ಬಿಗ್ ಬಾಸ್ 7ನೇ ಸೀಸನ್ ಸ್ಪರ್ಧಿಗಳ ಗೃಹ ಪ್ರವೇಶ!
ಬಿಗ್ ಬಾಸ್ ನ ಮಹಾಮನೆಯೊಳಗೆ ಏಳನೇ ಸೀಸನ್ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಮೊದಲ ಸಂಚಿಕೆ ಭಾನುವಾರ ಸಂಜೆ ಪ್ರಸಾರವಾಗಿದ್ದು, ಎಲ್ಲ 18 ಮಂದಿಗಳ ದರ್ಶನವಾಗುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಕುರಿ ಪ್ರತಾಪ್

ತಮ್ಮ ನಿರೂಪಣೆಯ ಕಾರ್ಯಕ್ರಮದ ಮೂಲಕ ಕುರಿ ಪ್ರತಾಪ್ ಎಂದು ಹೆಸರು ಗಳಿಸಿದ ಪ್ರತಾಪ್ ಚಿತ್ರನಟರಾಗಿ ಮಾತ್ರವಲ್ಲ, ಕಲರ್ಸ್ ನ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಸೃಜನ್ ಜತೆಗೆ ಕಾಮಿಡಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಪಡೆದವರು. ಏಳನೇ ಸೀಸನ್ ನ ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟ ಅವರು ತಮ್ಮ ತಮಾಷೆಯ ಮೂಲಕವೇ ಜನ ಮನ ಗೆಲ್ಲಬಹುದೆನ್ನುವ ನಿರೀಕ್ಷೆ ಸೃಷ್ಟಿದ್ದಾರೆ.
ಪ್ರಿಯಾಂಕಾ

ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಹೋದವರು ಪ್ರಿಯಾಂಕಾ. `ಅಗ್ನಿಸಾಕ್ಷಿ’ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರವನ್ನು ನಿಭಾಯಿಸುತ್ತಿರುವ ಪ್ರಿಯಾಂಕಾ ದಿಢೀರನೆ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ನೀಡಿದ್ದಾರೆ.
ರವಿ ಬೆಳಗೆರೆ

ಹಾಯ್ ಬೆಂಗಳೂರ್ ಪತ್ರಿಕೆಯ ಸ್ಥಾಪಕ, ಸಂಪಾದಕ ಪತ್ರಕರ್ತ ರವಿ ಬೆಳಗೆರೆಯವರು ಮೂರನೇ ಸ್ಪರ್ಧಿಯಾಗಿ ಬಂದರು. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ತಮ್ಮ ಪುತ್ರಿ ಭಾವನಾ ಜತೆಗೆ ವೇದಿಕೆಗೆ ಬಂದ ರವಿ ಬೆಳಗೆರೆಯವರು ಮನೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆ ಕುರಿ ಪ್ರತಾಪ್ ಅವರ ಹೆಗಲನ್ನು ಆಸರೆಯಾಗಿ ಇರಿಸಿಕೊಂಡೇ ಸುತ್ತಾಡಿದರು. ಕ್ಯಾಮೆರಾ ಮುಂದೆ ಹೋಗಿ ಸಿಗರೇಟ್ ಕಳಿಸುವಂತೆ ಬಿಗ್ ಬಾಸ್ ನಲ್ಲಿ ವಿನಂತಿಸಿದ ಅವರು, ಸ್ವಲ್ಪ ಹೊತ್ತಿ ನ ಬಳಿಕ ನಾಪತ್ತೆಯಾದವರು ಎಪಿಸೋಡ್ ಮುಗಿಯುವ ತನಕವೂ ಕಾಣಿಸಲಿಲ್ಲ.
ಚಂದನಾ ಅನಂತಕೃಷ್ಣ

