ಚಂದನವನದಲ್ಲಿ 2020ರ ಯೋಜನೆ ಯೋಚನೆಗಳು..
ಹೊಸ ವರ್ಷದ ಬಗ್ಗೆ ಮಾತನಾಡುವಾಗ ತಾರಾಫಲ ಹೇಗಿದೆ ಎಂದು ಹೇಳುವುದು ಸಹಜ. ಆದರೆ ಭೂಮಿ ಮೇಲಿನ ತಾರೆಗಳೆಂದರೆ ಸಿನಿಮಾರಂಗದವರು. ಅವರು 2020ರಲ್ಲಿ ತಮ್ಮ ಭವಿಷ್ಯವನ್ನು ಹೇಗೆ ರೂಪಿಸಲು ಬಯಸುತ್ತಾರೆ ಎನ್ನುವ ಕುತೂಹಲ ಸಿನಿಪ್ರಿಯರಿಗೆ ಸಹಜ. ಆ ಬಗ್ಗೆ ತಮ್ಮ ಕನಸುಗಳನ್ನು ಒಂದಷ್ಟು ಮಂದಿ ತಾರೆಯರು ಇಲ್ಲಿ ಪಾಸಿಟಿವ್ ಪಿಕ್ಚರ್ ಜತೆಗೆ ಹಂಚಿಕೊಂಡಿದ್ದಾರೆ.
ಇವತ್ತು ನಾನು ನನ್ನ ಮಗ ಯಂಗ್ ಸ್ಟರ್ಸ್ ಎಲ್ಲ ಸೇರಿ ನನ್ನ ಅಣ್ಣನ ಮನೆಯಲ್ಲಿ ಒಂದು ಪಾರ್ಟಿ ಅರೇಂಜ್ ಮಾಡಿದ್ದಾರೆ. ಅಲ್ಲಿ ಸುಮಾರು 40 ಜನ ಸೇರುತ್ತೇವೆ. ಅದೇ ರೀತಿ ತುಂಬ ಸ್ನೇಹಿತರ ಮನೆಯಲ್ಲಿ ಪಾರ್ಟಿ ನಡೆಯುತ್ತಿದೆ. ಎಲ್ಲರೂ ಕರೆಯುತ್ತಿದ್ದಾರೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಒಮ್ಮೆ ಹೋಗಿ, ಒಂದೈದು ನಿಮಿಷ ತಲೆ ತೋರಿಸೋಣ ಅಂತ ಇದೀನಿ.
ಇನ್ನು ಹೊಸ ವರ್ಷದ ಯೋಜನೆಗಳ ಬಗ್ಗೆ ಹೇಳುವುದಾದರೆ ನಾನು ಎರಡು ವರ್ಷಗಳಿಂದ ಮಾಡುತ್ತಿರುವ ಚಿತ್ರಗಳೆಲ್ಲ ಬಿಡುಗಡೆಯಾಗಲಿದೆ. ಮೊದಲನೆಯದಾಗಿ ನಾನೇ ಆ್ಯಕ್ಟ್ ಮಾಡಿ ನಿರ್ದೇಶಿಸಿರುವಂಥ 100 ಸಿನಿಮಾ ತೆರೆಗೆ ಬರಲಿದೆ. ಆಮೇಲೆ ಆಕಾಶ್ ನಿರ್ದೇಶನದಲ್ಲಿರುವ `ಶಿವಾಜಿ ಸುರತ್ಕಲ್’ ಚಿತ್ರ ಬಿಡುಗಡೆಯಾಗುತ್ತದೆ. ಶ್ರೀಜಯ್ ನಿರ್ದೇಶನದ ಭೈರಾದೇವಿ ಕೂಡ ಬಿಡುಗಡೆಯಾಗಬೇಕಿದೆ. ಇದರ ಪ್ರಚಾರ ಮತ್ತು ಬಿಡುಗಡೆಯಲ್ಲಿ ಮೂರು ತಿಂಗಳು ಕಳೆದುಹೋಗಿ ಬಿಡುತ್ತದೆ. ಆಮೇಲೆ ನನ್ನ ಟಾಕ್ ಶೋ ಶುರುವಾಗುತ್ತದೆ. ಜತೆಗೆ ನಂದಿನಿ ಧಾರಾವಾಹಿಯ ಪ್ರೊಡಕ್ಷನ್ ನಡೆಯುತ್ತಿದೆ. ಅದರ ಕಡೆಗೂ ಗಮನ ಕೊಡಬೇಕು. ಮತ್ತೆ ಎಲ್ಲ ವರ್ಷಗಳಂತೆ ಹೊಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಅವುಗಳು ಸದ್ಯದಲ್ಲೇ ಸೆಟ್ಟೇರಲಿದೆ.
