ತಂದೆ ತಾಯಿ ನೆನಪಲ್ಲಿ ಕಣ್ಣೀರಾದ ಸದಸ್ಯರು
ಐದನೇ ದಿನ ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆಯನ್ನು ನೀಡುತ್ತದೆ. ಆ ಪ್ರಕಾರ ಜೀವನದಲ್ಲಿ ಸಾಧನೆ ಮಾಡುವಲ್ಲಿ ಹೆತ್ತವರ ಪಾತ್ರ ಪ್ರಮುಖ. ಅಂಥ ಸುಂದರ ಕ್ಷಣಗಳನ್ನು ಮೆಲುಕು ಹಾಕಲು ಬಿಗ್ ಬಾಸ್ ನೀಡುವ ಚಟುವಟಿಕೆಯ ಹೆಸರೇ `ಅಪ್ಪಅಮ್ಮ’. ರವಿ ಬೆಳಗೆರೆ ಸೇರಿದಂತೆ ಸದಸ್ಯರನೇಕರು ತಂದೆ ತಾಯಂದಿರನ್ನು ನೆನೆದು ಅತ್ತು ಕರಗಿ ನೀರಾಗುತ್ತಾರೆ..

ಮುಂದುವರಿದ 4ನೇ ದಿನ
ರಾತ್ರಿ 10.55
ವಾಸುಕಿ ವೈಭವ್ ತಮ್ಮ ಹೆಸರನ್ನು ಪ್ರಿಯಾಂಕ `ವಿವೇಕ್’ ಎಂದು ಕರೆಯುವ ಬಗ್ಗೆ ನೆನಪಿಸಿ ನಗುತ್ತಾರೆ. ಬಾತ್ ರೂಮ್ ಕ್ಲೀನ್ ಮಾಡುತ್ತಾ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕಿ ವೈಭವ್ ಮೊದಲಾದವರು ಹಾಡುತ್ತಿರುವಾಗ ರಾಜು ತಾಳಿಕೋಟೆ ಬಂದು ಸದ್ದು ಮಾಡಬೇಡಿ ನಿದ್ದೆ ಬರಲ್ಲ, ಶಬ್ದ ಕಡಿಮೆ ಮಾಡಿ ಎಂದು ಹೇಳುತ್ತಾರೆ.
ಮಧ್ಯರಾತ್ರಿ 2.20
ವಾಸುಕಿ ಒವನ್ ನಲ್ಲಿ ನೀರು ಕಾಯಿಸಿ ರವಿ ಬೆಳಗೆರೆಗೆ ಕೊಡುತ್ತಾರೆ. ವಾಸುಕಿಯಲ್ಲಿ `ಬ್ರದರ್ಸ್ ಇದ್ದಾರಾ’ ಎಂದು ವಿಚಾರಿಸುತ್ತಾರೆ, ರವಿ ಬೆಳಗೆರೆ. `ಇಲ್ಲಅಕ್ಕ ಇದ್ದಾರೆ ಮದುವೆ ಆಗಿದೆ’ ಎನ್ನುತ್ತಾರೆ ವಾಸುಕಿ. `ಜೀವನಲ್ಲಿ ನಾಟಕ, ಸಂಗೀತ ಅಂತ ತಿರುಗುವುದು ಬಿಟ್ಟು ಕೆಲಸ ಅಂತ ಹುಡುಕು, ನಿನಗೆ ಏನಾದರೂ ಹೆಲ್ಪ್ ಬೇಕಾದರೆ ನಾನು ಮಾಡುತ್ತೇನೆ. ಏನಾದರೂ ಮಾಡು, ಒಂದು ನಿಗದಿತ ವೇತನದ ಕೆಲಸಕ್ಕೆ ಸೇರು’ ಎಂದು ಬುದ್ಧಿವಾದ ಹೇಳುತ್ತಾರೆ.
5ನೇ ದಿನ ಬೆಳಿಗ್ಗೆ 08.35
ಅಡುಗೆ ಕೋಣೆಯಲ್ಲಿ ಟೀ ಕುಡಿದು ಟೀ ಪುಡಿಯನ್ನು ಬೇಸಿನ್ ಮೇಲೆ ಚೆಲ್ಲಿದ್ದು, ಮಗ್ ಇಟ್ಟಿದ್ದು ಕಂಡು , ಜೈಜಗದೀಶ್ ರೋಸಿ ಹೋಗುತ್ತಾರೆ.
