top of page

ಪಂಚ ದಶಕಗಳ ಅನುಭವಿಯ ಮಾತು

ಕರಿಸುಬ್ಬು ಅವರು ಇದುವರೆಗೆ ಸುಮಾರಿ ೨೦೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 'ಅಧ್ಯಕ್ಷ', 'ವಿಷ್ಣುವರ್ಧನ', ಮತ್ತು 'ದಂಡುಪಾಳ್ಯ'ದಲ್ಲಿನ ಅವರ ಪಾತ್ರಗಳು ತುಂಬ ಜನಪ್ರಿಯವಾಗಿದೆ. 'ನಾಗದೇವತೆ', 'ನೀಲಾಂಬರಿ'ಯಂಥ ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಸಾಧನೆ', 'ಚಲಿಸುವ ಮೋಡಗಳು', ' ನಾಲ್ಕುತಂತಿ' ಮೊದಲಾದ ನಾಲ್ಕೈದು ಪ್ರಮುಖ ಧಾರಾವಾಹಿಗಳ ಜೊತೆಗೆ ಹಲವಾರು ಸೀರಿಯಲ್ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಮತ್ತು ಟೆಲಿಫಿಲ್ಮ್ ಗಳಲ್ಲಿಯೂ ನಟಿಸಿದ್ದಾರೆ. ಆದರೆ ಗಾಂಧಿನಗರದ ಮಂದಿಗೆ ಅವರು ಪ್ರಿಯರಾಗಿರುವುದು ಕತ್ರಿಗುಪ್ಪೆಯ ಬಾಲಾಜಿ ಡಿಜಿ ಸ್ಟುಡಿಯೋದ ಮೂಲಕ.

karisubbu.jpg

ನಿಮ್ಮ ಮತ್ತು ಯೋಗರಾಜ್ ಭಟ್ಟರ ಸ್ನೇಹದ ಬಗ್ಗೆ ಹೇಳಿ

ನನ್ನ ಮತ್ತು ಭಟ್ಟರ ಸ್ನೇಹ ೨೦೦೦ದ ಆರಂಭದಿಂದ ಶುರುವಾಗಿದ್ದು. ಅದು ಬಿ.ಸುರೇಶ್ ಅವರ 'ಸಾಧನೆ' ಧಾರಾವಾಹಿಯ ಮೂಲಕ. ಭಟ್ಟರು ಆಗ ಎಪಿಸೋಡ್ ಡೈರೆಕ್ಷನ್ ಮಾಡುತ್ತಿದ್ದರೆ, ಸೂರಿ ಅದರ ಆರ್ಟ್ ಡೈರೆಕ್ಟರ್ ಆಗಿದ್ದರು. ಆಗ ಆರಂಭವಾದ ಗೆಳೆತನದಲ್ಲೇ ನಾನು ಅವರ ನಿರ್ದೇಶನದಲ್ಲಿ 'ಮಣಿ' ಚಿತ್ರವನ್ನು ಮಾಡಿದೆ.  ಆ ಚಿತ್ರಕ್ಕೆ ಸೂರಿ ಕೂಡಾ ಕೆಲಸ ಮಾಡಿದ್ದರು. ಎಲ್ಲವೂ ಸರಿಯಾಗಿದ್ದರೆ ಮಣಿಯ ಬಳಿಕದ ಎರಡನೇ ಚಿತ್ರವನ್ನು ಸೂರಿ ನಿರ್ದೇಶಿಸುವುದು ಎಂದು ಮಾತುಕತೆಯಾಗಿತ್ತು. ಆದರೆ ಮಣಿ ಸೋತ ಕಾರಣ ನಾನು ಸೂರಿಗಾಗಿ ನಾನು ಸಿನಿಮಾ ನಿರ್ಮಿಸುವ ಅವಕಾಶ ದೊರೆಯಲಿಲ್ಲ. ಆದರೆ ಆ ಬಳಿಕ ಎರಡು ಮಂದಿ ಕೂಡ ಕನ್ನಡದ ಸ್ಟಾರ್ ನಿರ್ದೇಶಕರು ಎಂದು ಹೆಸರು ಮಾಡಿರುವುದು ನಿಮಗೆಲ್ಲ ಗೊತ್ತು. ವಿಪರ್ಯಾಸ ಏನೆಂದರೆ ಮಣಿಯ ಬಳಿಕ ನಾವು ' ವಾಸ್ತುಪ್ರಕಾರ' ಸಿನಿಮಾ ಮಾಡಿದೆವು. ದುರಂತ ಎನ್ನುವ ಹಾಗೆ ಆ ಚಿತ್ರವೂ ನಮ್ಮ ಕೈ ಹಿಡಿಯದೇ ಹೋಯಿತು. ಆದರೆ ಈ ಸೋಲು ಗೆಲುವು ಎನ್ನುವುದು ನನ್ನ ಮತ್ತು ಭಟ್ಟರ ನಡುವಿನ ಸಂಬಂಧಕ್ಕೆ ಯಾವುದೇ ಧಕ್ಕೆ ತಂದಿಲ್ಲ. ಭಟ್ಟರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತವೆ. ಹೀಗೆ ಅಪರೂಪಕ್ಕೆ ಒಂದು ಪಾತ್ರ ನನಗೂ ಕೊಡುತ್ತಾರೆ ಎನ್ನುವಲ್ಲಿಗೆ ನನ್ನ ಭಟ್ಟರ ಆತ್ಮೀಯತೆ ಹಾಗೆಯೇ ಉಳಿದುಕೊಂಡಿದೆ. ಆದರೆ ಅದೇನು ಕಾರಣವೋ ಗೊತ್ತಿಲ್ಲ ಸೂರಿ ಮಾತ್ರ ಆತನ ಆತ್ಮೀಯ ವಲಯದಲ್ಲಿ ನನ್ನನ್ನು ಉಳಿಸಿಕೊಂಡಿರುವಂತೆ ಕಾಣುತ್ತಿಲ್ಲ !


