುವನಟ ಸೇತುರಾಮನ್ ನಿಧನರಾದರು. 34 ವರ್ಷದ ಅವರ ಸಾವಿಗೆ ಹೃದಯಾಘಾತ ಕಾರಣವಾಗಿತ್ತು! ಏಪ್ರಿಲ್ 6ರಂದು ಬುಲೆಟ್ ಪ್ರಕಾಶ್ ನಿಧನರಾದರು. ಬಹು ಅಂಗಾಗ ವೈಫಲ್ಯದಿಂದ ಸಾವು ಕಂಡ ಅವರಿಗೆ 44ವರ್ಷ ವಯಸ್ಸಾಗಿತ್ತು.ಬಾಲಿವುಡ್‌ನ ಜನಪ್ರಿಯ ನಟ ಇರ್ಫಾನ್ ಖಾನ್ ಏಪ್ರಿಲ್ 29ರಂದು ನಿಧನರಾದರು. ಅವರ ಸಾವಿಗೆ ಕ್ಯಾನ್ಸರ್ ಕಾರಣವಾಗಿತ್ತು. ಮತ್ತೋರ್ವ ಕ್ಯಾನ್ಸರ್ ರೋಗಿಯಾಗಿದ್ದ ಒಂದು ಕಾಲದ ಸೂಪರ್ ಸ್ಟಾರ್ ರಿಷಿ ಕಪೂರ್ ಮರುದಿನ ಏಪ್ರಿಲ್ 30ರಂದು ತಮ್ಮ 67ನೇ ವರ್ಷ ವಯಸ್ಸಿನಲ್ಲಿ ತೀರಿಕೊಂಡರು. ಮೇ 24ರಂದು ಬಾಲಿವುಡ್‌ನ ಯುವನಟ ಮೋಹಿತ್ ಬಘೇಲ್ ಕ್ಯಾನ್ಸರ್‌ನಿಂದ ನಿಧನರಾದರು. ಅವರಿಗೆ ಕೇವಲ 26ವರ್ಷ ವಯಸ್ಸಾಗಿತ್ತು. ಹಿಂದಿ ಸಿನಿಮಾ ಮತ್ತು ಕಿರುತೆರೆ ನಟಿಯಾಗಿದ್ದ ಪ್ರೇಕ್ಷಾ ಮೆಹ್ತಾ ಮೇ 25ರಂದು ಆತ್ಮಹತ್ಯೆಗೈದರು. ಮೇ 29ರಂದು ಬಾಲಿವುಡ್‌ನ ಹಿರಿಯ ಚಿತ್ರ ಸಾಹಿತಿ ಯೋಗೇಶ್ ಗೌರ್ ತಮ್ಮ 77ನೇ ವರ್ಷದಲ್ಲಿ ನಿಧನರಾದರು.
ಜೂನ್ ತಿಂಗಳು ಭಾರತೀಯ ಚಿತ್ರರಂಗಕ್ಕೆ ಕರಾಳ ತಿಂಗಳು ಎಂದೇ ಹೇಳಬಹುದು. ಬಾಲಿವುಡ್ ಸಾಜಿದ್ ವಾಜಿದ್ ಎನ್ನುವ ಸಂಗೀತ ನಿರ್ದೇಶಕ ಜೋಡಿಯಲ್ಲಿ ಗಾಯಕರೂ ಆಗಿದ್ದಂಥ ವಾಜಿದ್ ಖಾನ್ ಜೂನ್ 1ರಂದು ನಿಧನರಾದರು. ಹೃದಯಾಘಾತದಿಂದಾಗಿ ಅವರ ಸಾವು ಸಂಭವಿಸಿದ್ದಾಗಿ ತಿಳಿದು ಬಂದಿತು. ಜೂನ್ 4ರಂದು ಬಾಲಿವುಡ್‌ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ನಿಧನರಾದರು. 77ನೇ ವರ್ಷದಲ್ಲಿ ನಿಧನರಾದ ಅವರ ಸಾವಿಗೆ ಕೊರೊನಾ ವೈರಸ್ ಕಾರಣವಾಗಿತ್ತು. ಅದೇ ದಿನ ಹಿರಿಯ ನಿರ್ಮಾಪಕ, ಚಿತ್ರಕತೆಗಾರ ಬಸು ಚಟರ್ಜಿ ಕೂಡ ಕಾಲವಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಜೂನ್ 7ರಂದು ನಿಧನರಾದ ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಸಾವಾಗಿತ್ತು. ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ರಾಜ್ ಪೂತ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಾವಿನ ಕುರಿತಾದ ಊಹಾ ಪೋಹಗಳು ಇನ್ನು ಕೂಡ ಚರ್ಚೆಯಲ್ಲಿದ್ದು ತನಿಖೆ ನಡೆಯುತ್ತಿದೆ. ಲಾಕ್ಡೌನ್ ಮುಗಿದರೂ ಚಿತ್ರರಂಗದ ಚಟುವಟಿಕೆ ಆರಂಭವಾಗಿಲ್ಲ. ಚಿರು ಸರ್ಜಾ ನಟನೆಯಲ್ಲಿ ತೆರೆಗೆ ಬಂದ ಕೊನೆಯ ಚಿತ್ರವಾದ `ಶಿವಾರ್ಜುನ'ದ ಕಟೌಟ್ ಈಗಲೂ ಚಿತ್ರಮಂದಿರದ ಮುಂದೆ ಇರುವುದನ್ನು ಕಂಡಾಗ ಈ ಅರ್ಧ ವರ್ಷದ ಯಾವ ಘಟನೆಗಳನ್ನು ಕೂಡ ಅರಗಿಸುವುದೇ ಕಷ್ಟ ಎನ್ನುವ ಭಾವ ಮೂಡುತ್ತದೆ.
ಹೊಸ ಭರವಸೆಗಳೊಂದಿಗೆ
ಶಶಿಕರ ಪಾತೂರು