ಸಮಯ 10.00
ರಾಜು ತಾಳಿಕೋಟೆ ತಮಗೆ ಕುರಿ ಪ್ರತಾಪ್ ಹೊರತು ಪಡಿಸಿ ಮನೆಯ ಎಲ್ಲರ ಹೆಸರುಗಳು ಪದೇ ಪದೇ ಮರೆತು ಹೋಗುತ್ತವೆ ಎನ್ನುತ್ತಾರೆ. ಅಲ್ಲಿ ದೀಪಿಕಾ, ಕುರಿ ಪ್ರತಾಪ್ ಇರುತ್ತಾರೆ.
ಸಮಯ 10.20
ಹಾವಭಾವ ಸ್ವಭಾವ ಚಟುವಟಿಕೆ. ಅದುವೇ ರವಿ ಕಂಡಂತೆ. ಗುಣ ಸ್ವಭಾವಗಳನ್ನು ಪರಮಾರ್ಶಿಸಿ ಬ್ಯಾಜ್ ನಲ್ಲಿ ಬರೆಯಬೇಕು.
ಲಿವಿಂಗ್ ಏರಿಯಾದಲ್ಲಿ ಜೈಜಗದೀಶ್, ರಾಜು ತಾಳಿಕೋಟೆ, ಚಂದನಾ, ಸುಜಾತಾ, ಕುರಿ ಪ್ರಾತಪ್, ವಾಸುಕಿ, ಶೈನ್, ಸುಜಾತ ಎಲ್ಲರೂ ಕುಳಿತಿರುವಾಗ ಹರೀಶ್ ರಾಜ್ ಅಕ್ಷಯ್ ಕುಮಾರ್ ಅವರಂತೆ ಮಿಮಿಕ್ರಿ ಮಾಡುತ್ತಾರೆ.
ಸಮಯ 10.55
ರವಿ ಬೆಳಗೆರೆಯವರು ಸದಸ್ಯರಿಗೆ ಶೀರ್ಷಿಕೆಗಳನ್ನು ನೀಡಲು ಶುರು ಮಾಡುತ್ತಾರೆ.
ಹರೀಶ್ ರಾಜ್ - ಸಾವಿರ ಸೋಲುಗಳಿಗೆ ಹತಾಶನಾಗದ ಸರದಾರ.
ರಾಜು ತಾಳಿಕೋಟೆ- ಎರಡು ಕಟ್ಟಿದ್ದು `ಸಾಕೆಂದು ಸಾಕೆಂದು’ ನಿರ್ಧರಿಸಿರುವ ತಾಳಿಕೋಟೆ.
ವಾಸುಕಿ ವೈಭವ್– ಅವಳ್ಯಾರು ವಾಸುಕಿ ವೈಭವ್ ಇನ್ನಾದರೂ ವೈಭವಿಸಲಿ
(ವೈಭವ್ ಹೆಸರಿನ ಮುಂದಿರುವ ವಾಸುಕಿಯ ಬಗ್ಗೆ ರವಿಬೆಳಗೆರೆಯ ಕುತೂಹಲಕ್ಕೆ ಅವಳು ನಮ್ಮಜ್ಜಿ ಎಂದು ವಿವರಿಸುತ್ತಾರೆ ವಾಸುಕಿ.)
ಕುರಿ ಪ್ರತಾಪ್ - ಮಚ್ಚು ಮಸೆದರೂ ಮಂಕಾಗದಿರು ಕುರಿ.
ದುನಿಯಾ ರಶ್ಮಿ – ದುನಿಯಾ ವಿಸ್ತಾರಗೊಳ್ಳಲೆಂದು ಕಾದಿರುವ ವಿನಯಕಂಗಳ ಹುಡುಗಿ ರಶ್ಮಿ.
