
ಬಣ್ಣಿಸಲಾಗದ ಹೆಣ್ಣಿನ ಕಂಠ: ಬಾಬಿ
ಹುಡುಗರು ಸಾಧಕ ಪುರುಷರನ್ನು, ಹುಡುಗಿಯರು ಸಾಧಕಿಯರನ್ನು ಆದರ್ಶ ವಾಗಿರಿಸಿಕೊಂಡು ಅವರಂತೆ ಸಾಧನೆಗೆ ಮುಂದಾಗುವುದು ಸಾಮಾನ್ಯ. ಅದರ ಹೊರತಾಗಿ ಹುಡುಗನೊಬ್ಬ ತಾನು ಎಸ್.ಜಾನಕಿಯಂತೆ ಹಾಡಬೇಕು ಎಂದುಕೊಂಡರೆ ಅದನ್ನು ವ್ಯರ್ಥ ಪ್ರಯತ್ನ ಎನ್ನಬಹುದು. ಆದರೆ ಎಸ್.ಜಾನಕಿ ಮಾತ್ರವಲ್ಲ, ಎಲ್. ಎ.ಆರ್. ಈಶ್ವರಿ, ಪಿ.ಸುಶೀಲಾ, ಮಂಜುಳಾ ಗುರುರಾಜದ ರಿಂದ ಶ್ರೇಯಾ ಘೋಷಾಲ್ ತನಕ ಸುಮಾರು ಏಳೆಂಟು ಗಾಯಕಿಯರ ಧ್ವನಿಯನ್ನು ಅನುಕರಿಸಿ ಆರ್ಕೆಸ್ಟ್ರಾದ ಲ್ಲಿ ಹಾಡಬಲ್ಲವರು ಬಾಬಿ. ಇವರ ಮೂಲ ಹೆಸರು ಅನಿಲ್ ಕುಮಾರ್ ಎಂದು.
ಬಾಬಿ ಬಾಲ್ಯದಿಂದಲೇ ಗಾಯಕ. ಬಾಲಗಾಯಕನಾಗಿ ಹಾಡುತ್ತಿದ್ದ ಗೀತೆಗಳು 'ಕಾಣದಂತೆ ಮಾಯವಾದನೋ' ಮುಂತಾದ ಪುನೀತ್ ಹಾಡಿರುವಂಥ ಗೀತೆಗಳಾಗಿದ್ದವು. ಒಂದು ಸಣ್ಣ ವಿರಾಮದ ಬಳಿಕ ಕಾಲೇಜು ದಿನಗಳಲ್ಲಿ ಅಂದರೆ, 1995 ಅನಂತರ ಮತ್ತೆ ಆರ್ಕೆಸ್ಟ್ರಾದಲ್ಲಿ ಗುರುತಿಸಿಕೊಳ್ಳಲು ಶುರುವಾದರು. ಆ ದಿನಗಳಲ್ಲೊಮ್ಮೆ ಗಂಟಲು ಕೈ ಕೊಟ್ಟು ಮಾತೇ ಹೊರಡದಂತಾಗಿತ್ತು. ಹಾಡಲು ಪ್ರಯತ್ನಿಸಿ ಏರು ದನಿಗೆ ಯತ್ನಿಸಿದರೆ ಕಂಠವೇ ಬದಲಾಗಿತ್ತು! ಹೈ ಪಿಚ್ ನಲ್ಲಿ ಸ್ವಾಭಾವಿಕವಾಗಿ ಹಾಡಿದರೂ ಅದು ಹೆಣ್ಣಿನ ದನಿಯಾಗಿ ಹೊರ ಹೊಮ್ಮುತ್ತಿತ್ತುಮ ಲೋ ಪಿಚ್ ನಲ್ಲಿ ಹಾಡಿದಾಗ ಮಾತ್ರ ಹುಡುಗರ ದನಿಯಂತಿತ್ತು. ಆ ಕ್ಷಣಕ್ಕೆ ಗೊಂದಲವಾಯಿತಾದರೂ, ಡಾಕ್ಟರ್ " ನಿಮ್ಮಕಂಠಕ್ಕೆ ಯಾವುದೇ ತೊಂದರೆಗಳಿಲ್ಲ. ಆದರೆ ಧ್ವನಿ ಎತ್ತರಿಸಿದಾಗ ಶಬ್ದ ಹೆಣ್ಣಿನ ಕಂಠದಂತೆಯೇ ಮುಂದುವರಿದೀತು" ಎಂದಿದ್ದು ಕೇಳಿ ಬಾಬಿಗೆ ಒಂದು ಉಪಾಯವೂ ಹೊಳೆಯಿತು. ಗಾಯಕಿಯರ ದನಿಯನ್ನೇ ಅನುಕರಿಸಿ ಹಾಡಿದರೆ ಅವಕಾಶಗಳು ಹೆಚ್ಚಬಹುದೆಂಬ ತೀರ್ಮಾನಕ್ಕೆ ಬಂದರು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಇದುವರೆಗೆ ಕರ್ನಾಟಕ ದಾದ್ಯಂತ ಸುಮಾರು 2000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ದೆಹಲಿಯಲ್ಲಿ ಯೂ ಕಾರ್ಯಕ್ರಮ ಕೊಟ್ಟಿದ್ದಾರೆ. ಹೆಣ್ಣಿನ ಕಂಠದಲ್ಲಿ ಹಾಡುತ್ತಾರೆ ಎನ್ನುವುದು ಒಂದು ವಿಶೇಷವಾದರೆ, ಗಾಯಕಿಯರ ಕಂಠವನ್ನು ಅನುಕರಿಸುತ್ತಾರೆ ಎನ್ನುವುದು ದೊಡ್ಡ ಮಟ್ಟದ ಅಚ್ಚರಿ, ಆಕರ್ಷಣೆ ಗೆ ಕಾರಣ ವಾಗಿದ್ದವು.