ಸೂರಿ ನಿಮ್ಮಲ್ಲಿ ಆತ್ಮೀಯತೆ ಉಳಿಸಿಕೊಂಡಿಲ್ಲ ಎಂದು ಅನಿಸಲು ಕಾರಣವೇನು ?

ಸೂರಿ ನಿರ್ದೇಶಿಸಿದ ಸಿನಿಮಾಗಳನ್ನು ನೋಡುತ್ತಿದ್ದರೆ ಅದರಲ್ಲಿ ನಾನು ಮಾಡಬಹುದಾದ ಎಷ್ಟೋ ಪಾತ್ರಗಳು ಇವೆ ಎಂದು ನನಗೆ ಅನಿಸಿದ್ದಿದೆ. ಆದರೆ ಇಷ್ಟು ವರ್ಷಗಳಲ್ಲಿ ಅವರು ಒಮ್ಮೆಯೂ ನನಗೆ ಒಂದು ಪಾತ್ರ ನೀಡಿಲ್ಲ. ಬಬುಶಃ  ಅವರ ಕಲ್ಪನೆಯ ಪಾತ್ರಗಳಿಗೆ ಜೀವ ಕೊಡುವಷ್ಟು ಸಾಮರ್ಥ್ಯದ ನಟನಾಗಿ ನಾನು ಕಂಡಿರಲಿಕ್ಕಿಲ್ಲವೇನೋ ! 'ಸಾಧನೆ' ಧಾರವಾಹಿಯಲ್ಲಿ ನನ್ನ ಟ್ರ್ಯಾಕ್ ಅನ್ನು ಚೆನ್ನಾಗಿ ತೋರಿಸುವಲ್ಲಿ ಭಟ್ಟರ ಮತ್ತು ಸೂರಿಯ ಪ್ರಯತ್ನವಿತ್ತು. ಆದರೆ ಸಿನಿಮಾ ವಿಚಾರದಲ್ಲಿ ಇಬ್ಬರಿಗೂ ನನ್ನ ಮೇಲೆ ನಂಬಿಕೆ ಬಂದ ಹಾಗಿಲ್ಲ. ಯಾಕೆಂದರೆ ಭಟ್ಟರು ಕೂಡ ಇದುವರೆಗೆ  ನನಗೆ ಒಂದೆರಡು ಚಿತ್ರಗಳಲ್ಲಿ ಸಣ್ಣದಾಗಿ ಬಂದು ಹೋಗುವಂಥ ಪಾತ್ರಗಳನ್ನು ಮಾತ್ರ ಕೊಟ್ಟಿದ್ದಾರೆ. ಆದರೆ ಸೂರಿಯವರು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ನಮ್ಮ ಸ್ಟುಡಿಯೋಗೆ ಬರುತ್ತಿಲ್ಲ ಎನ್ನುವುದು ಸತ್ಯ. ಬಹುಶಃ ಅವರಿಗೆ ಏನು ಅನಿವಾರ್ಯತೆ ಇದೆಯೋ ಗೊತ್ತಿಲ್ಲ. ಆದರೆ ನನ್ನ ಸ್ಟುಡಿಯೋ ಆಗಿ ೭೦೦ ಚಿತ್ರಗಳ ಕೆಲಸ ಅಲ್ಲಿ ನಡೆದಿದ್ದರೂ, ಸೂರಿಯ ಸಿನಿಮಾ ಕೆಲಸಗಳು ಮಾತ್ರ ಅಲ್ಲಿ ನಡೆದಿಲ್ಲವೆನ್ನುವುದು ವಿಚಿತ್ರವಾದರೂ ಸತ್ಯ. ಬಹುಶಃ ನನ್ ಮಾತಿನ ರೀತಿಯೇ ಸೂರಿಗೆ ಇಷ್ಟವಾಗದಿರಬಹುದು. ಯಾಕೆಂದರೆ ನಾನು ಧಾರಾವಾಹಿ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದೆನೋ ಅದೇ ರೀತಿ ಇಂದಿಗೂ ಸಿಕ್ಕಾಗ ಮಾತನಾಡಿಸುತ್ತೇನೆ. ಅದನ್ನು ಅವರ 'ಈಗೋ' ಒಪ್ಪಿಕೊಳ್ಳದೇ ಹೋಗಿದ್ದರೂ ಅಚ್ಚರಿ ಇಲ್ಲ. ಆದರೆ ಮನೆ ಮಕ್ಕಳಂತೆ ಇದ್ದವರು ಹೊರಗಡೆ ಸಿಕ್ಕಾಗ ನಾಟಕೀಯವಾಗಿ ಮಾತನಾಡಿ ನನಗೆ ಅಭ್ಯಾಸವಿಲ್ಲ.

ನಿಮ್ಮ ನಟನಾಸಕ್ತಿಗೆ ಪೂರಕವಾಗಿ ಧಾರವಾಹಿಗಳಿಂದ ಸಾಕಷ್ಟು ಆಫರ್ ಗಳು ಇವೆ ತಾನೆ ?

ಧಾರಾವಾಹಿಗಳಿಗೆ ತಿಂಗಳುಗಟ್ಟಲೆ ಕಾಲ್ ಶೀಟ್ ಪಡೆದುಕೊಳ್ಳುತ್ತಾರೆ. ನನಗೆ ಇತರ ಕೆಲಸಗಳು ಇರುವುದರಿಂದಾಗಿ ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಕ್ಕಿಂತ ನನಗೆ ಈಗ ನಟಿಸಿ ದುಡ್ಡು ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರಗಳ ಮೂಲಕ ಜನರು ಗುರುತಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಇರುತ್ತದೆ. ಆದರೆ ಧಾರವಾಹಿಗಳ ವಿಚಾರ ಗೊತ್ತಲ್ಲ. ನಿಮಗೆ ? ಅದು ಎಷ್ಟೇ ಚೆನ್ನಾಗಿರುವ ಪಾತ್ರವಾಗಿದ್ದರೂ ಪ್ರಸಾರವಾಗುವ ದಿನಗಳಲ್ಲಿ ಮಾತ್ರ ವೀಕ್ಷಕರ ಮನದಲ್ಲಿರುತ್ತದೆ. ಟೆಲಿಕಾಸ್ಟ್ ನಿಂತ ಮೇಲೆ ನಾನೇ ಹಿಂದೆ ಅಭಿನಯಿಸಿದ ಧಾರಾವಾಹಿಗಳ ಬಗ್ಗೆ ನೆನಪಿಸಿಕೊಂಡರೂ ಗುರುತಿಸುವವರು ಇರುವುದಿಲ್ಲ ಎನ್ನುವುದು ಸತ್ಯ. ಆದರೆ ಸಿನಿಮಾ ಹಾಗಲ್ಲ.