ಕಿಶನ್ – ಕುಣೀತಿರು ಕುಣಿಯುತ್ತಿರು ಕಿಶನ್; ರಾಧೆ ಬಂದು ಕಿತ್ತುಕೊಳ್ಳೋ ತನಕ ಕೊಳಲು
ದೀಪಿಕಾದಾಸ್- ನಿನ್ನ ದಾಸಾನುದಾಸ ನಾನು, ನನ್ನ ಸಿಗರೇಟುಗೆ ಒದಗಿಸುತ್ತಿರು ದೀಪ
ಚಂದನಾ – ಚಂದದ ಚೆಲುವೆ ಚಂದನಾ, ನನ್ನ ಡಯಾಬಿಟಿಸ್ ವಾಸಿಯಾದ ದಿನ ನಿನಗೆ ಬೊಗಸೆ ತುಂಬಾ ರಸ್ ಮಲಾಯಿ
ಪ್ರಿಯಾಂಕ- ನನಗೆ ದಿನಕ್ಕೊಂದು ವಿಲನಿಶ್ ಮುತ್ತು ಕೊಡೆ ವಿಷಕನ್ಯೆ.
ಇವೆಲ್ಲವೂ ರವಿಬೆಳಗೆರೆಯವರ ಲೇಖನಿಯಲ್ಲಿ ಸೃಷ್ಟಿಯಾಗುವ ಪದಗಳು.
ಸುಜಾತಾ ದಿಢೀರ್ ನಿಂಬೆಕಾಯಿ ಉಪ್ಪಿನಕಾಯಿ ಮಾಡಿದ ಬಗ್ಗೆ ಕ್ಯಾಮೆರಾ ಮುಂದೆ ಹೇಳುತ್ತಾರೆ. ಮೊಸರು ಕಳುಹಿಸಿಕೊಡಿ ಎಂದು ಬಿಗ್ ಬಾಸ್ ನಲ್ಲಿ ಕೇಳಿಕೊಳ್ಳುತ್ತಾರೆ.
ಸಮಯ 03.25
ಡೈನಿಂಗ್ ಟೇಬಲ್ ಬಳಿ ಸುಜಾತಾ ಮತ್ತು ಭೂಮಿ ಮಾತನಾಡುತ್ತಾರೆ. ನಿದ್ದೆ ಬರ್ತಿದೆ, ಹೊಟ್ಟೆ ತುಂಬಾ ಊಟ ಮಾಡಿದ ಕಾರಣ ಎನ್ನುತ್ತಾರೆ ಸುಜಾತಾ.
ರಾಜು ತಾಳಿಕೋಟೆಗೆ ಬಿಗ್ ಬಾಸ್ ನಿಂದ ಪ್ರಶ್ನೆ `ಡ್ರೈವರ್ ಆಗಿ ಕೆಲಸ ಮಾಡಿದ್ದೀರಾ, ಬೇರೆಯವರು ಬಂದು ಗುದ್ದಿದರೆ ಏನು ಮಾಡ್ತೀರಾ?’ ಎಂದು. ಸುದೀಪ್ ನೀಡಿದ ಲಕೋಟೆ ತೆರೆದಾಗ ಅದರಲ್ಲಿ `ಕೇರ್ ಲೆಸ್ ಆಗಿ ಬಂದು ಆಟೋ ಡ್ರೈವರ್ ಮುಖಕ್ಕೆ ಗುದ್ದಿದವರು’ ಎನ್ನುವ ವಾಕ್ಯ ಇರುತ್ತದೆ.
ಗುರುಲಿಂಗ ಸ್ವಾಮಿಗಳಿಗೆ ಕೇಳಲಾದ ಪ್ರಶ್ನೆ - ಲಿಮ್ಕ ಜ್ಯೂಸ್ ಕುಡಿದಿದ್ದೀರಾ? ನಟನೆಯಲ್ಲಿ ಲಿಮ್ಕಾ ರೆಕಾರ್ಡ್ ಮಾಡಿದವರ ಬಗ್ಗೆ ಗೊತ್ತೇ?’ ಎನ್ನುವುದಾಗಿರುತ್ತದೆ.