ರಮೇಶ್ ಅರವಿಂದ್, ಚಿತ್ರನಟ- ನಿರ್ದೇಶಕ

ಹೊಸ ವರ್ಷದ ಯೋಜನೆ ಏನೆಂದರೆ, ಪ್ರಜಾಕೀಯವನ್ನು ಇನ್ನೊಂದಷ್ಟು ಹೆಚ್ಚು ಜನಗಳಿಗೆ ತಲುಪಿಸಬೇಕು ಎನ್ನುವುದೇ ಆಗಿದೆ. ಬಹುನಿರೀಕ್ಷಿತ ಚಿತ್ರಗಳೇನೋ ಬರೋದಿದೆ. ಆದರೆ ಹಿಂದಿಗಿಂತ ಹೆಚ್ಚು ಗಮನವನ್ನು ಪ್ರಜಾಕೀಯದ ಕಡೆಗೂ ನೀಡಲಿದ್ದೇನೆ. ಮುಂದಿನ ಎರಡು ಮೂರು ವರ್ಷಗಳು ಪ್ರಜಾಕೀಯವನ್ನು ಹೆಚ್ಚು ಮಂದಿಯ ಕಡೆಗೆ ತಲುಪಿಸುವ ಪ್ರಯತ್ನ ಮಾಡಲಿದ್ದೇನೆ.
ಜನ ಈಗಲೂ ನನ್ನಿಂದ ರಾಜಕೀಯದ ದೊಡ್ಡ ದೊಡ್ಡ ವಿಚಾರಗಳ ಕುರಿತಾಗಿ ಯಾವ ಅಭಿಪ್ರಾಯ ಹೊಂದಿದ್ದೇನೆ ಎಂದು ತಿಳಿಯಲು ಆಸಕ್ತರಾಗಿದ್ದಾರೆ. ಆದರೆ ಜಾತಿ, ಧರ್ಮ ನೋಡಿ, ದುಡ್ಡು ಪಡೆದು ಓಟ್ ಹಾಕಿದ ನಮಗೆ ಬೇರೆಯವರ ಬಗ್ಗೆ ಮಾತನಾಡುವ ರೈಟ್ಸೇ ಇಲ್ಲವಲ್ಲ?! ಅಲ್ಲದೆ ನಾನು ಲೆಫ್ಟ್ ಆಗಿ ಅಥವಾ ರೈಟ್ ಆಗಿ ಅಭಿಪ್ರಾಯ ಹೇಳಬೇಕು ಎಂದು ಬಯಸುವುದು ಕೂಡ ತಪ್ಪು. ರಾಜಕೀಯ ಎನ್ನುವುದೇ ಬೇರೆಯವರನ್ನು ನಂಬಿಕೊಂಡು ಜೀವನ ಮಾಡುವುದು, ಪ್ರಜಾಕೀಯ ಎನ್ನುವುದು
ನಮ್ಮ ಮೇಲೆ ನಮಗಿರುವ ನಂಬಿಕೆಯಾಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ `ಕಬ್ಜ’ ಚಿತ್ರೀಕರಣ ಶುರುವಾಗಲಿದೆ. `ಬುದ್ಧಿವಂತ 2’ ಮತ್ತು `ರವಿಚಂದ್ರ’ ಚಿತ್ರಗಳು ಆಲ್ಮೋಸ್ಟ್ ಫಿನಿಶಿಂಗ್ ಸ್ಟೇಜಲ್ಲಿವೆ. ಇವುಗಳು ಮುಗಿದೊಡನೆ `ಕಬ್ಜ’ ಶುರುವಾಗುತ್ತದೆ.
