top of page

ನಾ ಕಂಡಂತೆ ದರ್ಶನ್

  ಪ್ರೀತಿಯ ಓದುಗರೇ.. ಇದು ನಟ ದರ್ಶನ್ ಅವರ ಕುರಿತಾದ ಹೊಸ ಅಂಕಣ. ಇಲ್ಲಿ ದರ್ಶನ್ ಅವರೊಂದಿಗೆ ಒಡನಾಟ ಇರಿಸಿರುವ ಚಿತ್ರರಂಗದ ದಿಗ್ಗಜರಿಂದ ಹಿಡಿದು, ಅವರೊಂದಿಗೆ ಒಂದೇ ಒಂದು ಫೊಟೋ ತೆಗೆಸಿಕೊಂಡ ಅಭಿಮಾನಿಯ ತನಕ ಅವರವರ ಕಣ್ಣಲ್ಲಿ ದರ್ಶನ್ ಹೇಗೆ ಕಂಡಿದ್ದಾರೆ ಎನ್ನುವುದು ಇಲ್ಲಿ ಅನಾವರಣಗೊಳ್ಳಲಿದೆ. ಈ ಬಾರಿ ನಮ್ಮೊಂದಿಗೆ ಯಜಮಾನ ಚಿತ್ರದ ನಿರ್ಮಾಪಕಿ  ಶೈಲಜಾ ನಾಗ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಪ್ಪದೇ ಓದಿ..

Darshan-Yajamana-2.jpg

ಸ್ನೇಹಕ್ಕೊಬ್ಬನೇ ಯಜಮಾನ

 

ಚಿತ್ರ ನಿರ್ಮಾಣ ಎಂದರೆ ನಾವು ಹಣ ಹಾಕಿ ಹಣ ತೆಗೆಯುವುದನ್ನು ಮಾತ್ರ ಗುರಿಯಾಗಿರಿಸಿಕೊಂಡವರಲ್ಲ. ನಮ್ಮ ನಿರ್ಮಾಣ ಸಂಸ್ಥೆಯದ್ದು ಒಂದು ಸುಂದರವಾದ ಪಯಣ. ಈ ಪ್ರಯಾಣದಲ್ಲಿ ಸಾಕಷ್ಟು ಧಾರಾವಾಹಿ, ಸಿನಿಮಾ ಸೇರಿದಂತೆ ವೈವಿಧ್ಯಮಯ ಪ್ರಾಜೆಕ್ಟ್ಗಳನ್ನು ನೀಡಿದ್ದೇವೆ. ನಾನು ನನ್ನ ಕನಸು, ಪುಟ್ಟಕ್ಕನ ಹೈವೇ ಸೇರಿದಂತೆ ವೈವಿಧ್ಯಮಯ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದೇವೆ. ದರ್ಶನ್ ಅವರನ್ನು ಕಂಡಾಗ ಅವರ ಡೇಟ್ ಸಿಕ್ಕರೆ ಮತ್ತೊಂದು ದೊಡ್ಡ ಮಟ್ಟದ ಚಿತ್ರ ಮಾಡಬಹುದು ಎನ್ನುವ ಆಸೆಯಿತ್ತು. ಯಾವ ಪ್ರೊಡ್ಯೂಸರ್ ತಾನೇ ಅವರ ಜೊತೆಗೆ ಚಿತ್ರ ಮಾಡಲು ಆಸೆ ಪಡಲ್ಲ?