ಜೀವನದಲ್ಲಿ ಸಾಧನೆ ಮಾಡುವಲ್ಲಿ ಹೆತ್ತವರ ಪಾತ್ರ ಪ್ರಮುಖ. ಅಂಥ ಸುಂದರ ಕ್ಷಣಗಳನ್ನು ಮೆಲುಕು ಹಾಕಲು ಬಿಗ್ ಬಾಸ್ ನೀಡುವ ಚಟುವಟಿಕೆ `ಅಪ್ಪಅಮ್ಮ’. ಸದಸ್ಯರು ಅದರ ತಯಾರಿಯಲ್ಲಿ ತೊಡಗುತ್ತಾರೆ.
ಸಂಜೆ 06.15
ಹರೀಶ್, ಜೈಜಗದೀಶ್ ಜತೆಗೆ ಮಾತನಾಡುವ ವೈಭವ್, ಪ್ರಿಯಾಂಕ ತಮಗೆ ಪದೇ ಪದೇ ಹೊಡೆದು ಮಾತನಾಡುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಚಟುವಟಿಕೆಗೆ ಮೀಸಲಾದ ವೇದಿಕೆಯಲ್ಲಿ ಚಂದನಾ ತಮ್ಮ ತಂದೆ ಅನಂತಕೃಷ್ಣರನ್ನು ನೆನಪಿಸಿಕೊಳ್ಳುತ್ತಾ `ನಾನು ನೋಡಿದ ಮೊದಲ ವೀರ ಗೀತೆಯನ್ನು ಹಾಡುತ್ತಾರೆ. ಇದೇ ವೇಳೆ ಅಮ್ಮನ ಹೇಳುತ್ತಾ `ಅಮ್ಮ ಹಚ್ಚಿದ ಒಂದು ಹಣತೆ…ಇನ್ನೂ ಬೆಳಗಿದೆ’ ಎಂದು ಹಾಡುತ್ತಾರೆ. ರವಿ ಬೆಳಗೆರೆ ಸೇರಿದಂತೆ ಸದಸ್ಯರು ಅನೇಕರು ಅತ್ತು ಬಿಡುತ್ತಾರೆ.

ಬಳಿಕ ಕಿಶನ್ ತನ್ನ ತಾಯಿ ಸ್ಟೋರಿ ಡಿಫರೆಂಟ್ ಎಂದು ಮಾತು ಶುರು ಮಾಡುತ್ತಾರೆ. ಅವರು ಮುಖ ಸುಟ್ಟಕೊಂಡದ್ದು, ಆನಂತರ ಕುಡಿಯಲು ಶುರು ಮಾಡಿದ್ದು, ತಾನು ಅವರನ್ನುಇಗ್ನೋರ್ ಮಾಡಿದ ಬಗ್ಗೆ ಮಾತನಾಡುತ್ತಾರೆ. ತಾಯಿಯಿಂದ ದೂರದಲ್ಲಿದ್ದ ನನಗೆ ಅವರು ಫೋನ್ ಮಾಡಿ `ದುಡ್ಡು ಕೊಡುತ್ತೇನೆ, ಬಟ್ಟೆ ಕೊಡುತ್ತೇನೆ ಎಂದಿದ್ದೇ ಕೊನೆಯ ಮಾತಾಗಿತ್ತು. ಆದರೆ ಅವರನ್ನು ಗೌರವಿಸಲಿಲ್ಲ ಎನ್ನುವ ದುಃಖ ಇದೆ ನನಗೆ ಇಂದಿಗೂ ಎನ್ನುತ್ತಾರೆ ಕಿಶನ್. ತಾಯಿಯ ಕುರಿತಾದ `ಅಮ್ಮಾ ನನ್ನ ಈ ಜನುಮ ನಿನ್ನ ವರದಾನವಮ್ಮ ‘ ಗೀತೆಗೆ ನೃತ್ಯ ಮಾಡುತ್ತಾರೆ ಕಿಶನ್.
