ಮೊದಲ ವಾರದ ಕ್ಯಾಪ್ಟನ್ ಭೂಮಿ ಶೆಟ್ಟಿ
ಬಿಗ್ ಬಾಸ್ ಮನೆಯೊಳಗೆ ಎಲ್ಲ ಸದಸ್ಯರು ಪ್ರವೇಶಿಸಿ ಮುಗಿಯುವ ಮೊದಲೇ ರವಿ ಬೆಳಗೆರೆ ನಾಪತ್ತೆಯಾದ ಹಾಗಿತ್ತು. ಅಲ್ಲದೆ ಅನಾರೋಗ್ಯದ ಕಾರಣದಿಂದಾಗಿ ಅವರು ಆ ಮನೆಯಿಂದ ಹೊರಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಹಾಗಾಗಿ ಸೋಮವಾರದ ಸಂಚಿಕೆಯಲ್ಲಿ ಆ ಬಗ್ಗೆ ತಿಳಿಯುವ ಕುತೂಹಲದಿಂದ ಕಾದಿದ್ದ ಪ್ರೇಕ್ಷಕರಿಗೆ ಕಂಡದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ದಿನ-1
ಬಿಗ್ ಬಾಸ್ ಮನೆಯ ಮೊದಲ ದಿನ. ಬೆಳ್ ಬೆಳಗ್ಗೆಯೇ ಬೆಳಗೆರೆಯವರಿಗೆ ದುನಿಯಾ ರಶ್ಮಿಯವರು ಕಾಫಿ ಮಾಡಿ ಕೊಡುತ್ತಾರೆ. ಬಳಿಕ ಸ್ವಾಮೀಜಿ, ದೀಪಿಕಾ ದಾಸ್, ರಶ್ಮಿ ಮೊದಲಾದವರ ಮಾತುಕತೆ ಗಾರ್ಡನ್ ಏರಿಯಾದಲ್ಲಿ ನಡೆಯುತ್ತದೆ. ಇನ್ನೂ ಮಲಗಿದ್ದ ಕುರಿ ಪ್ರತಾಪ್ ನ ಬಳಿಗೆ ಬರುವ ರವಿ ಬೆಳಗೆರೆ, ಆತನನ್ನು ಎಬ್ಬಿಸಿ ಸಹಾಯ ಕೇಳುತ್ತಾರೆ. ತಮ್ಮ ಸೂಟ್ ಕೇಸ್ ಓಪನ್ ಮಾಡಲು ಹಾಗೂ ಅದರಿಂದ ಮಾತ್ರೆಗಳನ್ನು ಹುಡುಕಿ ಕೊಡಲು ಹೇಳುತ್ತಾರೆ.
ಅಷ್ಟರಲ್ಲಿ ಬಿಗ್ ಬಾಸ್ ರೇಡಿಯೋ ಮಾರ್ನಿಂಗ್ ವಿಶ್ ಮಾಡುತ್ತದೆ. ದೀಪಿಕಾ ದಾಸ್ ಜತೆ ಮಾತನಾಡಿ ವಿವರವಾಗಿ ಪರಿಚಯ ಮಾಡಿಕೊಳ್ಳುತ್ತಾರೆ.
ಮನೆ ಮಂದಿ ದೇವರನ್ನು ಪ್ರಾರ್ಥಿಸುತ್ತಾರೆ. ವಾಸುಕೀ ವೈಭವ್ ತಾಯಿಶಾರದೆ ಲೋಕ ಪೂಜಿತೆ ಗೀತೆ ಹಾಡುತ್ತಾರೆ.
ಮಧ್ಯಾಹ್ನ 12 ಗಂಟೆ. ಬಿಗ್ ಬಾಸ್ ಧ್ವನಿ
ಬಿಗ್ ಬಾಸ್ ಹಿಂದಿನ ದಿನ ಆದೇಶಿಸಿದ ಪ್ರಕಾರ ಮನೆಯ ಕ್ಯಾಪ್ಟನ್ ಆಗಲು ಮನೆ ಮಂದಿ ಆರಿಸಿದ್ದ ಮೂರು ಮಂದಿಯ ಹೆಸರನ್ನು ಸುಜಾತ ಅಕ್ಷಯ್ ಹೇಳುತ್ತಾರೆ. ಹಾಗೆ ಪ್ರತಾಪ್, ಕಿಶನ್ ಮತ್ತು ಭೂಮಿಯವರಿಗೆ ಕ್ಯಾಪ್ಟನ್ ಆಯ್ಕೆಯ ಟಾಸ್ಕ್ ಎದುರಿಸಬೇಕಾಗುತ್ತದೆ.