 

   ಡಿ.ಬೀಟ್ಸ್ ಆಡಿಯೋ ಕಂಪನಿ ಗೊತ್ತಲ್ಲ? ಅದು ನನ್ನ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಮಾಲೀಕತ್ವದಲ್ಲಿ ಆರಂಭವಾದಾಗಿನಿಂದ ನನಗೆ ದರ್ಶನ್ ಅವರು ನೇರವಾಗಿ ಪರಿಚಯದಲ್ಲಿದ್ದಾರೆ. ದರ್ಶನ್ ಅವರ ಡೇಟ್ ಪಡೆದುಕೊಳ್ಳಲು ಪ್ರಯತ್ನಿಸಿದ್ದು ನಾನೇ. ಅಫ್ಕೋರ್ಸ್ ಹರಿಕೃಷ್ಣ ಅವರು ದರ್ಶನ್ ಅವರೊಂದಿಗೆ ತುಂಬ ಆಪ್ತರಾಗಿರುವ ಕಾರಣ ಅವರನ್ನು ಕೂಡ ಜೊತೆಯಲ್ಲೇ ಬನ್ನಿ ಎಂದು ಆಹ್ವಾನಿಸಿದ್ದೆ. ಹಾಗೆ ನಾವು ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದೆವು. ಅದು ಬಹುಶಃ 2014ರಲ್ಲಿ. ಅವರು ಖಂಡಿತವಾಗಿ ಸಿನಿಮಾ ಮಾಡೋಣಮ್ಮ ಎಂದಿದ್ದರು. ಡೇಟ್ ಬಗ್ಗೆ ಮಾತನಾಡಿ ಅಂದಾಜು ಇಷ್ಟು ಸಮಯದ ಬಳಿಕ ಮಾತನಾಡೋಣ ಎಂದು ತೀರ್ಮಾನ ಮಾಡಿಕೊಂಡೆವು. ಆನಂತರ ಕತೆಗಳನ್ನು ತಯಾರು ಮಾಡಿದೆವು. ನಾವು ಹೇಳಿದ ‘ಯಜಮಾನ’ದ ಕತೆ ಅವರಿಗೆ ತುಂಬ ಇಷ್ಟವಾಯಿತು. ನನಗೂ ವೈಯಕ್ತಿಕವಾಗಿ ಇದೇ ಕತೆ ಇಷ್ಟವಿತ್ತು. ಹಾಗಾಗಿ ತುಂಬ ಚೆನ್ನಾಗಿ ಸಿಂಕ್ ಆಯಿತು. ಕತೆ ಕೇಳೋದು ಅಷ್ಟೇ. ವೈಯಕ್ತಿಕವಾಗಿ ಅವರೇ ನಿಂತು ಕತೆ ಕೇಳುತ್ತಾರೆ. ಅವರು ತುಂಬಾ ಅಪ್ರೋಚಬಲ್, ಕೋಪರೇಟಿವ್ ಜೊತೆಗೆ ಒಬ್ಬ ಅದ್ಭುತ ಹ್ಯೂಮನ್ ಬೀಯಿಂಗ್ ಎನ್ನುವುದು ನನಗೆ ಅನುಭವಕ್ಕೆ ಬಂದಿರುವ ಸಂಗತಿ. ಕತೆ ಎಲ್ಲ ರೆಡಿಯಾದ ಮೇಲೆ ಒಂದೆರಡು ಸಲ ಆ ವಿಚಾರದಲ್ಲಿ ಕುಳಿತುಕೊಂಡು ಚರ್ಚೆ ನಡೆಸಿದೆವು. ಆನಂತರ ಚಿತ್ರೀಕರಣ ಆರಂಭವಾಯಿತು.

 

