ಸರಿಗಮ ನುಡಿಸಿ ಆಡಿಸಿದಾತ ಕದ್ರಿ ಮಣಿಕಾಂತ್
ಕಳೆದ ವರ್ಷ ಜನಪ್ರಿಯತೆಯ ಪಟ್ಟಿಯಲ್ಲಿದ್ದು ಎಲ್ಲರ ಮನಗೆದ್ದ ಹಾಡು, 'ಶಾಕುಂತ್ಲೇ ಸಿಕ್ಕಳು..' ಎನ್ನುವ ಪಲ್ಲವಿ ಹೊಂದಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಮೆಚ್ಚಿ ಗುನುಗಿದ ಈ ಗೀತೆ 'ನಡುವೆ ಅಂತರವಿರಲಿ' ಚಿತ್ರದ್ದು. ಸಿನಿಮಾದ ಹೆಸರಿನಂತೆ ಒಂದಷ್ಟು ಅಂತರ ಇಟ್ಟುಕೊಂಡರೂ ಅವಕಾಶ ಸಿಕ್ಕಾಗಲೆಲ್ಲ ಮೆಲೊಡಿಗಳ ಮೂಲಕ ಮನಸೆಳೆವ ಮಾಂತ್ರಿಕ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ಈ ಹಿಂದೆ ಅವರು ಸಂಗೀತ ಸಂಯೋಜಿಸಿದ್ದ ಸವಾರಿ ೨ ಚಿತ್ರದ ಗೀತೆ 'ನಿನ್ನ ದನಿಗಾಗಿ..' ಹಾಡನ್ನು ಸತತವಾಗಿ ಹತ್ತು ಬಾರಿ ಕೇಳಿ ಕಳೆದುಹೋಗಿದ್ದೇನೆ ಎನ್ನುವ ಪ್ರಶಂಸೆಯನ್ನು ಖುದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಮಾಡಿದ್ದರು. ಅಂಥ ಅಪರೂಪದ ಸಂಗೀತಜ್ಞ ಮಣಿಕಾಂತ್ ಇದೀಗ ಮತ್ತೆ ಬಂದಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ೨೫ ನೇ ಚಿತ್ರವಾದ ಆಡಿಸಿದಾತ ಚಿತ್ರದ ಮೂಲಕ. ಅವರ ಜೊತೆಗಿನ ಮಾತುಕತೆ ಇಲ್ಲಿದೆ.

ನಿಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ 'ವೇರೀಸ್ ಮೈ ಕನ್ನಡಕ';, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಲ್ಲಿ ರಾಜ್ ಬಿ ಶೆಟ್ಟಿಯವರ 'ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಮತ್ತು ಶಶಿಕಾಂತ್ ಗಟ್ಟಿಯವರ 'ರಾಂಚಿ', ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ 'ವರ್ಜಿನ್'. ಕಲಾತ್ಮಕ ಚಿತ್ರವಾದ 'ಕನ್ನೇರಿ' ಹೀಗೆ ಒಂದಷ್ಟು ಕನ್ನಡ ಚಿತ್ರಗಳ ಕೆಲಸ ನಡೆದಿದೆ. 'ಭರತ ಬಾಹುಬಲಿ', 'ಠಕ್ಕರ್', 'ಸಾಗುತ ದೂರ ದೂರ' ಚಿತ್ರಗಳ ಆಡಿಯೋಗಳು ಬಿಡುಗಡೆಗೆ ಕಾದಿವೆ. ಒಟ್ಟಿನಲ್ಲಿ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿಅವಕಾಶಗಳು ಸಿಗತೊಡಗಿವೆ ಎನ್ನಬ ಹುದು.
ಆದರೆ ನೀವು ಚೆನ್ನೈನಲ್ಲಿಯೇ ಸ್ಟುಡಿಯೋ ಮಾಡಿದ್ದೀರಂತೆ?