ಇವರು `ರಾಜಾ ರಾಣಿ’ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡವರು. ಕಡ್ಡಿಪುಡಿ ಸಿನಿಮಾದ ಸೌಂದರ್ಯ ಸಮರಾ.. ಎನ್ನುವ ಹಾಡಿಗೆ ಹೆಜ್ಜೆಯಿಟ್ಟು ವೇದಿಕೆಗೆ ಬಂದ ಚಂದನಾ ಬಿಗ್ ಬಾಸ್ ಮನೆಯಲ್ಲಿ ತಾವು ಸ್ಪರ್ಧೆಯ ಅಂತಿಮ ದಿನಗಳ ತನಕ ಇರುವುದಾಗಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ವಾಸುಕೀ ವೈಭವ್

ಕನ್ನಡ ಚಿತ್ರರಂಗದಲ್ಲಿ ಯುವ ಗಾಯಕ, ಸಂಗೀತ ನಿರ್ದೇಶಕ ಮತ್ತು ಸಾಹಿತಿಯಾಗಿ ಗುರುತಿಸಿಕೊಂಡವರು ವಾಸುಕೀ ವೈಭವ್. ಕಳೆದ ವರ್ಷ ತೆರೆಕಂಡು ಪ್ರಶಸ್ತಿ ಮತ್ತು ಪ್ರಸಿದ್ಧಿಗಳನ್ನು ಪಡೆದ `ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಮತ್ತು `ಒಂದಲ್ಲ ಎರಡಲ್ಲ’ ಚಿತ್ರಗಳಿಗೆ ಸಂಗೀತ ನೀಡಿ ಗಮನ ಸೆಳೆದಿದ್ದರು.
ದೀಪಿಕಾ ದಾಸ್

ನಾಗಿಣಿ ಧಾರಾವಾಹಿಯ ಮೂಲಕ ಜನಪ್ರಿಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ದೀಪಿಕಾ ದಾಸ್ ಒಂದೆರಡು ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟಿದ್ದಾರೆ.
ಜೈ ಜಗದೀಶ್

ಹಿರಿಯ ನಟ, ನಿರ್ಮಾಪಕ ಜೈ ಜಗದೀಶ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ. ಅವರನ್ನು ವೇದಿಕೆಗೆ ಕರೆದು ತರಲು ಅವರ ಪುತ್ರಿಯರಾದ ವೈಭವಿ, ವೈಸಿರಿ ಮತ್ತು ವೈನಿಧಿ ಸೇರಿ ನೃತ್ಯವಾಡಿದ್ದು ವಿಶೇಷವಾಗಿತ್ತು. ಪತ್ನಿ ವಿಜಯಲಕ್ಷ್ಮೀ ಸಿಂಗ್ ಅವರು ಈ ಸಂದರ್ಭದಲ್ಲಿ ವೇದಿಕೆಗೆ ಬಂದು ಶುಭ ಹಾರೈಸಿ ಕಳಿಸಿಕೊಟ್ಟರು.
ಗುರುಲಿಂಗ ಸ್ವಾಮಿ

ಜ್ಯೋತಿಷಿಗಳು, ಸ್ವಾಮೀಜಿ ಎಂದು ಕರೆಸಿಕೊಂಡವರೆಲ್ಲ ಈ ಹಿಂದೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದನ್ನು ಕಂಡಿದ್ದೇವೆ. ಆದರೆ ಈ ಬಾರಿ ಮೊದಲ ಬಾರಿಗೆ ಶರಣರೊಬ್ಬರು ಬಿಗ್ಬಾಸ್ ಮನೆಗೆ ಕಾಲಿರಿಸಿದ್ದಾರೆ. ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮಿಯವರು ವೇದಿಕೆ ಮೇಲೆ ಬಂದು ಸುದೀಪ್ ಅವರ ಮನವಿಯ ಮೇರೆಗೆ ತರವಲ್ಲ ತಗಿ ನಿನ್ನ ತಂಬೂರಿ ಎನ್ನುವ ಶಿಶುನಾಳ ಷರೀಫರ ಕೃತಿಗೆ ದನಿಯಾದರು. ತಾವು ಸ್ಪರ್ಧೆಯಲ್ಲಿ ವಿಜೇತರಾಗಿ ಆ ಹಣವನ್ನು ಉತ್ತ ರ ಕರ್ನಾಟಕದಲ್ಲಿ ನೆರೆ ಹಾವಳಿಗೆ ತುತ್ತಾದವರಿಗೆ ನೀಡಲು ಬಂದಿರುವುದಾಗಿ ಅವರು ತಿಳಿಸಿದರು.
ಭೂಮಿ ಶೆಟ್ಟಿ