ಚಿತ್ರೀಕರಣದಲ್ಲಿಯೂ ಸಹಕಾರಿ

  ಯಜಮಾನ ಶೂಟಿಂಗ್ ಸ್ಪಾಟಲ್ಲಿ ಕೂಡ ದರ್ಶನ್ ಅವರು ತುಂಬ ಸಹಕಾರಿಯಾಗಿದ್ದರು. ಇಷ್ಟು ಗಂಟೆಗೆ ಚಿತ್ರೀಕರಣ ಎಂದು ಹೇಳಿದರೆ ಸರಿಯಾದ ಸಮಯಕ್ಕೆ ಲೊಕೇಶನಲ್ಲಿ ಹಾಜರಿರುತ್ತಾರೆ. ಪೂರ್ತಿ ತಯಾರಿಯೊಂದಿಗೆ ಬಂದಿರುತ್ತಾರೆ. ಸಂಜೆ ಕೂಡ ಅಷ್ಟೇ. ಇದೇ ಹೊತ್ತಿನೊಳಗೆ ಮುಗಿಸಲೇಬೇಕು ಎಂದು ಒತ್ತಡ ಹೇರಿದವರಲ್ಲ. ಅಷ್ಟು ದೊಡ್ಡ ಸುಪರ್ ಸ್ಟಾರ್ ಆಗಿಯೂ ಆ ರೀತಿಯ ಯಾವುದೇ ಹಮ್ಮುಬಿಮ್ಮುಗಳನ್ನು ತೋರಿಸಿಕೊಂಡವರಲ್ಲ. ಒಬ್ಬ ಸಹೋದರನಂತೆ ಹೊಂದಿಕೊಂಡು ಇರುತ್ತಿದ್ದರು. ಕೆಲಸದ ಕಮಿಟ್ಮೆಂಟ್ ಕಡೆಗೆ ಪೂರ್ತಿಯಾಗಿ ಫೋಕಸ್ ಮಾಡಿಕೊಂಡವರು. ನಮ್ಮ ನಿರ್ಮಾಣ ಸಂಸ್ಥೆ ಕೂಡ ‘ವರ್ಕ್ ವರ್ಕ್ ವರ್ಕ್’ ಎಂದೇ ಫೋಕಸ್ ಆಗಿರುವಂಥದ್ದು. ಹಾಗಾಗಿ ನ್ಯೂಟನನ ಮೂರನೇ ನಿಯಮ ಇಲ್ಲಿ ಚೆನ್ನಾಗಿ ಅನ್ವಯವಾಗುತ್ತಿತ್ತು ಎಂದೇ ಹೇಳಬಹುದು. ಯಾಕೆಂದರೆ ನಾವು ಚೆನ್ನಾಗಿದ್ದರೆ ನಮ್ಮ ಸುತ್ತ ಇರುವವರೆಲ್ಲ ಚೆನ್ನಾಗಿರುತ್ತಾರೆ. ದರ್ಶನ್ ಜೊತೆಗೆ ಇಡೀ ತಂಡವೇ ಚಿತ್ರಕ್ಕಾಗಿ ಚೆನ್ನಾಗಿ ಕೆಲಸ ಮಾಡಿದೆ.

 

