top of page

ದಬಂಗ್ 3  ಟ್ರೇಲರ್ ನಲ್ಲಿ ಕನ್ನಡ ಮಾತನಾಡಿದ ಸಲ್ಮಾನ್ !

DABANG 1.jpg

 

ದಬಂಗ್ ಹೆಸರಿನಲ್ಲಿ ಈಗಾಗಲೇ ಎರಡು ಸಿನಿಮಾಗಳು ತೆರೆಗೆ ಬಂದು ಸುಪರ್ ಹಿಟ್ ಆಗಿವೆ. ಆದರೆ ಪ್ರಥಮ ಬಾರಿಗೆ ಇದರ ನೇತೃತ್ವವನ್ನು ಪ್ರಭುದೇವ ವಹಿಸಿಕೊಂಡಿದ್ದಾರೆ. ವಾಂಟೆಡ್ ಚಿತ್ರದ ಬಳಿಕ ಸಲ್ಮಾನ್ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದಾರೆ. ವಾಂಟೆಡ್ ತೆಲುಗು ಚಿತ್ರದ ರಿಮೇಕ್ ಆಗಿತ್ತು. ಆದರೆ ಈ ಸ್ವಮೇಕ್ ಚಿತ್ರವನ್ನು ಪ್ರಭುದೇವ ಹೇಗೆ ನಿರ್ದೇಶಿಸಿದ್ದಾರೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ಜತೆಗೆ ಕನ್ನಡದ ಖ್ಯಾತ ನಾಯಕ ನಟರಾದ ಕಿಚ್ಚ ಸುದೀಪ್ ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಹೀಗೆ ಬಿಡುಗಡೆಗೂ ಮೊದಲೇ ಕರ್ನಾಟಕ  ಮತ್ತು ದಕ್ಷಿಣ ಭಾರತದಾದ್ಯಂತ ಕುತೂಹಲ ಮೂಡಿಸಿರುವ ಚಿತ್ರವಾಗಿ ದಬಂಗ್ 3 ಸುದ್ದಿಯಲ್ಲಿದೆ. ಈಗಾಗಲೇ  ಟೀಸರ್ ನಲ್ಲಿ ಕನ್ನಡದಲ್ಲಿ ಎರಡು ಸಾಲು ಮಾತನಾಡಿದ್ದ ಸಲ್ಮಾನ್ ಟ್ರೇಲರ್ ತುಂಬ ಕನ್ನಡದಲ್ಲೇ ಮಾತನಾಡಿದ್ದಾರೆ. ಚಿತ್ರವು ಕನ್ನಡದ ಜತೆಗೆ ತೆಲುಗು, ತಮಿಳು ಭಾಷೆಗಳಲ್ಲಿಯೂ ತೆರೆಗೆ ಬರಲಿದೆ. ಆದರೆ ಕನ್ನಡದ ಟ್ರೇಲರ್ ಗಾಗಿ ಮಾತ್ರ ಖುದ್ದು ಸಲ್ಮಾನ್ ಕನ್ನಡದಲ್ಲೇ ಮಾತನಾಡಿರುವುದು ವಿಶೇಷ.

ಮುಂಬೈನಿಂದ ವಿಡಿಯೋ ಕಾನ್ಫರೆನ್ಸ್ ನಡೆಸಿದ   ಚಿತ್ರತಂಡ ಟ್ರೇಲರ್ ಬಿಡುಗಡೆ ಮತ್ತು ಮಾಧ್ಯಮಗೋಷ್ಠಿಯನ್ನು ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ನೆರವೇರಿಸಿತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ಸಲ್ಮಾನ್ ಖಾನ್, ನಾಯಕಿಯರಾದ ಸಾಯಿ ಮಂಜ್ರೇಕರ್, ಸೋನಾಕ್ಷಿ ಸಿನ್ಹಾ ಮತ್ತು ನಿರ್ದೇಶಕ ಪ್ರಭುದೇವ ಮೊದಲಾದವರು ಭಾಗವಹಿಸಿದರು.

ಸುದೀಪ್ ಜತೆಗಿನ ಸ್ನೇಹ

ಸುದೀಪ್ ಮತ್ತು ತಮ್ಮ ಸ್ನೇಹದ ಬಗ್ಗೆ ಮಾತನಾಡಿದ ಸಲ್ಮಾನ್, ನಿಜಕ್ಕೂ ಅವರು ದಕ್ಷಿಣದ ಬೆಸ್ಟ್ ಸ್ಟಾರ್. ಹಾಗಾಗಿಯೇ ಅವರನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ನಿಜವಾಗಿ ಅವರು ನನ್ನ ತಮ್ಮನ ಸ್ನೇಹಿತ. ತಮ್ಮ ಸೊಹೈಲ್ ಮೂಲಕ ನನಗೆ ಪರಿಚಯವಾದರು. ಸಿಸಿಎಲ್ ಮೂಲಕ ನಾವು ಆಪ್ತರಾದೆವು ಎಂದರು. ವಿದೇಶದಲ್ಲಿ ಚಿತ್ರೀಕರಣಕ್ಕೆ ಹೋಗಿರದಿದ್ದಲ್ಲಿ ಅವರು ನಮ್ಮೊಂದಿಗೆ ಇರಬೇಕಾಗಿತ್ತು ಎಂದು ಸಲ್ಮಾನ್ ಹೇಳಿದರು.