ಉದಾಹರಣೆಗೆ ಇತ್ತೀಚೆಗೆ ಹಳೆಯ ಸಿನಿಮಾ 'ಹೊಸನೀರು' ಚಂದನದಲ್ಲಿ ಬರುತ್ತಿರಬೇಕಾದರೆ ದೆಹಲಿಯಿಂದ ಪರಿಚಿತರು ಫೋನ್ ಮಾಡಿ 'ನೀವೇನಾ ಅದು?' ಎಂದು ಕೇಳಿ ಅಚ್ಚರಿ ಪಟ್ಟರು. ೩೩ ವರ್ಷಗಳ ಹಿಂದೆ ಬಂದಂಥ 'ಒಂದು ಮುತ್ತಿನ ಕತೆ' ಚಿತ್ರದಲ್ಲಿನ ನನ್ನ ಪಾತ್ರವನ್ನು ಇಂದಿಗೂ ಗುರುತಿಸಿ ಮಾತನಾಡುವವರಿದ್ದಾರೆ. ಆದರೆ ಆ ಖುಷಿ ಧಾರಾವಾಹಿ ಕೊಡುವುದಿಲ್ಲ.

ಫಾರ್ಮ್ ನಲ್ಲಿರುವ ಪ್ರತಿಭಾವಂತ ಪೋಷಕ ನಟರಾಗಿದ್ದರೂ ನಿಮಗೇನೇ ನಿರೀಕ್ಷಿತ ಪಾತ್ರಗಳು ಸಿಗುತ್ತಿಲ್ಲ ಎಂದರೆ ಹೇಗೆ ?

ಹಾಗೇನಿಲ್ಲ. ನಾನು ೪೯ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಇಷ್ಟು ವರ್ಷಗಳಲ್ಲಿ ನಟನಾಗಿ ನಾನು ಪಾತ್ರ ಕೇಳಿಕೊಂಡು ಹೋಗಿದ್ದಿಲ್ಲ. ಬಹುಶಃ ಅದೇ ಕಾರಣಕ್ಕೆ ನಟನಾಗಿ ಆಹ್ವಾನಿಸದೇ ಇರವಹುದು. ಹಾಗಂತ ಚಿತ್ರೋದ್ಯಮದವರೆಲ್ಲ ನನಗೆ ಆತ್ಮೀಯವಾಗಿಯೇ ಇದ್ದಾರೆ. ನಾನು ನಿರ್ಮಾಪಕನಾಗಿ ಸೋತಾಗ, ಗೆದ್ದಾಗ ಜೊತೆಗಿದ್ದವರು ಮತ್ತು ನನ್ನ ವಿಲ್ ಪವರ್ ನಿಂದಾಗಿಯೃ ಇಂದಿನವರೆಗೆ ಖುಷಿಯಿಂದ ಉಳಿದಿದ್ದೇನೆ. ನನ್ನ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಹದಿನಾಲ್ಕು ವರ್ಷಗಳಿಂದ ೭೦೦ ರಷ್ಟು ಚಿತ್ರಗಳ ಕೆಲಸ ನಡೆದಿದೆ. ಅಂದರೆ ವರ್ಷಕ್ಕೆ ೫೦ರ ಹಾಗೆ ಸಿನಿಮಾಗಳು ದೊರಕಿವೆ. ಇಂದು ಸ್ಟುಡಿಯೋಗೆ ಇವತ್ತಿಗೂ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಭಾರತದ ಮಟ್ಟಿಗೆ ಒಂದು ದಾಖಳೇ ಎಂದೇ ಹೇಳಬಹುದು.

ಇಷ್ಟೆಲ್ಲ ಅನುಭವಗಳು ನಿಮಗೆ ಇರುವ ಕಾರಣ ಸಿನಿಮಾಗಳ ಯಶಸ್ಸಿಗೆ ಏನಾದರೂ ಸಲಹೆ ನೀಡಲು ಸಾಧ್ಯವೇ?