ಶೈನ್ ಶೆಟ್ಟಿ ತಮ್ಮ ತಂದೆ ತಾಯಿಯ ಬಗ್ಗೆ ವಿವರಿಸುತ್ತಾ- 10 ನೇ ಕ್ಲಾಸ್ ನಲ್ಲಿ ಇರುವಾಗ ಮನೆ ಬಿಟ್ಟು ಹೋಗಿದ್ದೆ. ಎರಡೂವರೆ ತಿಂಗಳು ಎಲ್ಲಿದ್ದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹೊಟೇಲ್ ನಲ್ಲಿ ಕೆಲಸ ಮಾಡ್ತಾ ಇದ್ದೆ. ಒಂದು ದಿನ ಅಪ್ಪ ಬಂದ್ರು ಅಂತ ಹೊಟೇಲ್ ನವರು ಹೇಳಿದ್ರು. ಅವತ್ತು ಅಪ್ಪನನ್ನು ನೋಡಿ ತುಂಬಾ ಬೇಜಾರಾಯಿತು. ವಾಪಾಸ್ ಮನೆಗೆ ಕರೆದುಕೊಂಡು ಬಂದ್ರು. ಕಲಿಸಿದ್ರು. ಹಾಸ್ಟೆಲ್ ಜೀವನದಲ್ಲಿ ನನಗೆ ಯಾವತ್ತೂ ಮನೆಗೆ ಫೋನ್ ಮಾಡಬೇಕೆಂದು ಅನಿಸಲಿಲ್ಲ. ಅವರೇ ಕಾಲ್ ಮಾಡ್ತಿದ್ರು, ಸೀರಿಯಲ್ ಬಿಟ್ಟು ಸಿನಿಮಾಕ್ಕೆ ಬರಬೇಕೆಂದು ಕಷ್ಟ ಪಡ್ತಿದ್ನಲ್ಲಆವಾಗ ಯಾರು ಫ್ರೆಂಡ್ಸ್ ಸಹಾಯಕ್ಕೆ ಬರಲಿಲ್ಲ. ಆದರೆ ಅಮ್ಮ ಬಂದ್ರು. 6 ತಿಂಗಳ ಹಿಂದೆ ಫುಡ್ ಟ್ರಕ್ ಮಾಡಿದಾಗ ಬಂದು ಸಹಾಯ ಮಾಡಿದ್ದು ತಂದೆ ತಾಯಿ ಮಾತ್ರ ಎಂದು ನೊಂದುಕೊಂಡರು.
ಬಳಿಕ ರವಿ ಬೆಳಗೆರೆ ಮಾತನಾಡುತ್ತಾ, ನಾನು ಕೇವಲ ನನ್ನಅಮ್ಮನ ಮಗ. 1958ರಲ್ಲಿ ಗಂಡನೇ ಇಲ್ಲದೆ ಗರ್ಭ ಧರಿಸಿ ಒಂದು ಮಗನನ್ನು ಹೆತ್ತದ್ದು ಬೆಳಗೆರೆ ಪಾರ್ವತಮ್ಮ. ನಾನು ತಂದೆ ಹೆಸರಿಟ್ಟಿಲ್ಲ, ತಾಯಿ ಹೆಸರು ಇಟ್ಟುಕೊಂಡಿದ್ದೇನೆ. ತಾಯಿ ಲೇಖಕಿ, ನನ್ನ ಲೀಗಲ್ ತಂದೆ ಕೂಡ ಲೇಖಕ. ಆದರೆ ಆಕೆ ಬದುಕಲ್ಲಿ ತುಂಬ ಕಷ್ಟಗಳನ್ನು ಅನುಭವಿಸಿದರು. ಕೊನೆಯ ದಿನಗಳಲ್ಲಿ ಚೆನ್ನಾಗಿ ನೋಡಿಕೊಂಡಿದ್ದೇನೆ. ಆದರೆ ಬಿದ್ದು ಮೂಗಿನಿಂದ ರಕ್ತ ಒಸರುತ್ತಿದ್ದ ಅಮ್ಮನನ್ನುಬದುಕಿಸಲು ಪಟ್ಟ ಪಾಡು ಮಾತ್ರ ಯಶಸ್ಸಾಗಲಿಲ್ಲ ಎಂದು ವಿವರಿಸಿ, ಅಮ್ಮನನ್ನು ಚೆನ್ನಾಗಿ ನೋಡ್ಕೊಳ್ಳಿ, ಬದುಕು ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ಳುತ್ತೆ ಎಂದು ಅಳುತ್ತಾರೆ ಬೆಳಗೆರೆ.