ಅಚ್ಚರಿಗೊಂಡ ಎಲ್ ಎರ್ ಈಶ್ವರಿ
ಆರ್ಕೆಸ್ಟ್ರಾ ಗಳಲ್ಲಿ ಹಾಡುವವರು ಗಾಯಕಿಯರ ಕೊರತೆಯಾದಾಗ ಹೆಣ್ಣಿನ ಕಂಠದಲ್ಲಿ ಹಾಡುವ ಪ್ರಯತ್ನವನ್ನು ಮಾಡುವುದು ಸಹಜ. ಆದರೆ ಅದೆಲ್ಲವೂ ಅಂತಿಮವಾಗಿ ಜೋರಾಗಿ ಕಿರುಚಿದಂತೆ ಕೇಳುವುದು ನಿಜ. ಹಾಗಾಗಿ ಗಂಡೊಬ್ಬ ತಮ್ಮ ಹಾಡನ್ನು ಹಾಡುತ್ತಾನೆ ಎಂದಾಗ ಖ್ಯಾತ ಗಾಯಕಿ ಎಲ್ ಆರ್ ಈಶ್ವರಿ ಯವರು ಏನೋ ಹಾಡಿ ಹೋಗುತ್ತಾನೆ ಎಂದು ನಿರ್ಲಿಪ್ತವಾಗಿ ಕುಳಿತಿದ್ದರು. ಆದರೆ ಯಾವಾಗ ಬಾಬಿ ' ಸುತ್ತಮುತ್ತಲು ಸಂಜೆಗತ್ತಲು...' ಹಾಡಿಗೆ ಧ್ವನಿಯಾದರೋ ಈಶ್ವರಿಯವರ ಕಂಗಳಲ್ಲಿ ಅಚ್ಚರಿ ತುಂಬಿತ್ತು.ಈ ಘಟನೆ ನಡೆದಿದ್ದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ. ಹಾಡು ಮುಗಿದ ತಕ್ಷಣವೇ ಅವರು ವೇದಿಕೆಗೆ ಧಾವಿಸಿ ಬಂದು ' ಅಲ್ಮೋಸ್ಟ್ ಈ ಗೀತೆ ನಾನು ಹಾಡಿದಂತಿತ್ತು.' ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಬಾಬಿಗೆ ಅಷ್ಟೊಂದು ಪ್ರತಿಭೆ ಇರುವುದರಿಂದಾಗಿಯೇ ಮೂಲ ಗಾಯಕಿಯರ ಎದುರಲ್ಲೇ ಅವರ ಹಾಡನ್ನು ಹಾಡುವ ಮತ್ತು ಪ್ರಶಂಸೆ ಪಡೆಯುವ ಅವಕಾಶ ಲಭಿಸಿವೆ. ಮಾತ್ರವಲ್ಲ ಡಾ.ರಾಜ್ ಕುಮಾರ್ ಅವರಂಥ ಲೆಜೆಂಡ್ ಗಳೊಂದಿಗೆ ಜೋಡಿ ಕಂಠನೀಡುವ ಸಂದರ್ಭ ಕೂಡ ದೊರಕಿದೆ. ಅದು ರಾಜ್ ಕುಮಾರ್ ಅವರು ವೀರಪ್ಪನ್ ನಿಂದ ಬಿಡುಗಡೆಯಾಗಿ ಬಂದಿದ್ದ ಕಾಲ. ಅದೇ ಖುಷಿಗೆ ರಾಜ್ ಕುಮಾರ್ ಅವರೊಂದಿಗೆ ಕರ್ನಾಟಕದಾದ್ಯಂತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಅದೇ ರೀತಿ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ ಕುಮಾರ್ ಜೊತೆ ಗಿರಿಕನ್ಯೆ ಸಿನಿಮಾದ ' ನಗುನಗುತಾ ನೀ ಬರುವೆ' ಹಾಡನ್ನು ಎಸ್. ಜಾನಕಿ ಶೈಲಿಯಲ್ಲಿ ಹಾಡಿದ್ದರು. ಅಣ್ಣಾವ್ರು ಕೂಡಾ ಇವರ ಹಾಡನ್ನು ಮೆಚ್ಚಿ ಹರಸಿದ್ದರು. ಅದೇ ರೀತಿ ಶಿವರಾಜ್ ಕುಮಾರ್ ಕಾರ್ಯಕ್ರಮಗಳಲ್ಲಿ ಕೂಡಾ ರಸಮಂಜರಿಗೆ ಧ್ವನಿ ಸೇರಿಸಿದ ಕೀರ್ತಿ ಇವರದಾಗಿದೆ. ತಮ್ಮ ಆರ್ಕೆಸ್ಟ್ರಾ ಕಾರ್ಯಕ್ರಮಗಳ ಹೊರತಾಗಿ ಗುರುಕಿರಣ್, ಅರ್ಜುನ್ ಜನ್ಯ, ಹರಿಕೃಷ್ಣ ರ ನೇತೃತ್ವದ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಸಂಗೀತ ನಿರ್ದೇಶಕರಾದ ಕೆ.ಕಲ್ಯಾಣ್, ವಿ.ನಾಗೇಂದ್ರಪ್ರಸಾದ್ ಅವರ ಹಾಡುಗಳಲ್ಲಿ ಟ್ರ್ಯಾಕ್ ಸಿಂಗರ್ ಆಗಿಯೂ ಇವರು ಹಾಡಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ವಿಭಿನ್ನ ಗಾಯಕರಾಗಿ ಸ್ವತಃ ಕಾಣಿಸಿಕೊಂಡಿರುವ ಬಾಬಿ ಇನ್ನೊಂದಷ್ಟು ಚಿತ್ರಗಳಲ್ಲಿ ನಟಿಯರಿಗೆ ಹಾಡಿರುವುದಾಗಿ ತಿಳಿಸುತ್ತಾರೆ.
ಅಂಬಿ, ಖುಷಿ, ಶಿಷ್ಯ, ಗಂಗಾಕಾವೇರಿ ಸಿನಿಮಾಗಳ ರೀರೆಕಾರ್ಡಿಂಗ್ ನಲ್ಲಿ ಹಾಡಿದ್ದಾರೆ. ಹುಡುಗ, ಹುಡುಗಿ,ಮಾಗಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಡಿ, ಯುಗಪುರುಷ, ಸಿನಿಮಾಗಳಲ್ಲಿ ನಟನೆಯೊಂದಿಗೆ ಹಾಡಿದ್ದಾರೆ ! ಹುಡುಗ ಹುಡುಗಿ, ಟೈಗರ್ ಚಿತ್ರಗಳಲ್ಲಿಯೂ ಹಾಡಿದ್ದು, ಇವರ ನಟನೆಯ ಚಿತ್ರಗಳಾದ ಕಮರೊಟ್ಟು ಚೆಕ್ ಪೋಸ್ಟ್ , ಧರ್ಮಸ್ಯ, ರಾಜವೀರ, ಮದಕರಿ ಪುರ, ಮಾಯದಂಥ ಮಳೆ ಚಿತ್ರಗಳು ಬಿಡುಗಡೆಗೆ ಕಾದಿವೆ.