ಕಲರ್ಸ್ ನ ಮತ್ತೊಂದು ಜನಪ್ರಿಯ ಧಾರಾವಾಹಿಯಾದ `ಕಿನ್ನರಿ’ಯಲ್ಲಿ ಮಣಿಯಾಗಿ ಗುರುತಿಸಿಕೊಂಡವರು ಕುಂದಾಪುರದ ಹುಡುಗಿ ಮಣಿ ಶೆಟ್ಟಿ. ದಿನವೂ ಊಟದ ಜತೆಗೆ ಬಂಗುಡೆ ಮೀನು ತಿಂದೇ ಜೀವನ ನಡೆಸಿ ಅಭ್ಯಾಸ ಇರುವುದಾಗಿ ಹೇಳಿರುವ ಭೂಮಿ ಶೆಟ್ಟಿ, ಬಿಗ್ ಬಾಸ್ ಮನೆಯ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.
ಕಿಶನ್

ಹಿಂದಿ ರಿಯಾಲಿಟಿ ಶೋಗಳಲ್ಲಿ ನೃತ್ಯ ಸ್ಪರ್ಧಿಯಾಗಿ, ವಿಜೇತರಾಗಿ ಗುರುತಿಸಿಕೊಂಡಿರುವ ಹುಡುಗ ಕಿಶನ್ ಅವರು ಹೇಳಿರುವ ಪ್ರಕಾರ ತಾವು ಕನ್ನಡಿಗರಾದರೂ ಬಾಲ್ಯದಿಂದಲೇ ಮುಂಬೈ ಸೇರಿಕೊಂಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಮೂಡಿದೆ. ಅದಕ್ಕೆ ಬಿಗ್ ಬಾಸ್ ಮನೆ ತಕ್ಕ ವೇದಿಕೆಯಾಗಲಿದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ. ಆಕರ್ಷಕ ನೃತ್ಯದ ಮೂಲಕವೇ ವೇದಿಕೆಗೆ ಎಂಟ್ರಿ ನೀಡಿದ್ದು ಅವರ ವಿಶೇಷತೆಯಾಗಿತ್ತು.
ದುನಿಯಾ ರಶ್ಮಿ

ದುನಿಯಾ ಚಿತ್ರದ ಮೂಲಕ ನಾಯಕಿಯಾಗಿ ಜನಪ್ರಿಯತೆ ಪಡೆದ ದುನಿಯಾ ರಶ್ಮಿ, ಆ ಬಳಿಕ ಯಾಕೋ ಯಶಸ್ಸು ಕಾಣಲೇ ಇಲ್ಲ. ಆದರೆ ಅವರು ತಮ್ಮ ಪ್ರಯತ್ನ ಮಾತ್ರ ಕೈ ಬಿಡಲೇ ಇಲ್ಲ. ವರ್ಕೌಟ್ ಮಾಡಿಕೊಂಡು ತೆಳ್ಳಗೆ, ಬೆಳ್ಳಗೆ ಆಗಿ ಮರಳಿ ಬಂದು ಒಂದೆರಡು ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದರೂ ಅವುಗಳು ಕೂಡ ಯಶಸ್ಸು ನೀಡಲಿಲ್ಲ. ರಶ್ಮಿ ವೇದಿಕೆಗೆ ಪ್ರವೇಶಿಸುವ ಮೊದಲು ದುನಿಯಾ ಚಿತ್ರದ `ನೋಡಯ್ಯ ಕ್ವಾಟೇ ಲಿಂಗವೇ..’ ಹಾಡನ್ನು ಮೂಲಗಾಯಕಿ ಎಂ.ಡಿ ಪಲ್ಲವಿ ಬಂದು ಆಲಾಪಿಸಿದರು.
ಚಂದನ್ ಆಚಾರ್

ಕಿರಿಕ್ ಪಾರ್ಟಿ ಚಿತ್ರದಲ್ಲಿ ಕರ್ಣನಾಗಿ ಪಾತ್ರವಹಿಸಿದ ರಕ್ಷಿತ್ ಶೆಟ್ಟಿಯವರ ಸ್ನೇಹಿತರ ಬಳಗದಲ್ಲಿ ಕಾಣಿಸಿಕೊಂಡವರು ಚಂದನ್ ಆಚಾರ್. ಬಳಿಕ `ಕೆಮಿಸ್ಟ್ರೀ ಆಫ್ ಕರಿಯಪ್ಪ’ ಸಿನಿಮಾದಲ್ಲಿ ಪ್ರಧಾನ ಪಾತ್ರವಾಗಿಯೂ ನಟಿಸಿದರು. ಸುಳ್ಳು ಹೇಳಿ ನಂಬಿಸುವ ಕಲೆ ತನ್ನಲ್ಲಿದೆ ಎನ್ನುವ ನಂಬಿಕೆ ಹೊಂದಿರುವ ಚಂದನ್ ಆಚಾರ್ ಬಿಗ್ ಬಾಸ್ ಮನೆಯ ಹನ್ನೆರಡನೇ ಸ್ಪರ್ಧಿ.
ಸುಜಾತಾ ಅಕ್ಷಯ್

ರಾಧಾ ರಮಣ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ಸಿತಾರ ದೇವಿ ಎನ್ನುವ ಖಳನಾಯಕಿಯ ಪಾತ್ರವನ್ನು ನಿಭಾಯಿಸಿ ಜನಪ್ರಿಯತೆ ಪಡೆದವರು ಸುಜಾತಾ. ಅದಕ್ಕೂ ಮೊದಲೇ ಕಿರುತೆರೆಯಲ್ಲಿ ನಿರೂಪಕರಾಗಿಯೂ ಗಮನ ಸೆಳೆದಿರುವ ಸುಜಾತಾ ಸ್ಟಾರ್ ಸುವರ್ಣ ವಾಹಿನಿಗೆ `ಅಡುಗೆ ದರ್ಬಾರ್’ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ತಮ್ಮದು ಯಾವಾಗಲೂ ನೇರವಾದ ಮಾತುಗಳಾಗಿರುತ್ತವೆ ಎನ್ನುವುದು ಅವರ ಅನಿಸಿಕೆ. ಸುಜಾತರನ್ನು ವೇದಿಕೆಗೆ ಕರೆದು ತರಲು `ಹೂವೇ ಹೂವೇ’ ಹಾಡಿನ ಜತೆಗೆ ಪ್ರಿಯಾಂಕ ಉಪೇಂದ್ರ ಬಂದು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ರಾಜು ತಾಳಿಕೋಟೆ

ಸಿನಿಮಾ ಹಾಗೂ ರಂಗಭೂಮಿಯ ಪ್ರತಿಭೆ ರಾಜು ತಾಳಿಕೋಟೆ. ಅವರು ತಮ್ಮ ಉತ್ತರ ಕರ್ನಾಟಕದ ಸೊಗಡು ತುಂಬಿರುವ ಭಾಷೆಯಿಂದಲೇ ಜನಪ್ರಿಯರು. ದ್ರಾಕ್ಷಿ ಕೃಷಿ ಮೂಲಕ ಕೃಷಿಕರಾಗಿ ಕೂಡ ಗುರುತಿಸಿಕೊಂಡಿರುವ ರಾಜು ತಾಳಿಕೋಟೆಯವರು ರೇಶ್ಮಾ ಹೆಸರಿನ ತಮ್ಮ ಇಬ್ಬರು ಪತ್ನಿಯರು, ಮಕ್ಕಳು ಮತ್ತು ಮರಿಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಚೈತ್ರಾ ವಾಸುದೇವ್ ಮತ್ತು ಚೈತ್ರಾ ಕೋಟೂರ್