ಶುದ್ಧ ಸ್ನೇಹಜೀವಿ

 ನಾನು ನೋಡಿದಂತೆ ಅವರು ತುಂಬ ನೈಸ್ ಪರ್ಸನ್. ಅದು ನಮ್ಮಂದಿಗೆ ಮಾತ್ರವಲ್ಲ, ಅವರ ಫ್ಯಾನ್ಸ್ ಜೊತೆಗೆ, ಸ್ಟಾಫ್ ಜೊತೆಗೆ ಫ್ರೆಂಡ್ಸ್ ಜೊತೆಗೆ ನಡೆದುಕೊಳ್ಳುವ ರೀತಿ ಕೂಡ ಅಷ್ಟೇ ಪಾರದರ್ಶಕ ಎನಿಸುವಂಥದ್ದು. ಅವರ ಸ್ನೇಹಿತರ ವಲಯ ಕೂಡ ವಿಶೇಷವಾದದ್ದು. ನನಗೆ ತಿಳಿದಿರುವ ಹಾಗೆ ಅಲ್ಲಿ ಗೆಳೆಯ ದಿನಕ್ಕೆ ಹತ್ತು ರುಪಾಯಿ ಸಂಪಾದಿಸುತ್ತಾನ, ಕೋಟಿ ರುಪಾಯಿ ಸಂಪಾದಿಸುತ್ತಾನ ಎನ್ನುವ ಭೇದ ಭಾವ ಮಾಡದಂಥ ವ್ಯಕ್ತಿ ಅವರು. ಅಂಥ ಗುಣ ಬಹಳಷ್ಟು ಮಂದಿಯಲ್ಲಿ ಇಲ್ಲದೇ ಇರುವಂಥದ್ದು. ಹಾಗಾಗಿ ನಾನು ಕಂಡಿರುವ ದರ್ಶನ್ ಅವರ ವಿಶೇಷತೆಯೇ ಅದು. ಯಾರನ್ನೂ ಹಣದಲ್ಲಿ ಅಳೆಯಲು ಬಯಸದೇ, ವ್ಯಕ್ತಿಯನ್ನು ವ್ಯಕ್ತಿಯಾಗಿ ಮಾತ್ರ ನೋಡುವ ವ್ಯಕ್ತಿತ್ವ ಅವರದು. ಆತ್ಮೀಯತೆ ತೋರಿದ ಯಾರ ಜೊತೆಗೆ ಬೇಕಾದರೂ ಅಲ್ಲೇ ಒಂದೇ ಟೇಬಲ್ನಲ್ಲಿ ಊಟ ಮಾಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇನ್ನು ಅವರ ಪ್ರಕಾರ ಸ್ನೇಹದಲ್ಲಿ ಸ್ನೇಹ ಮಾತ್ರ ಇರುತ್ತದೆ! ಅಂದರೆ ಯಾವುದೋ ಅಜೆಂಡಕ್ಕಾಗಿ ಮಾಡುವಂಥ ಸ್ನೇಹ ಅವರ ಬಳಿ ಇರುವುದಿಲ್ಲ. ಇದೆಲ್ಲವನ್ನು ನಾನು ಗಮನಿಸಿ ತಿಳಿದುಕೊಂಡಿರುವಂಥದ್ದು. ಅವಕಾಶವಾದಿ ಅಲ್ಲವೇ ಅಲ್ಲ ಎನ್ನುವಂಥ ವ್ಯಕ್ತಿ. ಅದಕ್ಕೆ ಅಷ್ಟು ನೇರವಾಗಿ ಅನಿಸಿದ್ದನ್ನು ಮುಖದ ಮೇಲೆಯೇ ಹೇಳಬಲ್ಲವರು. ಅವರಿಗೆ ಯಾವುದೇ ಅಜೆಂಡಾಗಳು ಇರದ ಕಾರಣ ‘ಇದು ನನ್ನ ನಿಲುವು’ ಎಂದು ಯಾವುದೇ ಸಂದರ್ಭದಲ್ಲಿಯೂ ಮನಸ್ಸು ತೆರೆದು ಅಭಿಪ್ರಾಯ ವ್ಯಕ್ತಪಡಿಸಬಲ್ಲರು.

 