ಅವಕಾಶಗಳಿಗಾಗಿ ಆಕಾಂಕ್ಷೆ
ಕಳೆದ ಎಂಟು ವರ್ಷಗಳಿಂದ ಮಂಗಳಾ ಮುರಳೀಧರ್ ಅವರ ನೇತೃತ್ವದಲ್ಲಿರುವ ' ಮಾಧುರಿ ಮೆಲೋಡಿಸ್' ಆರ್ಕೆಸ್ಟ್ರಾ ತಂಡದಲ್ಲಿ ಪ್ರಮುಖ ಆಕರ್ಷಣೆ ಯಾಗಿರುವ ಬಾಬಿ, ತಮ್ಮ ತಂಡದ ಮೂಲಕ ನಾಡಿನಾದ್ಯಂತ ಜನಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಮಾತ್ರ ವಲ್ಲ ಇವರ ಪ್ರತಿಭೆಗೆ ' ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ', 'ಕಮಲಾ ನೆಹರು ಚಟ್ಟೋಪಾಧ್ಯಾಯ ಪ್ರಶಸ್ತಿ' , 'ಡಾ.ರಾಜ್ ಧ್ರುವತಾರೆ ಪ್ರಶಸ್ತಿ', ' ನಾಡಶಿಲ್ಪಿ ಕೆಂಪೇಗೌಡ ಪ್ರಶಸ್ತಿ' ಮತ್ತು ಬೆಂಗಳೂರು ಹೈಗ್ರೈಂಡ್ಸ್ ರೋಟರಿ ಕ್ಲಬ್ ನಿಂದ ಈ ವರ್ಷದ ' ವೊಕೇಶನಲ್ ಎಕ್ಸಲೆನ್ಸ್' ಪ್ರಶಸ್ತಿಗಳು ಲಭಿಸಿವೆ. ಆದರೆ ಬಾಬಿಗೆ ಪ್ರಶಸ್ತಿ ಗಳಿಗಿಂತ ಮುಖ್ಯವಾಗಿ ಒಂದು ಬೇಡಿಕೆ ಇದೆ. ಅದು ಹಾಡುವ ಅವಕಾಶ! ತಮ್ಮನ್ನು ಮಾತ್ರವಲ್ಲ, ಕನ್ನಡದ ಬಹುತೇಕ ಗಾಯಕರನ್ನು ಟ್ರ್ಯಾಕ್ ಹಾಡಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಹಾಡು ಚೆನ್ನಾಗಿದ್ದರೂ ಅದನ್ನು ಉಳಿಸಿಕೊಳ್ಳುವುದಿಲ್ಲ. ಕನ್ನಡದ ಸಂಗೀತ ನಿರ್ದೇಶಕ, ಕನ್ನಡದ ನಿರ್ಮಾಪಕರು ಇರುವ ಕನ್ನಡದ ಚಿತ್ರಗಳಲ್ಲೇ ತಮಗೆ ಇಂಥ ಪರಿಸ್ಥಿತಿಯಾದರೆ ಮತ್ತೆ ತಮಗೆಲ್ಲ ಅವಕಾಶಗಳನ್ನು ನೀಡುವವರು ಯಾರು ಎಂದು ಹತಾಶೆಯಿಂದ ಪ್ರಶ್ನಿಸುತ್ತಾರೆ ಬಾಬಿ. ಅಂದ ಹಾಗೆ ಅರ್ಜುನ್ ಜನ್ಯ, ಅನುರಾಧ ಭಟ್, ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್ ಮೊದಲಾದ ಗಾಯಕರೊಂದಿಗೆ ನಟರಾಜ್ ಎಂಟರ್ಟೇನರ್ಸ್, ಗಂಧರ್ವ ಮಂಜು ಮೊದಲಾದವರ ದೊಡ್ಡ ವೇದಿಕೆಗಳಲ್ಲಿ ಗಾನಸುಧೆ ಹರಿಸಿರುವ ಬಾಬಿಯವರು ಗುರುಗಳಾದ ಚಿಂತನ ಪಲ್ಲಿ ಸುಬ್ಬುಗಂಗರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. 23ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು, ಕಳೆದ ಎರಡು ವರ್ಷಗಳಿಂದ ಶಾಸ್ತ್ರೀಯ ಸಂಗೀತ, ಸಿನಿಮಾಗಳಲ್ಲಿನ ಭಕ್ತಿ ಸಂಗೀತವನ್ನು ಹೇಳಿಕೊಡುವ ತರಗತಿ ನಡೆಸುತ್ತಿದ್ದಾರೆ. ಸಿನಿಮಾಗಳಿಗೆ ಹಾಡುವ ಅವಕಾಶ ದೊರೆಯದಿದ್ದರೆ ಧಾರಾವಾಹಿಗಳಲ್ಲಿ ನಟನೆಗೂ ಸಿದ್ಧ ಎನ್ನುವ ಬಾಬಿಯವರು ಕಲೆಯನ್ನು ಮಾತ್ರ ನಂಬಿದ್ದಾರೆ. ಅದು ಅವರನ್ನು ಕಾಯುತ್ತದೆ ಎಂದು ನಿರೀಕ್ಷಿಸೋಣ.