ಮಧ್ಯಾಹ್ನ2.10
ಟಾಸ್ಕ್ ಶುರು. ಗಾರ್ಡನ್ ಏರಿಯಾದಲ್ಲಿದ್ದ ಮೂರು ಪೆಟ್ಟಿಗೆಗಳ ಮುಂದೆ ಮೂರು ಮಂದಿ ನಿಲ್ಲುತ್ತಾರೆ. ಭೂಮಿ ತೆರೆಯುವ ಪೆಟ್ಟಿಗೆಯಲ್ಲಿನ ಚೀಟಿ ಪ್ರಕಾರ ಆಕೆಗೆ ಕ್ಯಾಪ್ಟನ್ ಪಟ್ಟ ದೊರಕುತ್ತದೆ. ಪ್ರತಾಪ್ ತೆರೆದ ಪೆಟ್ಟಿಗೆ ಆತನನ್ನು ನೇರವಾಗಿ ನಾಮಿನೇಟ್ ಆಗಿರುವುದಾಗಿ ತಿಳಿಸುತ್ತದೆ. ಕಿಶನ್ ಗೆ ಸಿಕ್ಕ ಚೀಟಿಯ ಪ್ರಕಾರ ಆತ ಈ ವಾರದ ನಾಮಿನೇಟ್ ಪ್ರಕ್ರಿಯೆಯಿಂದ ಹೊರಗೆ ಉಳಿದಿರುವುದಾಗಿ (ಇಮ್ಯುನಿಟಿ) ಬಿಗ್ ಬಾಸ್ ತಿಳಿಸುತ್ತಾರೆ.
ಅಪರಾಹ್ನ 3.00
ಡೈನಿಂಗ್ ಟೇಬಲ್ ಮುಂದೆ ಸದಸ್ಯರು ಊಟಕ್ಕೆ ಕುಳಿತಿರುತ್ತಾರೆ. ಯಾರಾದರೂ ಹಾಡು ಹೇಳುವಂತೆ ರವಿಬೆಳಗೆರೆ ಆಹ್ವಾನ ನೀಡುತ್ತಾರೆ. ಹಾಗೆ ಚಂದನ್ ಆಚಾರ್ ಗೀತೆಯೊಂದನ್ನು ಹಾಡುತ್ತಾರೆ. ಬಿಗ್ ಬಾಸ್ ವತಿಯಿಂದ ಕ್ಯಾಪ್ಟನ್ ಗೆ ಹೂಗುಚ್ಛ, ಕೈಗೊಂದು ಬ್ಯಾಂಡ್ ಮತ್ತು ಮಗ್ ಕೊಡುಗೆಯಾಗಿ ಬರುತ್ತದೆ.
ಸಂಜೆ 4.20
ಮನೆಮಂದಿಗೆ ಚಟುವಟಿಕೆ
ದಿನಬಳಕೆಯ ವಸ್ತುಗಳನ್ನು ಗಾರ್ಡನ್ ಏರಿಯಾದಲ್ಲಿ ಇಟ್ಟಿರುತ್ತಾರೆ. ಅದನ್ನು ತರಲು ಬಿಗ್ ಬಾಸ್ ನೀಡಿದ ಟಾಸ್ಕ್ ಮಾಡಬೇಕಾದ ಸಂದರ್ಭದಲ್ಲಿ ಮಳೆ ಸುರಿಯುತ್ತದೆ. ಹಾಗಾಘಿ ಮಳೆ ನಿಲ್ಲುವ ತನಕ ಚಂದನ ಹಾಗೂ ಕಿಶನ್ ರಿಂದ ಮನೆ ಮಂದಿ ಒಂದು ಡ್ಯಾನ್ಸ್ ಮಾಡಿಸುತ್ತಾರೆ. ಚೈತ್ರಾ ಹಾಗೂ ದೀಪಿಕಾ ರಿಂದಲೂ ನೃತ್ಯ ನಡೆಯುತ್ತದೆ. ಕ್ಯಾಪ್ಟನ್ ಭೂಮಿ ರವಿಬೆಳಗೆರೆಯ ಜತೆ ಸೇರಿಕೊಂಡು ನೃತ್ಯಕ್ಕೆ ಹೆಜ್ಜೆ ಹಾಕಿಸುವ ಪ್ರಯತ್ನ ಪಡುತ್ತಾರೆ.