ಹೌದು ಸ್ಟುಡಿಯೋ ಚೆನ್ನೈನ ಮೈಲಾಪುರದಲ್ಲಿದೆ. ಆದರೆ ನಾನು ಬೆಂಗಳೂರಿನಲ್ಲೇ ಇದ್ದುಕೊಂಡು ಗಾಂಧಿನಗರದ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದೇನೆ. ಅದು ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್ ಮತ್ತು ಸಂಗೀತಜ್ಞರಿಗೆ ಅಭ್ಯಾಸಕ್ಕೆ ಬೇಕಾದಂಥ ಸುಸಜ್ಜಿತ ಜಾಮ್ ರೂಮ್ ಅಲ್ಲಿವೆ. 'ಕದ್ರೀಸ್ ಕೀ ಸ್ಟುಡಿಯೋ' ಚೆನ್ನೈ ನಲ್ಲಿ ನಂಬರ್ ಒನ್ ಸ್ಥಾನದತ್ತ ದಾಪುಗಾಲಿಟ್ಟಿದೆ. ಪ್ರಸ್ತುತ ಚೆನ್ನೈನ ಟಾಪ್ ಸೆವೆನ್ ಸ್ಟುಡಿಯೋಗಳಲ್ಲಿ ಒಂದೆಂಬ ಸ್ಥಾನಮಾನ ಈ ಸ್ಟುಡಿಯೋಗೆ ಲಭಿಸಿದೆ. ಡಾ.ಕೆ.ಜೆ ಯೇಸುದಾಸ್, ವಿಜಯ್ ಯೇಸುದಾಸ್, ಕಾರ್ತಿಕ್ ರಾಜ ಮೊದಲಾದ ಖ್ಯಾತನಾಮ ಸಂಗೀತಗಾರರು ಅಲ್ಲೇ ಹುಡುಕಿಕೊಂಡು ಬಂದು ರೆಕಾರ್ಡಿಂಗ್ ನಡೆಸುತ್ತಿರುವುದು ಹೆಮ್ಮೆ ತಂದಿದೆ.
ಹಾಗಾದರೆ ಅಲ್ಲಿ ಸ್ಟುಡಿಯೋ ಯಾರು ನೋಡಿಕೊಳ್ಳುತ್ತಿದ್ದಾರೆ?
ಅಲ್ಲಿ ಸ್ಟಾಫ್ ಗಳಿದ್ದಾರೆ. ಮಾತ್ರವಲ್ಲ ನನ್ನ ಪತ್ನಿ ಅದಿತಿ ಕೂಡ ಅಲ್ಲೇ ಇದ್ದುಕೊಂಡು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮ್ಯೂಸಿಕ್ ಸ್ಕೂಲ್, ಗಿಟಾರ್, ಕೀ ಬೋರ್ಡ್ ಜೊತೆಗೆ ನೃತ್ಯಾಭ್ಯಾಸವೂ ನಡೆಯುತ್ತದೆ. ನನ್ನ ಪತ್ನಿ ನೃತ್ಯಗಾತಿ ಕೂಡ ಹೌದು. ಅಲ್ಲಿ ಡ್ಯಾನ್ಸ್ ಫಿಟ್ನೆಸ್ ಕೂಡ ಇದೆ. ಸ್ಟುಡಿಯೋ ಎಷ್ಟು ಬ್ಯುಸಿ ಎಂದರೆ ನನ್ನ ರೆಕಾರ್ಡಿಂಗ್ ಗೇ ನಾನೇಬುಕ್ ಮಾಡುವ ಹಾಗಿದೆ. ಎಲ್ಲವೂ ದೇವರ ಅನುಗ್ರಹ ಎಂದುಕೊಳ್ಳುತ್ತೇನೆ. ಸದ್ಯದಲ್ಲೇ ಬೆಂಗಳೂರಿನಲ್ಲಿಯೂ ಸ್ಟುಡಿಯೋ ಮಾಡುವ ಯೋಜನೆ ಇದೆ.