ಉಪೇಂದ್ರ, ಚಿತ್ರನಟ, ನಿರ್ದೇಶಕ
ದೊಡ್ಡದಾಗಿ ಯೋಜನೆಗಳನ್ನೇನೂ ಹಾಕಿಕೊಂಡಿಲ್ಲ. ಸಾಮಾನ್ಯವಾಗಿ ನಾನು ಸಿನಿಮಾ ಆಫರ್ ಬಂದಾಗ ಆ ಪಾತ್ರಕ್ಕಾಗಿ ಜಿಮ್ ಮಾಡಿ ತಯಾರಾಗುವವಳು. ಆದರೆ ಈ ವರ್ಷದಿಂದ ಪ್ರತಿದಿನ ಬೇಗ ಎದ್ದೇಳುವುದು, ಜಿಮ್ ಮಾಡೋದನ್ನು ಅಭ್ಯಾಸ ಮಾಡಬೇಕು ಎಂದುಕೊಂಡಿದ್ದೇನೆ.
ವರ್ಷಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ `ಯುವರತ್ನ’ ಸಿನಿಮಾ ಬಿಡುಗಡೆಯಾಗಲಿದೆ. ಅದರ ಬಳಿಕ ‘ಶಬ್ದ’ ಎನ್ನುವ ಸಿನಿಮಾದಲ್ಲಿಯೂ ನಟಿಸುತ್ತಿದ್ದೇನೆ. ಅದರಲ್ಲಿ ನನ್ನದು ಪೊಲೀಸ್ ಪಾತ್ರ. ಸದ್ಯಕ್ಕೆ ಇವೆರಡೇ ಚಿತ್ರಗಳು ಮಾತ್ರ ಇವೆ. `ಗುಳ್ಟು’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ಬಳಿಕ ಐಲವ್ಯು ಚಿತ್ರದಲ್ಲಿ ಗೃಹಿಣಿಯ ಪಾತ್ರ ದೊರಕಿತ್ತು. ಇದೀಗ ಮತ್ತೆ ಪೊಲೀಸ್ ಪಾತ್ರ ದೊರಕಿರುವುದು ವೈವಿಧ್ಯತೆಯನ್ನು ಬಯಸುವ ಕಲಾವಿದೆಯಾಗಿ ಖುಷಿ ತಂದಿದೆ. ಮುಂದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ಸೂಚನೆ ಇಲ್ಲ. ಹೇಗೆ ಬರುತ್ತೋ ಹಾಗೆ ಸ್ವೀಕರಿಸಲು ಸಿದ್ಧಳಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಸೋನು ಗೌಡ, ಚಿತ್ರನಟಿ


2020 ಎಂದ ತಕ್ಷಣ ನೆನಪಾಗುವುದೇ ಅಬ್ದುಲ್ ಕಲಾಂ ಅವರು. ಅವರು ಆ ವಿಶನ್ ಇಟ್ಟುಕೊಂಡು ಪುಸ್ತಕ ಬರೆದಿದ್ದರು. ಡೆವಲಪ್ ಇಂಡಿಯಾ ಬಗ್ಗೆ ಪುಸ್ತಕಗಳನ್ನು ಬರೆದಿದ್ದರು. ಅವರಿಗೆ ಒಂದು ದೊಡ್ಡ ಸಲಾಂ ಹೇಳುತ್ತಾ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷದಲ್ಲಿ `ಮುಗಿಲ್ ಪೇಟೆ’ ಸೇರಿದಂತೆ ಹೊಸ ನಿರ್ದೇಶಕರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನಗೆ ಯಾವತ್ತಿಗೂ ಸಿನಿಮಾದಲ್ಲಿ ಅವಕಾಶಗಳಿಗೆ ಕೊರತೆಯಾಗಿಲ್ಲ. ಒಳ್ಳೆಯ ಪಾತ್ರಗಳು ದೊರಕುತ್ತಲೇ ಇವೆ. ಇನ್ನು ನಮ್ಮ ಪಕ್ಷದ ವಿಚಾರಕ್ಕೆ ಬಂದರೆ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರದಲ್ಲಿ ಏನು ಜವಾಬ್ದಾರಿ ಸಿಗುತ್ತದೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯವಾಗಿ ನಾನು ಏನನ್ನೂ ಯೋಜನೆ ಹಾಕೋದಿಲ್ಲ. ಬಂದಿದ್ದನ್ನು ಹಾಗೆಯೇ ಸ್ವೀಕರಿಸಲು ಇಷ್ಟಪಡುತ್ತೇನೆ. ಪಾಸಿಟಿವ್ ಪಿಕ್ಚರ್ ಓದುಗರಿಗೆ ಎಲ್ಲರಿಗೂ ಶುಭಾಶಯಗಳು.
ತಾರಾ ಅನುರಾಧ, ಚಿತ್ರನಟಿ
`ವಿಷ್ಣುಜಯ’ ಚಿತ್ರವನ್ನು ಹೊಸ ವರ್ಷದಲ್ಲಿ, ಪ್ರೇಮಿಗಳ ದಿನಾಚರಣೆಯಂದು ತೆರೆಗೆ ತರುವ ಯೋಜನೆ ಹಾಕಿದ್ದೇವೆ. ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದು ಈಗಾಗಲೇ ಹೇಳಿರುವಂತೆ ಅದು ಧಾರವಾಡದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ.
ಈ ಸಿನಿಮಾ ಅಲ್ಲದೆ ಮುಂದಿನ ವರ್ಷ ಹೊಸದಾಗಿ ಮೂರು ಸಿನಿಮಾಗಳನ್ನು ಮಾಡುವ ಮಾತುಕತೆ ನಡೆದಿದೆ. ಅವುಗಳಲ್ಲಿ ಒಂದರಲ್ಲಿ ನನ್ನ ಮಗನೇ ಮತ್ತೆ ನಾಯಕನಾಗಲಿದ್ದಾನೆ. ಅದೇ ರೀತಿ ನನ್ನ ಒಬ್ಬ ಸ್ನೇಹಿತ ಕೂಡ ಮಗನನ್ನು ನಾಯಕನಾಗಿಸುವ ಯೋಜನೆ ಹಾಕಿದ್ದಾರೆ. ಯಾವ ಚಿತ್ರ ಯಾರು ನಿರ್ಮಿಸುತ್ತಾರೆ, ಉಳಿದ ಚಿತ್ರಗಳು ಯಾವ ನಾಯಕರಿಗಾಗಿ ಸಿದ್ಧವಾಗುತ್ತಿವೆ ಎನ್ನುವುದೆಲ್ಲ ಇನ್ನೂ ಪಕ್ಕ ಆಗಿಲ್ಲ. ಇವೆಲ್ಲದರ ಜತೆಗೆ ನಾನು ನಿರ್ಮಾಪಕರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇನೆ. ಆ ಹುದ್ದೆಯಲ್ಲಿದ್ದುಕೊಂಡು ಗಮನಾರ್ಹ ಕೆಲಸಗಳನ್ನು ನಿರ್ವಹಿಸುವ ಯೋಜನೆ ಹಾಕಿದ್ದೇನೆ. ಎಲ್ಲರಿಗೂ ಶುಭಾಶಯಗಳು.
ಕೆ. ಮಂಜು, ನಿರ್ಮಾಪಕರು