    ಅವರು ಯಾರ ಜೊತೆಗಾದರು ನಿಂತರೆಂದರೆ ಮತ್ತೆ ಕೈ ಬಿಡುವ ಸಂಗತಿಯೇ ಇಲ್ಲ. ಅದು ಅವರ ಜೊತೆಗಿರುವ ತಂತ್ರಜ್ಞರು ಆಗಿರಬಹುದು, ಅವರ ಗರಡಿಯಲ್ಲಿ ಇರುವವರು ಆಗಿರಬಹುದು ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಆ ಸಂಸ್ಥೆಯಿಂದ ಎಷ್ಟು ಜನ ತಂತ್ರಜ್ಞರು ಬಂದಿದ್ದಾರೆ ಎನ್ನುವುದನ್ನು ನೋಡಿದಾಗಲೇ ಅದು ಅರ್ಥವಾಗುತ್ತದೆ. ಅದಕ್ಕೆ ದೊಡ್ಡ ಉದಾಹರಣೆ ನಮ್ಮ ವಿ ಹರಿಕೃಷ್ಣ. ಯಜಮಾನ ಚಿತ್ರ ಅವರು ದರ್ಶನ್ ಕಾಂಬಿನೇಶನಲ್ಲಿ ನೀಡುತ್ತಿರುವ 25ನೇ ಚಿತ್ರ. ಇಂದಿನ ಕಾಲಕ್ಕೆ ಒಬ್ಬ ಸ್ಟಾರ್ ಒಬ್ಬನೇ ಸಂಗೀತ ನಿರ್ದೇಶಕನ ಕಾಂಬಿನೇಶನಲ್ಲಿ 25 ಚಿತ್ರಗಳನ್ನು ನೀಡುತ್ತಾನೆ ಎನ್ನುವುದು ಇಂದಿನ ಕಾಲಕ್ಕೆ ದೊಡ್ಡ ವಿಶೇಷವೇ ಸರಿ. ಅವರು ತಮ್ಮ ಪರಿಚಿತ ಕಲಾವಿದರನ್ನೇ ಆಗಲಿ ನನಗೆ ಪರಿಚಯಿಸುವಾಗಲೇ ಆ ಅಕ್ಕರೆ ಇರುವುದನ್ನು ಕಂಡಿದ್ದೇನೆ. ‘ಇವನು ನಮ್ಮ ಹುಡುಗಾಮ್ಮ’ ಎಂದು ಬಾಯ್ತುಂಬ ಹೇಳುತ್ತಾರೆ. ಅದೇ ರೀತಿ ಎಷ್ಟೇ ಒತ್ತಡಗಳಿದ್ದರೂ ತಮ್ಮನ್ನು ಸಿನಿಮಾ ಕಾರ್ಯಕ್ರಮಗಳಿಗೆ ಕರೆದ ಆತ್ಮೀಯರಿಗಾಗಿ ಬಿಡುವು ಮಾಡಿಕೊಳ್ಳಲು ವಿಪರೀತ ಪ್ರಯತ್ನ ಪಡುತ್ತಾರೆ. ಇನ್ಯಾರೋ ನಾಯಕರು ಕರೆದಿದ್ದಾರೆ ಎಂದಾಗ ‘ಅದು ನಮ್ಮ ಕರ್ತವ್ಯ ಅಲ್ವಾಮ್ಮಾ? ನಾನು ಇವತ್ತು ಅಲ್ಲಿಗೆ ಹೋಗಲೇ ಬೇಕಲ್ಲಮ್ಮ? ಅವರು ನಮ್ಮವರು. ನಾವು ಅವರಿಗೆ ಸಹಾಯ ಮಾಡಲೇಬೆಕು. ನಮಗಿನ್ಯಾರೋ ನಿಂತಿರ್ತಾರಲ್ಲಮ್ಮ? ಹಾಗೆ ನಾವು ನಿಲ್ಲಬೇಕಲ್ಲಮ್ಮ’ ಅಂತ ಕಾಳಜಿ ತೋರಿಸುತ್ತಾರೆ. ಎಷ್ಟು ಮಂದಿಯಲ್ಲಿ ಇಂಥ ಗುಣ ಕಾಣುತ್ತೆ ಹೇಳಿ.

 