ಮಳೆ ನಿಂತ ಬಳಿಕ ನಡೆದ ಟಾಸ್ಕ್ ನಲ್ಲಿ ಚಂದನ್ ಮತ್ತು ಶೈನ್ ಶೆಟ್ಟಿ ಆರಂಭದಲ್ಲಿ ಪಾಲ್ಗೊಂಡರೆ ಬಳಿಕ ಕಿಶನ್ ಮತ್ತು ಪ್ರಿಯಾಂಕ, ದೀಪಿಕಾ ಮತ್ತು ವಾಸುಕಿ , ರಶ್ಮಿ ಮತ್ತು ಚಂದನಾ, ಪ್ರತಾಪ್ ಮತ್ತು ಚೈತ್ರ ವಾಸುದೇವನ್ ಪಾಲ್ಗೊಳ್ಳುತ್ತಾರೆ.
ಕ್ಯಾಪ್ಟನ್ ಆಗಿ ಆಯ್ಕೆಯಾದ ಭೂಮಿ ಶೆಟ್ಟಿಗೆ ತಂದೆಯ ಮಾತು ಕೇಳುವ ಅವಕಾಶ ಸಿಗುತ್ತದೆ. ಬಳಿಕ ನಡೆಯುವ ನಾಮಿನೇಶನ್ ಪ್ರಕ್ರಿಯೆಯಲ್ಲಿ ಬಿದ್ದಂಥ ಸದಸ್ಯರ ಸರಾಸರಿ ಮತಗಳ ಪ್ರಕಾರ ಚೈತ್ರಾ ಕೋಟೂರು, ಗುರುಲಿಂಗ ಸ್ವಾಮಿ, ರಾಜು ತಾಳಿಕೋಟೆ, ಚೈತ್ರಾ ವಾಸುದೇವನ್, ರವಿ ಬೆಳಗೆರೆಯ ಹೆಸರುಗಳು ಎಲಿಮಿನೇಶನ್ ಗೆ ಆಯ್ಕೆಯಾಗುತ್ತವೆ. ಇದರ ನಡುವೆ ಕುರಿ ಪ್ರತಾಪ್ ಟಾಸ್ಕ್ ನಿಂದಾಗಿ ನೇರವಾಗಿ ಆಯ್ಕೆಯಾಗಿರುತ್ತಾರೆ.
ಮನೆಯೊಳಗಿನ ಸ್ವಚ್ಛತೆಯ ಬಗ್ಗೆ ಮಾತನಾಡುವ ಗುರುಲಿಂಗ ಸ್ವಾಮಿಗಳು ಅಡುಗೆಮನೆಗೆ ಚಪ್ಪಲಿ ಹಾಕದಿರುವಂತೆ ಮತ್ತು ಬೆಳಗ್ಗೆದ್ದು ಸ್ನಾನ ಮಾಡಿದ ಬಳಿಕವೇ ಅಡುಗೆ ಮನೆಗೆ ಪ್ರವೇಶಿಸುವಂತೆ ವಿನಂತಿಸುತ್ತಾರೆ.
ರಾತ್ರಿ ಗಾರ್ಡನ್ ಏರಿಯಾದಲ್ಲಿ ರಾಜುತಾಳಿಕೋಟೆ, ಚೈತ್ರಾ ಕೋಟೂರು, ಮತ್ತು ಸ್ವಾಮೀಜಿ ತಮ್ಮ ನಾಮಿನೇಶನ್ ಬಗ್ಗೆ ಮಾತನಾಡುತ್ತಾರೆ. ಆಯ್ಕೆ ಮಾಡಲೇಬೇಕಾದ ಕಾರಣ ಒಂದು ಹೆಸರನ್ನು ಹೇಳಿರುತ್ತಾರೆಯೇ ಹೊರತು, ಮೊದಲ ವಾರದ ಆಯ್ಕೆಗೆ ಬಲವಾದ ಕಾರಣಗಳೇನೂ ಇರುವುದಿಲ್ಲ ಎಂದು ಚೈತ್ರಾ ಅಭಿಪ್ರಾಯ ಪಡುತ್ತಾರೆ.
ಬಳಿಕ ಚೈತ್ರಾ ಕೊಟೂರು ಮತ್ತು ಕುರಿತ ಪ್ರತಾಪ್ ನಡೆಸುವ ಮಾತುಕತೆಯಲ್ಲಿ ಮುಂದಿರುವ ಹಲವಾರು ಕಾಂಡಗಳುಳ್ಳ ಮರದ ಹಾಗೆ ಬಿಗ್ ಬಾಸ್ ಮನೆಯೊಳಗೆ ತಮ್ಮ ಬದುಕು ಎನ್ನುತ್ತಾರೆ ಚೈತ್ರಾ. ಕೊನೆಯಲ್ಲಿ ಎತ್ತರಕ್ಕೆ ಉಳಿಯುವ ಕೊಂಬೆಯೊಂದೇ ಎನ್ನುವುದು ಅವರ ಅನಿಸಿಕೆ.