ನಾನೇ ಅಲ್ಲ, ಯಾರಾದರೂ ಸಿನಿಮಾಗಳ ಯಶಸ್ಸಿಗೆ ಒಂದು ಸೂತ್ರ ಪತ್ತೆ ಮಾಡಿದರೆ ಇರೋ ಬರೋರೆಲ್ಲ ಚಿತ್ರ ನಿರ್ಮಾಣಕ್ಕೆ ಬರುತ್ತಿದ್ದರು ! ನನ್ನ ಪ್ರಕಾರ ಗೆದ್ದ ಎಲ್ಲ ಸಿನಿಮಾಗಳು ಒಳ್ಳೆಯದಾಗಿರಬೇಕಿಲ್ಲ. ಸೋತ ಎಲ್ಲ ಚಿತ್ರಗಳು ಕೆಟ್ಟದಾಗಿಯೂ ಇರಬೇಕಾಗಿಲ್ಲ. ಉದಾಹರಣೆಗೆ ನನ್ನ 'ಮಣಿ' ಚಿತ್ರವನ್ನು ನೋಡಿದ ಮಾಧ್ಯಮವರಿಂದ ಹಿಡಿದು, ಪ್ರಸ್ತುತ ಟಿವಿಯಲ್ಲಿ ನೋಡುವ ಪ್ರೇಕ್ಷಕರ ತನಕ ಪ್ರತಿಯೊಬ್ಬರು ಮೆಚ್ಚಿ ಮಾತನಾಡುವವರೇ. ಆದರೆ ಚಿತ್ರ ಸೋತಿದ್ದು ಯಾಕೆ ಎಂದು ಇದುವರೆಗೆ ಯಾರಿಗೂ ಹೇಳಲು ಸಾಧ್ಯವಾಗಿಲ್ಲ. ಕನ್ನಡದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಚಿತ್ರಗಳ ಸಕ್ಸಸ್ ರೇಶ್ಯೂ ೫% ಇದೆ. ಕೋಟಿಗಟ್ಟಲೆ ಖರ್ಚು ಮಾಡಿರೋ ಡಬ್ಬಿಂಗ್ ಚಿತ್ರಗಳು ಬಂದವು. ಎಷ್ಟು ಗೆದ್ದವು ? ಅವುಗಳಿಗೂ ಡಿಮ್ಯಾಂಡ್ ಇಲ್ಲ. ಸಿನಿಮಾ ಸಂಗತಿಗಳನ್ನು ಗೌಪ್ಯವಾಗಿರಸಬೇಕು ಎನ್ನುವುದೆಲ್ಲ ಇಂದು ಸಾಧ್ಯವಿಲ್ಲ. ಪ್ರಚಾರದ ಹೆಸರಲ್ಲಿ ಪ್ರತಿಯೊಂದಕ್ಕೂ ಮಾಧ್ಯಮವನ್ನು ಅವಲಂಬಿಸುತ್ತೇವೆ.

'ಫಸ್ಟ್ ಲುಕ್' ನಿಂದ ಸಿನಿಮಾ ಬಿಡುಗಡೆ ತನಕ ಪ್ರತಿಯೊಂದನ್ನು ಮಾಧ್ಯಮದ ಜೊತೆಗೆ ಹಂಚಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ವ್ಯೂವ್ಸ್ ಪಡೆದ ಟ್ರೇಲರ್, ಹಾಡುಗಳಿರುವ ಚಿತ್ರವನ್ನು ಅದರ ಕಾಲುಭಾಗ ಪ್ರೇಕ್ಷಕರೂ ನೋಡದ ಉದಾಹರಣೆಗಳು ನಮ್ಮಲ್ಲಿವೆ. ಯಾಕೆ ಹೀಗೆ? ಯಾರಿಗೂ ಗೊತ್ತಿಲ್ಲ.

ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆಗೆ ಮಲ್ಟಿಪ್ಲೆಕ್ಸ್ ನಲ್ಲಿ ಆರಾಮವಾಗಿ ಚಿತ್ರ ನೋಡಿಪಾಪ್ ಕಾರ್ನ್ ತಿಂದು, ಕೂಲ್ ಡ್ರಿಂಕ್ಸ್ ಕುಡಿದು ಚಿತ್ರ ನೋಡುವುದಾದರೆ ಮಿನಿಮಮ್ ಎಲ್ಲಕ್ಕೂ ಸೇರಿ ನಾಲ್ಕು ಸಾವಿರ ರೂಪಾಯಿ ಖರ್ಚು ಮಾಡಲೇ ಬೇಕಾಗುತ್ತದೆ. ಮಧ್ಯಮ ವರ್ಗದ ದಂಪತಿಗೆ ಇದು ಕಷ್ಟವೇ ಸರಿ. ಹಾಗಾಗಿ ದಂಪತಿಗೆ ಇದು ಕಷ್ಟವೇ ಸರಿ. ಹಾಗಾಗಿ ಮಲ್ಟಿಪ್ಲೆಕ್ಸ್ ನ ಟಿಕೆಟ್ ಮತ್ತು ಫುಡ್ ಐಟಮ್ ಗಳಿಗೆ ಬೆಲೆ ಇಳಿಯೋ ತನಕ ಸಾಮಾನ್ಯ ಪ್ರೇಕ್ಷಕರು ಥಿಯೇಟರ್ ಗೆ ಬಂದು ಸಿನಿಮಾ ನೋಡಲಾರರು. ಒಂದು ತಿಂಗಳು ಬಿಟ್ಟರೆ ಅದೇ ಚಿತ್ರ ಟಿವಿಯಲ್ಲೇ ಬರುವ ಖಾತರಿ ಇರಬೇಕಾದರೆ ಆಗಲೇ ಮನೆಮಂದಿ ಎಲ್ಲ ಫ್ರೀಯಾಗಿ ಕುಳಿತು ನೋಡುವುದೇ ಬೆಟರ್ ಎಂದು ತೀರ್ಮಾನ ಮಾಡುತ್ತಾರೆ !

ನಿಮ್ಮ ಕುಟುಂಬದ ಬಗ್ಗೆ ಹೇಳಿ 

ನನ್ನ ಫ್ಯಾಮಿಲಿಯಲ್ಲಿ ನಾನು ಪತ್ನಿಯ ಬಗ್ಗೆ ಎರಡು ಮಾತು ಹೇಳಲೇಬೇಕು. ಮೂರು ದಶಕದ ದಾಂಪತ್ಯ ಜೀವನ ನನ್ನದು. ಸಿನಿಮಾ ನನಗೆ ಸೋಲು ಕೊಟ್ಟಾಗಲೂ ಮತ್ತೊಂದು ಸಿನಿಮಾ ಮಾಡುವಂತೆ ಬೆಂಬಲವಾಗಿ ನಿಂತವಳು ನನ್ನ ಪತ್ನಿ ಶ್ರೀದೇವಿ.

ಆಕೆಯ ಪ್ರೋತ್ಸಾಹದ ಮಾತುಗಳು ಎಂದಿಗೂ ನನಗೆ ಸ್ಪೂರ್ತಿ. ಅದೇ ರೀತಿ ನನ್ನ ಇಬ್ಬರು ಮಕ್ಕಳು ಅಷ್ಟೇ. ಮಗ ಬಿಶೇಜ್ ಕುಮಾರ್ ಬಿಬಿಎ ಫೈನಲಿಯರ್ ವಿದ್ಯಾರ್ಥಿ. ಸ್ಟುಡಿಯೋದಲ್ಲಿ ಆಸಕ್ತಿ ಇದೆ. ಮ್ಯೂಸಿಕ್ ಕಲೀತಾ ಇದ್ದಾನೆ. ಗುರಿ ತೀರ್ಮಾನಿಸೋದು ಅವನಿಗೆ ಬಿಟ್ಟಿರುವಂಥದ್ದು. ಮಗಳು ಆಕಾಂಕ್ಷ ರಾಜರಾಜೇಶ್ವರಿ ನಗರದಲ್ಲಿ 'ಸುಂದರಿ ಹೌಸ್ ಆಫ್ ಕಲರ್ಸ್' ಎನ್ನುವ ಬೋಟಿಕ ನಡೆಸುತ್ತಿದ್ದಾಳೆ. ಚಿತ್ರರಂಗದವರೇ ಅಲ್ಲಿ ಹೆಚ್ಚಿನ ಲೇಡಿಸ್ ಕಸ್ಟಮರ್ಸ್ ಎನ್ನುವುದು ಖುಷಿಯಿದೆ. ಸುಕೃತಿ, ಸುವರ್ಣಿಕಾ ಎನ್ನುವ ಮುದ್ದಾದ ಮೊಮ್ಮಕ್ಕಳಿದ್ದಾರೆ.

Rate UsDon’t love itNot greatGoodGreatLove itRate Us
bottom of page