ನೇರ ಸ್ವಭಾವದ ವ್ಯಕ್ತಿತ್ವ

ಮುಂಗೋಪ ಎನ್ನುವುದಕ್ಕಿಂತ ತುಂಬ ನೇರವಾಗಿ ಅನಿಸಿದ್ದನ್ನು ಅನಿಸಿದ ಹಾಗೆ ಹೇಳುವ ಸ್ವಭಾವ ದರ್ಶನ್ ಅವರದು. ತುಂಬ ಸಾಫ್ಟಾಗಿ, ತುಂಬ ಡಿಪ್ಲೊಮ್ಯಾಟಿಕ್ ಆಗಿ ತುಂಬ ಸುಳ್ಳು ಮಾತಾಡುವಂಥ ವ್ಯಕ್ತಿ ದರ್ಶನ್ ಅಲ್ಲ. ಎಲ್ಲೋ ಯಾರಿಗೋ ಅಲ್ಲ, ಎಲ್ಲರಲ್ಲಿಯೂ ಇದು ಸರಿ, ಇದು ತಪ್ಪು, ಇದು ಹೀಗಿರಬೇಕು ಎಂದು ಹೇಳಬಲ್ಲವರು. ತಪ್ಪು ಅಂತ ಹೇಳಿದಾಗ ಅದನ್ನು ಸ್ವೀಕರಿಸುವ ಮನೋಭಾವ ಇಲ್ಲದವರು ಮಾತ್ರ ಕೋಪ ಅವರು ಕೋಪ ಮಾಡಿಕೊಂಡರು ಎಂದು ಆಪಾದಿಸಿರಬಹುದು. ಅದರ ಹೊರತು ದರ್ಶನ್ ಸುಮ್ಮಸುಮ್ಮನೆ ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಸ್ಟ್ರೈಟ್ ಫಾರ್ವರ್ಡ್ ಎನ್ನುವ ಗುಣ ನನಗೂ ತುಂಬ ಇಷ್ಟವೇ. ನಮ್ಮ ಬಿ.ಸುರೇಶ್ ಅವರದ್ದೂ ಅದೇ ಗುಣ. ಅವರೊಂದಿಗೆ 25 ವರ್ಷ ಸಂಸಾರ ಮಾಡಿದ್ದೇನೆ. ಹಾಗಾಗಿ ನೇರವಂತಿಕೆಯಿಂದ ಮಾತನಾಡುವವರು ತುಂಬ ಸರಿ ಎಂದೇ ನನಗೆ ಅನಿಸುತ್ತೆ.

 

ಅವರು ನಾನ್ವೆಜ್ ಪ್ರಿಯರು ನಿಜ. ಆದರೆ ಅವರು ತಿನ್ನುವುದೇ ತುಂಬ ಕಡಿಮೆ ಎನ್ನಬಹುದು. ಮಾತ್ರವಲ್ಲ ನಾನು ಸಸ್ಯಾಹಾರಿಯಾಗಿರುವ ಕಾರಣ ಅವರಿಗೆ ಯಾವ ಆಹಾರ ಇಷ್ಟ ಎಂದು ಹೇಳುವುದು ಕಷ್ಟ. ನನ್ನ ಊಟ ಕಂಡಾಗ ಎಲ್ಲ ‘ಏನಮ್ಮ ಮೊಸರನ್ನ ತಿಂದ್ಕೊಂಡೇ ಇರ್ತೀರ’ ಎಂದು ರೇಗಿಸಿದ್ದಾರೆ. ಜಿಮ್ ಮಾಡುವುದು ಎಂದರೆ ಅವರಿಗೆ ಇಷ್ಟ. ಅದು