ಇಬ್ಬರ ಹೆಸರು ಕೂಡ ಚೈತ್ರಾ ಆಗಿರುವುದರಿಂದ ಇಬ್ಬರನ್ನೂ ಒಂದೇ ಬಾರಿ ಬಿಗ್ ಬಾಸ್ ಮನೆಗೆ ಕಳಿಸಿಕೊಡಲಾಯಿತು.
ಚೈತ್ರಾ ವಾಸುದೇವ್ ಇವೆಂಟ್ ಫ್ಯಾಕ್ಟರಿ ಮೂಲಕ ಕಾರ್ಯಕ್ರಮಗಳನ್ನು ನಡೆಸಿಕೊಡುವ, ಫಿಟ್ನೆಸ್ ಮತ್ತು ಫ್ಯಾಷನ್ ಪ್ರಿಯ ನಿರೂಪಕಿ. ಬ್ಯೂಟಿ ಟಿಪ್ಸ್, ಅಡುಗೆ ಬಗ್ಗೆಯೂ ಚೈತ್ರಾ ವಿಡಿಯೋ ಮಾಡಿ ಜನಪ್ರಿಯರು.
ಇನ್ನು ಚೈತ್ರಾ ಕೋಟೂರು ಇತ್ತೀಚೆಗಷ್ಟೇ ಬಿಡುಗಡೆಯಾದ `ಸೂಜಿದಾರ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುವ ಮೂಲಕ ಗಮನ ಸೆಳೆದಿದ್ದರು. ಸಂಭಾಷಣಾಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರ ರಂಗಭೂಮಿಯಲ್ಲಿಯೂ ಪರಿಚಿತರು.
ಶೈನ್ ಶೆಟ್ಟಿ

ಲಕ್ಷ್ಮೀ ಬಾರಮ್ಮ ಮತ್ತು ಮೀರಾ ಮಾಧವ ಎನ್ನುವ ಎರಡು ಧಾರಾವಾಹಿಗಳಿಂದ ಜನಪ್ರಿಯತೆ ಪಡೆದುಕೊಂಡಿರುವ ಶೈನ್ ಶೆಟ್ಟಿ ಕಿರುತೆರೆ ತೊರೆದು ಬೆಳ್ಳಿ ತೆರೆಯಲ್ಲಿ ಗುರುತಿಸಬೇಕು ಎನ್ನುವ ಕನಸು ಇರಿಸಿಕೊಂಡವರು. ಇದರ ನಡುವೆ ಮೊಬೈಲ್ ಕ್ಯಾಂಟೀನ್ ಮಾಡಿಯೂ ವಿಭಿನ್ನತೆ ತೋರಿಸಿದವರು.
ಹರೀಶ್ ರಾಜ್

ಈ ಬಾರಿ ಸ್ಪರ್ಧಿಗಳಾಗಿ ಬ ಿಸ್ ಬಾಸ್ ಮನೆಗೆ ಹೋಗುವವರು ಹದಿನೇಳು ಮಂದಿ ಎಂದು ಅಧಿಕೃತ ಘೋಷಣೆ ನಡೆಸಲಾಗಿತ್ತು. ಆದರೆ ವೇದಿಕೆಯ ಮೇಲೆ 18ನೇ ಸ್ಪರ್ಧಿಯಾಗಿ ಚಿತ್ರ ನಟ ಹರೀಶ್ ರಾಜ್ ಅವರನ್ನು ಆಹ್ವಾನಿಸಲಾಯಿತು. ಅವರ ಕೈಗೆ ರೀಲ್ ತುಂಬಿರುವ ಕ್ಯಾಮೆರಾ ನೀಡಿ ಮನೆಯೊಳಗೆ ಇದ್ದಷ್ಟು ದಿನ ನಿತ್ಯವೂ ಒಂದರಂತೆ ಫೊಟೋ ತೆಗೆದಿರಿಸಲು ಹೇಳಲಾಯಿತು.
ಹದಿನೆಂಟು ಮಂದಿ ಸ್ಪರ್ಧಿಗಳಿಂದ ತುಂಬಿದ ಮನೆಯೊಳಗೆ ಪರಸ್ಪರ ಪರಿಚಯ, ಮಾತುಕತೆ ಮನೆಯ ಕುರಿತಾದ ಕುತೂಹಲದ ಮಾತುಗಳು ಆರಂಭವಾದವು.