ಸಮಯ 08.00
ತಂದೆಯ ಬಗ್ಗೆ ಮಾತನಾಡುವ ಜೈಜಗದೀಶ್, `ತಂದೆಗೆ ಒಂದೇ ಒಂದು ಆಸೆ ಇತ್ತು ಮಗ ಡಬಲ್ ಗ್ರಾಜ್ಯುಯೇಟ್ ಆಗಬೇಕೆಂದು. ನಾನು ಕೂಡ ನಟ ಆಗಬೇಕು ಎಂದು ಕನಸು ಕಂಡವನಲ್ಲ. ಬಿಸಿನೆಸ್ ಮಾಡಬೇಕು, ತಂದೆ ತೋಟ ನೋಡಿಕೊಳ್ಳಬೇಕು ಎನ್ನುವ ಆಸೆ ಆಗಿತ್ತು. ಪುಟ್ಟಣ್ಣ ಕಣಗಾಲ್ ಅವರ ಚಿತ್ರದಲ್ಲಿ ನಾಯಕನಾಗಿ ಅವಕಾಶ ಸಿಕ್ಕಾಗಲೂ ಅದನ್ನು ವಿರೋಧಿಸಿದ್ದರು ತಂದೆ’ ಎನ್ನುವುದನ್ನು ಸ್ಮರಿಸಿಕೊಂಡರು.
ತಮ್ಮ ಹೆತ್ತವರ ಬಗ್ಗೆ ಮಾತನಾಡಿದ ರಾಜು ತಾಳಿಕೋಟೆ, ತಂದೆ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಶಾಲಾ ಶಿಕ್ಷಕಿ. ತಂದೆಯ ಮೇಲಿನ ಒಲವಿನಿಂದ ಶಿಕ್ಷಕ ವೃತ್ತಿಗೆ ರಿಸೈನ್ ಮಾಡಿ, ಆಕೆ ಕಲಾವೃತ್ತಿಯನ್ನು ಆಯ್ಕೆ ಮಾಡಿದ್ರು. ನಮ್ಮ ತಂದೆಗೆ ನನ್ನ ತಾಯಿಯಷ್ಟೇ ಹೆಂಡತಿಯಾಗಿರಲಿಲ್ಲ. ಅವರ ಹೆಂಡತಿಯರಲ್ಲಿ ನಮ್ಮ ತಾಯಿ ಕೂಡ ಒಬ್ಬಳು. ನಾವು ನಾಲ್ಕು ಜನ ಮಕ್ಕಳು. ನಾನು ಕಡೇ ಮಗ. ಹಾಗಾಗಿ ತಾಯಿ ಪ್ರೀತಿಯನ್ನಷ್ಟೇ ಅನುಭವಿಸಿದ್ದೇನೆ.. ಎಂದರು.
ದುನಿಯಾ ರಶ್ಮಿ ತಮ್ಮ ತಂದೆಯ ಬಗ್ಗೆ ಹೇಳುತ್ತಾ, ಅಪ್ಪನಿಗೆ ಹೆಣ್ಮಗು ಇಷ್ಟ ಇರಲಿಲ್ಲ.ಅಮ್ಮ ಸ್ಥಳೀಯವಾಗಿ ಚುನಾವಣೆಗೆ ನಿಂತು ಗೆದ್ರು. ಮೊದಲು ಪ್ರೋತ್ಸಾಹಿಸಿದ ಅಪ್ಪ ಬಳಿಕ ಅಮ್ಮನ ಸಾರ್ವಜನಿಕ ಬದುಕಿನ ಬಗ್ಗೆ ಸಂಶಯ ಪಟ್ರು. ಅಮ್ಮನಿಗೆ ಅನಾರೋಗ್ಯ ಬೇರೆ ಇತ್ತು. ರಾತ್ರಿ ನಿದ್ದೆ ಮಾಡ್ತಿರಲಿಲ್ಲಅಮ್ಮ. ತಂದೆಯ ಗಲಾಟೆ ಸಹಿಸಲಾಗದೆ, ಅಮ್ಮ ನನ್ನನ್ನು ಕರೆದುಕೊಂಡು ಬೆಂಗಳೂರು ಸೇರಿದರು..’ ಎಂದರು.