ಅವರ ವೃತ್ತಿಗೆ ಸಂಬಂಧಿಸಿದ ವಿಷಯವೂ ಹೌದು. ನಿತ್ಯ ವರ್ಕೌಟ್ ತಪ್ಪಿಸುವುದಿಲ್ಲ. ಬೆಳಿಗ್ಗೆ ಒಂದೂವರೆ ಗಂಟೆ ದೂರದಲ್ಲಿ ಲೊಕೇಶನ್ ಇದೆ ಎಂದರೂ, ಮೊದಲು ಬೆಳಿಗ್ಗೆ ಎದ್ದು ವರ್ಕೌಟ್ ಎಲ್ಲ ಮುಗಿಸಿಯೇ ಬಂದುಬಿಡುತ್ತಾರೆ. ಯಜಮಾನದ ಸೆಟ್ನಲ್ಲಿ ಹಾಡು, ಆ್ಯಕ್ಷನ್ ಎಲ್ಲದಕ್ಕೂ ಮೈಸೂರು ಮತ್ತು ಬೆಂಗಳೂರಲ್ಲಿ ಸುಮಾರು ಹತ್ತು ಹನ್ನೆರಡರಷ್ಟು ಸೆಟ್ ಹಾಕಿದ್ದೆವು. ಚಿಕ್ಕಮಗಳೂರು, ಮುಂಬೈ ಸೇರಿದಂತೆ ಸ್ವೀಡನ್ನಲ್ಲಿ ಕೂಡ ಚಿತ್ರೀಕರಣ ನಡೆಸಿದ್ದೆವು. ಒಟ್ಟು ನೂರಕ್ಕೂ ಅಧಿಕ ದಿನಗಳ ಚಿತ್ರೀಕರಣ ಯಜಮಾನ ಚಿತ್ರಕ್ಕಾಗಿ ಮೀಸಲಾಗಿದೆ. ಮೂರು ದಿನಗಳಲ್ಲೇ ವಾಪಾಸು ಬರಬೇಕಾಯಿತು. ಅದನ್ನು ವಿಎಫ್ಎಕ್ಸ್ ಮೂಲಕ ಪೂರ್ತಿ ಮಾಡಲಾಯಿತು. ಇದು ದರ್ಶನ್ ಅವರಿಗೆ ಹೇಳಿ ಮಾಡಿಸಿದಂಥ ಪಾತ್ರವಾಗಿತ್ತು. ನಮ್ಮ ಚಿತ್ರಕ್ಕೂ ವಿಷ್ಣುವರ್ಧನ್ ಅವರ ಯಜಮಾನನಿಗೂ ಯಾವುದೇ ಸಂಬಂಧವಿರಲಿಲ್ಲ. ಯಾಕೆಂದರೆ ಇಲ್ಲಿ ಅಣ್ಣತಮ್ಮಂದಿರ ಕತೆಯೇ ಇಲ್ಲ. ಇಲ್ಲಿ ಯಜಮಾನ ಎನ್ನುವ ಪದ ಬದುಕಲ್ಲಿ ಪ್ರತಿಯೊಬ್ಬನೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಇರುವಂಥದ್ದಾಗಿತ್ತು. ಅದು ವಿಷ್ಣುವರ್ಧನ್ ಅವರ ಯಜಮಾನ. ಇದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ. ಇದು ಕೂಡ ಶತದಿನೋತ್ಸವ ಆಚರಿಸಿರುವುದು ನಿಮಗೆಲ್ಲ ತಿಳಿದಿರುವ ಸಂಗತಿ. 

