`ಇವರು ಪವರ್ ಸ್ಟಾರ್ ಗೇನೇ ಗುರು’ ಎಂದರು ವಿಜಯ ರಾಘವೇಂದ್ರ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಫಿಟ್ನೆಸ್ ಸಾರುವ ನೈಜ ವಿಡಿಯೋಗಳ ಮೂಲಕ ಹಲವರಿಗೆ ಅಚ್ಚರಿಯಾಗುತ್ತಿರುತ್ತಾರೆ. ಡ್ಯಾನ್ಸ್, ನೃತ್ಯ, ಸಾಹಸ ಎಲ್ಲದರಲ್ಲಿಯೂ ಅವರು ತಮ್ಮ ಪವರ್ ತೋರಿಸುವಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ಆದರೆ ಅವರ ಈ ದೈಹಿಕ ಚಾಕಚಕ್ಯತೆಯ ಹಿಂದೆ ಅವರು ಕಲಿತಿರುವ ಕೇರಳದ ಸಮರ ಕಲೆ ಕಳರಿಪಯಟ್ಟಿನ ಪ್ರಭಾವ ಪ್ರಮುಖವಾಗಿದೆ. `ದೇಹಿ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಆ ಕಳರಿಪಯಟ್ ಗುರುಗಳಾದ ರಂಜನ್ ಮುಲ್ಲರತ್ತ್ ರನ್ನು ನಟ ವಿಜಯರಾಘವೇಂದ್ರ ಅವರು ಪರಿಚಯಿಸಿದರು.
ಕಿಶೋರ್ ಮತ್ತು ಉಪಾಸನಾ ಪ್ರಧಾನ ಪಾತ್ರದಲ್ಲಿರುವ ದೇಹಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಬಳಿಕ ವಿಜಯ ರಾಘವೇಂದ್ರ ಅವರು ಮಾತನಾಡುತ್ತಿದ್ದರು. ``ಮೂಲತಃ ಕಳರಿ ಗುರುಗಳಾದ ರಂಜನ್ ಮುಲ್ಲರತ್ತ್ ನಿರ್ಮಿಸಿರುವ `ದೇಹಿ’ ಚಿತ್ರ ಕೂಡ ಕಳರಿ ವಿದ್ಯೆಯ ಕುರಿತಾದ ಕತೆಯನ್ನೇ ಹೊಂದಿದೆ. ಅವರು ನನಗೆ ಹಳೆಯ ಪರಿಚಯ. ನಾಗಾಭರಣ ಅವರ ನಿರ್ದೇಶನದಲ್ಲಿ `ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಪರಿಚಯವಾಗಿತ್ತು. ಅವರಿಗೆ ಮತ್ತು ದೇಹಿ ಚಿತ್ರತಂಡಕ್ಕೆ ಶುಭವಾಗಲಿ’’ ಎಂದು ಅವರು ಹಾರೈಸಿದರು.



ಇದು ಕಳರಿ ಪಯಟ್ಟು ಎಂಬ ಭಾರತೀಯ ಕಲೆಯನ್ನು ಆಧಾರಿಸಿರುವ ಕತೆ. ಹುಡುಗಿಯೊಬ್ಬಳ ಬದುಕಿನಲ್ಲಿ ನಡೆಯಬಾರದ ಘಟನೆಗಳು ನಡೆದಾಗ ಅದರಿಂದ ಆಕೆ ಕಳರಿಯ ಮೂಲಕ ಹೇಗೆ ಹೊರಗೆ ಬರುತ್ತಾಳೆ ಎನ್ನುವುದೇ ಚಿತ್ರದ ಕತೆ ಎಂದರು ಚಿತ್ರದ ನಾಯಕಿ ಉಪಾಸನಾ. ಹಂಪಿ, ಬೇಲೂರು ಮೊದಲಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಳರಿಯ ಮೂವತ್ತರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವಿಮನ್ ಎಂಪವರ್ಮೆಂಟ್ ಬಗ್ಗೆ ಸದ್ದು ಮಾಡುತ್ತಿರುವ ಸದ್ಯದ ವಿಚಾರ ಕೂಡ ಚಿತ್ರದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಗಾಯಕಿ ಮೇಘನಾ ತಾವು ಹಿಂದೆಯೂ ವೇದಿಕೆ ಮೇಲೆ ಕಳರಿ ಪರ್ಫಾರ್ಮನ್ಸ್ ಗೆ ಹಾಡಿದ್ದನ್ನು ನೆನಪಿಸಿಕೊಂಡರು. ಈಗ ಅದೇ ತಂಡದೊಂದಿಗೆ ಸಿನಿಮಾದಲ್ಲಿ ಕೂಡ ಗಾಯಕಿಯಾಗಿರುವುದು ಖುಷಿಯಾಗಿದೆ ಎಂದರು. ಸಂಗೀತ ನಿರ್ದೇಶಕ ನೊಬಿನ್ ಇಂಥ ಚಿತ್ರಕ್ಕೆ ಪ್ರಥಮ ಬಾರಿಗೆ ಸಂಗೀತ ನೀಡಿರುವುದಾಗಿ ಹೇಳಿದರು. ನಿರ್ಮಾಪಕ ರಂಜನ್ ಮಾತನಾಡಿ, ಯಾವುದೇ ಆರ್ಟ್ ಫಾರ್ಮ್ ಕಲಾವಿದರ ಆತ್ಮ ಇದ್ದ ಹಾಗೆ. ಈ ಚಿತ್ರದಲ್ಲಿ ಕಳರಿಯೇ ಆತ್ಮ ಎಂದರು. ಚಿತ್ರಕ್ಕೆ ಈಗಾಗಲೇ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ ಶ್ರೇಷ್ಠ ಸಂಗೀತ ನಿರ್ದೇಶಕ, ಶ್ರೇಷ್ಠ ಛಾಯಾಗ್ರಾಹಕ, ಶ್ರೇಷ್ಠ ಮಹಿಳಾ ಥೀಮ್ ಹೊಂದಿರುವ ಚಿತ್ರ, ಶ್ರೇಷ್ಠ ಪ್ರಯೋಗಾತ್ಮಕ ಚಿತ್ರ ಮತ್ತು ಶ್ರೇಷ್ಠ ನಟಿ ಸೇರಿದಂತೆ ಆರು ವಿಭಾಗಗಳಲ್ಲಿ ಪ್ರಶಸ್ತಿ ದೊರಕಿರುವುದಾಗಿ ತಿಳಿಸಲಾಯಿತು. ಸಹ ನಿರ್ಮಾಪಕರಾದ ವಿಜಯಕುಮಾರ್,,
ಲಕ್ಷ್ಮೀ ನಾರಾಯಣ ಅವರು ಉಪಸ್ಥಿತರಿದ್ದರು. ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನ, ಆನಂದ ಸುಂದರೇಶ್ ಛಾಯಾಗ್ರಹಣವಿದೆ. ಕತೆ, ಚಿತ್ರಕತೆ, ಸಂಭಾಷಣೆ ಬಿ ಜಯಮೋಹನ್ ರಚಿಸಿದ್ದಾರೆ. ನಾಯಕ ಕಿಶೋರ್ ಮತ್ತು ನಿರ್ದೇಶಕ ಧನ ಅವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.