 

ಸಿನಿಮಾ ಎಂದರೇನೇ ಹಬ್ಬ

ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿರುತ್ತೇವೆ. ಯಾಕೆಂದರೆ ಸಿನಿಮಾ ಅಂದರೇನೇ ಹಬ್ಬ. ನನ್ನ ಸಿನಿಮಾಗಳು ಈದ್ ನಲ್ಲಿ ಬಿಡುಗಡೆಯಾಗುತ್ತಿರುತ್ತವೆ. ಈ ಬಾರಿ ಕ್ರಿಸ್ಮಸ್ ಸಂದರ್ಭದಲ್ಲಿ ತೆರೆ ಕಾಣುತ್ತಿದೆ. ಮುಂದಿನ ಈದ್ ಸಮಯದಲ್ಲಿ ರಾಧೆ ಚಿತ್ರ ತೆರೆಕಾಣುವ ಸಾಧ್ಯತೆ ಇದೆ ಎಂದರು ಸಲ್ಮಾನ್. ಈ ಬಾರಿ ಯಾಕೆ ಈದ್ ಹಬ್ಬಕ್ಕೆ ಚಿತ್ರ ಬಿಡುಗಡೆಗೊಳಿಸಲಿಲ್ಲ ಎನ್ನುವ ಪ್ರಶ್ನೆಗೆ ಇದು ಅವರ ಉತ್ತರವಾಗಿತ್ತು.

 

ಕೆಜಿಎಫ್ ನೆನಪಿಸಿಕೊಂಡ ಸಲ್ಮಾನ್

ಈ ಹಿಂದೆ ದಬಂಗ್ ಒಂದು ಹಿಂದಿ ಚಿತ್ರವಾಗಿ ಮಾತ್ರ ಗುರುತಿಸಿಕೊಂಡಿತ್ತು. ಆದರೆ ಇದೀಗ ಚಿತ್ರದ ಮೂರನೇ ಭಾಗವು ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಬಿಡುಗಡೆ ಕಾಣುತ್ತಿದೆ. ಆಯಾ ರಾಜ್ಯಗಳ ಭಾಷಾ ಚಿತ್ರವಾಗಿ ಬಿಡುಗಡೆಗೊಳಿಸುವ ಈ ಪ್ಯಾನ್ ಇಂಡಿಯಾ ಪ್ಲ್ಯಾನ್ ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ನಾವು ದಕ್ಷಿಣದ ಚಿತ್ರಗಳನ್ನು ಕೂಡ ಸ್ವೀಕರಿಸಿದ್ದೇವೆ. ಬಾಹುಬಲಿ ಚಿತ್ರವು ಹಿಂದಿ ಪ್ರೇಕ್ಷಕರನ್ನು ತಲುಪಿದೆ. ಕೆಜಿಎಫ್ ಚಿತ್ರವು ಹಿಂದಿ ಚಿತ್ರದ ಹಾಗೆಯೇ ಗಮನ ಸೆಳೆದಿದೆ. ಈಗಾಗಲೇ ದಬಂಗ್ ಮಾದರಿಯ ಚಿತ್ರಗಳು ದಕ್ಷಿಣದಲ್ಲಿ ಬಂದು ಮೆಚ್ಚುಗೆ ಪಡೆದಿರುವುದರಿಂದ ಈ ಚಿತ್ರವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಿದ್ದೇವೆ ಎಂದರು ಸಲ್ಮಾನ್.

ಸಲ್ಮಾನ್ ಗೆ ಕನ್ನಡದಲ್ಲಿ ಆಫರ್ ನೀಡಿದ ಅನೂಪ್ ಭಂಡಾರಿ!

ಬೆಂಗಳೂರಿನಿಂದ ಲೈವ್ ಕಾನ್ಫರೆನ್ಸ್ ನಲ್ಲಿ ಸಲ್ಮಾನ್ ಜತೆಗೆ ಮಾತನಾಡಿದ ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ, `ತಾವು ಕನ್ನಡದಲ್ಲೇ ನೇರವಾಗಿ ನಟಿಸಲು ಸಿದ್ಧರಿದ್ದೀರ?’  ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್, `ಅಂಥ ಆಫರ್ ಬಂದರೆ ಖಂಡಿತ ನಟಿಸುತ್ತೇನೆ’ ಎಂದರು. ಹಾಗಾದರೆ ನಾನು ಒಬ್ಬ ನಿರ್ದೇಶಕನಾಗಿ ನಿಮಗೆ ಆಫರ್ ನೀಡುತ್ತಿದ್ದೇನೆ. ನಟಿಸುತ್ತೀರ ಎಂದು ಮರು ಪ್ರಶ್ನಿಸಿದರು ಅನೂಪ್. ಅದಕ್ಕೆ ನೀವು ಯಾವ ಸಂಸ್ಥೆಯ ನಿರ್ದೇಶಕರು ಎಂದು ಸಲ್ಮಾನ್ ಕೇಳಿದಾಗ, ನೀವು ಹೇಳುವ ಸಂಸ್ಥೆಯ ನಿರ್ದೇಶಕನಾಗಲು ಸಿದ್ಧ ಎಂದರು ಅನೂಪ್.!

ರಚಿಸಿರುವ ನಿರ್ದೇಶಕ ಅನೂಪ್ ಭಂಡಾರಿಯವರು `ದಬಂಗ್ 3’ ಚಿತ್ರಕ್ಕೆ ಕನ್ನಡದಲ್ಲಿ ಹಾಡುಗಳನ್ನು ರಚಿಸಿದ್ದರೆ, ಸಂಭಾಷಣೆಗಳನ್ನು ಬರೆದವರು `ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ  ನಿರ್ದೇಶಕ ಗುರುದತ್ ಗಾಣಿಗ. ಚಿತ್ರವು ಡಿಸೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

Rate UsDon’t love itNot greatGoodGreatLove itRate Us
bottom of page