 

ಅದ್ಭುತ ನೆನಪಿನ ಶಕ್ತಿ

     ಪ್ರತಿ ದಿನ ಶೂಟಿಂಗ್ಗೆ ಹೋಗುತ್ತಿದ್ದೆ. ಹಾಗಾಗಿ ಸೆಟ್ನಲ್ಲಿ ಕಂಡ ಮತ್ತೊಂದು ಅಚ್ಚರಿಯನ್ನು ನಿಮಗೆ ಹೇಳಲೇಬೇಕು. ನನಗೆ ಡ್ಯಾನ್ಸ್ ಬರಲ್ಲಮ್ಮ. ಡ್ಯಾನ್ಸ್ ಎಲ್ಲ ಮಾಡಕ್ಕಾಗಲ್ಲ ಎನ್ನುತ್ತಿದ್ದರು. ಆ್ಯಕ್ಚುಲಿ ತುಂಬ ಕ್ಯೂಟಾದ ಸ್ಟೆಪ್ಸ್ ಎಲ್ಲ ಹಾಕಿದ್ದಾರೆ. ವೆರಿ ನೈಸ್. ಇನ್ನು ತುಂಬ ಆಶ್ಚರ್ಯ ಎಂದರೆ ಅವರ ಗ್ರಾಸ್ಪಿಂಗ್ ಪವರ್. ದಿನಗಟ್ಟಲೆ ಪ್ರಾಕ್ಟೀಸ್ ಮಾಡುವುದನ್ನು ನೋಡೇ ಇಲ್ಲ. ಅರ್ಧ ಗಂಟೇನೂ ಪ್ರಾಕ್ಟೀಸ್ ಮಾಡದೆ ಶಾಟ್ಗಿಂತ ಸ್ವಲ್ಪ ಮೊದಲು ಮಾಸ್ಟರ್ ಏನು ಮಾಡುತ್ತಾರೆ ಅಲ್ಲೇ ನಿಂತು ನೋಡುತ್ತಾರೆ. ಅವರ ಏಕಾಗ್ರತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ತಕ್ಷಣವೇ ಅದೆಷ್ಟೇ ದೊಡ್ಡ ಶಾಟ್ ಆಗಿದ್ದರೂ ಒಂದೇ ಟೇಕಲ್ಲಿ ರಿಪೀಟ್ ಮಾಡುತ್ತಾರೆ. ನನಗೆ ಮಾತ್ರವಲ್ಲ, ಸೆಟ್ನಲ್ಲಿ ಇರುವವರಿಗೆಲ್ಲ ಇದು ಅಚ್ಚರಿಯ ವಿಚಾರವಾಗಿತ್ತು. ಅವರು ನೃತ್ಯ ಮಾತ್ರವಲ್ಲ ಸಂಭಾಷಣೆ ಕೂಡ ಅಷ್ಟೇ. ಮೊದಲೇ ಡೈಲಾಗ್ ಒದಿ, ಅದಕ್ಕೆ ಪ್ರಿಪರೇಶನ್ ತೆಗೆದುಕೊಳ್ಳುವುದು ಏನೂ ಮಾಡಲ್ಲ. ವೇಗವಾಗಿ ಬರುತ್ತಾರೆ. ಬಂದ ತಕ್ಷಣ ಡೈಲಾಗ್ ನೋಡಿಕೊಳ್ಳುತ್ತಾರೆ. ಆಗಲೇ ಅದನ್ನು ಕ್ಯಾಚ್ ಮಾಡಿ ಸಂಭಾಷಣೆ ಹೇಳುತ್ತಾರೆ. ಅದು ಅವರ ಮೇಜರ್ ಪ್ಲಸ್ ಪಾಯಿಂಟ್ ಎನ್ನಬಹುದು. ನಾನು ಕೂಡ ಧಾರಾವಾಹಿಗಳಲ್ಲಿ ನಟಿಸಿಯೇ ಬಂದವಳಾದ ಕಾರಣ, ದೊಡ್ಡ ಡೈಲಾಗ್ ಒಂದೇ ಟೇಕಲ್ಲಿ ತೆಗೆಯುವಾಗಿನ ಕಷ್ಟವನ್ನು ಬಲ್ಲೆ. ಕಾಸ್ಟೂಮ್ ಚೇಂಜ್ ಮಾಡೋಕೆ ಹೋಗುವಾಗಲೇ ಅಸಿಸ್ಟೆಂಟ್ ಡೈರೆಕ್ಟರ್ನಿಂದ ಸೀನ್ ಪೇಪರ್ ಪಡೆದುಕೊಂಡು ಹೋಗುತ್ತೇನೆ. ಇವರಿಗೆ ಅಂಥ ಯಾವುದೇ ಅಭ್ಯಾಸವಿಲ್ಲ. ಆರಾಮಾಗಿ ಕುಳಿತುಕೊಂಡಿರುತ್ತಾರೆ. ಆದರೆ ಚಿತ್ರೀಕರಣ ಶುರುವಾದ ತಕ್ಷಣ ಅಲರ್ಟಾಗೋ ರೀತಿಯೇ ಅದ್ಭುತ. ನಮ್ಮ ಚಿತ್ರದ ಚಿತ್ರೀಕರಣದ ಸೆಟ್ಗೆ ಅವರ ಪತ್ನಿ ವಿಜಯಲಕ್ಷ್ಮೀ, ಮಗ ಎಲ್ಲರೂ ಬಂದಿದ್ದರು. ಒಂದು ಹಾಡಿನ ಸನ್ನಿವೇಶವೊಂದರಲ್ಲಿ ಮಗನೂ ಕಾಣಿಸಿಕೊಂಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ದರ್ಶನ್ ಗೆ ಮತ್ತು ಅವರ ಚಿತ್ರ ನೋಡಿ ಪ್ರೋತ್ಸಾಹಿಸಿದ ಎಲ್ಲ ಅಭಿಮಾನಿಗಳಿಗೆ ವಂದನೆಗಳು.

Rate UsDon’t love itNot greatGoodGreatLove itRate Us
bottom of page