top of page

ನಿರ್ಮಾಪಕರ ಪ್ರಕಾರ

ಸಿನಿಮಾಗಳಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಂಡು ಅದರ ಸೃಷ್ಟಿಕರ್ತರಾಗಿದ್ದುಕೊಂಡು ಕೂಡ ಗುರುತಿಸಲ್ಪಡದೇ ಹೋಗುವ ಒಂದು ವರ್ಗವಿದೆ. ಅವರೇ ನಿರ್ಮಾಪಕರು. ಡಿಮಾನಿಟೈಸೇಷನ್ ಬಳಿಕ ಕೂಡ ಚಿತ್ರರಂಗ ಉಳಿದುಕೊಂಡಿದ್ದರೆ ಅದು ಸಿನಿಮಾವನ್ನು ಮೆಚ್ಚಿ ದುಡ್ಡು ಹಾಕಲು ತಯಾರಾಗಿರುವ ನಿರ್ದೇಶಕರು ಇರುವ ಕಾರಣ ಮಾತ್ರ. ಅಷ್ಟಾದರೂ ಸಿನಿಮಾ ಹೆಸರಿನ ಕೆಳಗೆ ನಿರ್ಮಾಪಕ ಎಂದು ದುಂಡಗಿನ ಅಕ್ಷರಗಳಲ್ಲಿ ಹೆಸರು ಅಚ್ಚಾಗುವುದು ಬಿಟ್ಟರೆ ಬೇರೆ ಯಾವ ಲಾಭವೂ ಆತನಿಗೆ ದೊರಕುವುದಿಲ್ಲ. ಯಾಕೆಂದರೆ ನಿರ್ಮಾಪಕ ಎಷ್ಟೇ ದುಡ್ಡು ಹಾಕಿದರೂ ಅದನ್ನು ನಿರ್ದೇಶಕರ ಚಿತ್ರವಾಗಿಯೇ ಗುರುತಿಸಲಾಗುತ್ತದೆ. ಮಾತ್ರವಲ್ಲ ಚಿತ್ರ ನೋಡಿದವರು ಕಲಾವಿದರು, ನಿರ್ದೇಶಕರ ಬಗ್ಗೆ ಮಾತನಾಡುತ್ತಾರೆಯೇ ಹೊರತು ನಿರ್ಮಾಪಕರನ್ನು ನೆನಪಿಸಿಕೊಳ್ಳುವುದೇ ಇಲ್ಲ. ನೂರಾರು ಕೋಟಿ ಬಜೆಟ್ ಹೂಡಿದ್ದರೆ ಮಾತ್ರ ನಿರ್ಮಾಪಕರ ಹೆಸರು ನೆನಪಿಸಿಕೊಳ್ಳಬೇಕು ಎನ್ನುವಂಥ ಪರಿಸ್ಥಿತಿ ಬಂದಿದೆ. ಆದರೆ ನಿಜದಲ್ಲಿ ಬಿಡುಗಡೆಯಾಗುವ ನೂರಾರು ಚಿತ್ರಗಳಲ್ಲಿ ನಿರ್ಮಾಪಕರಿಗೆ ಲಾಭ ತರುವ ಚಿತ್ರಗಳು ಹತ್ತು ಹದಿನಾರು ಚಿತ್ರಗಳು ಮಾತ್ರ! ಇದು ನಂಬಿಕೆಗೆ ಕಷ್ಟವಾದರೂ ನಡೆಯುತ್ತಿರುವಂಥ ಸತ್ಯ. ಹೀಗಿದ್ದರೂ ಪ್ರತಿ ವರ್ಷ ಹೊಸ ನಿರ್ಮಾಪಕರ ದಂಡೇ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಬಿಡುಗಡೆಯಾಗುವ 240 ಚಿತ್ರಗಳಲ್ಲಿ ಸುಮಾರು 40ರಷ್ಟು ಚಿತ್ರಗಳ ನಿರ್ಮಾಪಕರು ತಮ್ಮ ಮಗನನ್ನೋ, ತಮ್ಮನನ್ನೋ ಅಥವಾ ಕುಟುಂಬದ ಇನ್ನಾರನ್ನೋ ಸಿನಿಮಾದಲ್ಲಿ ಮೆರೆಸಬೇಕು ಎನ್ನುವ ಆಸೆ, ಒತ್ತಡದಿಂದ ಮಾಡಿರುತ್ತಾರೆ. ಇನ್ನು ಸುಮಾರು ನೂರು ನೂರೈವತ್ತು ಚಿತ್ರಗಳ ನಿರ್ಮಾಪಕರು ಲಾಭ ಮಾಡಲೆಂದೇ ಚಿತ್ರೋದ್ಯಮಕ್ಕೆ ಬಂದಿರುತ್ತಾರೆ. ಅವರಿಗೆಲ್ಲ ನೂರಾರು ಕೋಟಿ ಬಾಚಿದ ಮುಂಗಾರು ಮಳೆಯಂಥ ಚಿತ್ರಗಳನ್ನು ಉದಾಹರಣೆ ಹೇಳಿ ಚಿತ್ರ ಮಾಡಿಸುವವರು ಇರುತ್ತಾರೆ ಹೊರತು, ನೂರಾರು ಸೋಲುಗಳ ಬಗ್ಗೆ ತುಟಿ ಪಿಟಿಕ್ ಎನ್ನುವವರು ಇರುವುದಿಲ್ಲ. ಇನ್ನು ಉಳಿದ  ಸುಮಾರು ನೂರರಷ್ಟು ನಿರ್ಮಾಪಕರು ಖರ್ಚಾದ ದುಡ್ಡು ವಾಪಾಸು ಬಂದರೆ ಸಾಕು, ಆದರೆ ಸಿನಿಮಾ ನಿರ್ಮಾಪಕರಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿಂದಲೂ ಬರುತ್ತಾರೆ. ವಿಚಿತ್ರ ಎಂದರೆ ಇವರ ಯಾವ ಆಸೆಗಳು ಕೂಡ ಚಿತ್ರರಂಗದಲ್ಲಿ ನೆರವೇರುವ ಸಂಭವಗಳೇ ಇರುವುದಿಲ್ಲ. ಆದರೆ ಅವರ ಹಣದಿಂದ ಸೃಷ್ಟಿಯಾದ ಚಿತ್ರಗಳನ್ನು ಕಂಡ ನಾವು ಹಾಗೆ ಆ ಋಣವನ್ನು ಮರೆಯಲು ಸಾಧ್ಯವೇ? ದುಡ್ಡು ಕೊಟ್ಟ ಚಿತ್ರದ ನಾಯಕನನ್ನು ಆತ್ಮೀಯವಾಗಿ ಕಾಣುವ ನಾವು ದುಡ್ಡು ಹಾಕಿದ ನಿರ್ಮಾಪಕನ ಪರಿಚಯ ಇರಿಸಿಕೊಳ್ಳುವುದು ತಪ್ಪಲ್ಲ ತಾನೇ?  ಅದಕ್ಕೆಂದೇ ಇಲ್ಲೊಂದು ಹೊಸ ಅಂಕಣವಿದೆ. ಅದರ ಹೆಸರೇ ನಿರ್ಮಾಪಕರ ಪ್ರಕಾರ. ಒಂದೇ ಒಂದು ಚಿತ್ರ ಮಾಡಿದರೂ ಆ ನಿರ್ಮಾಪಕರ ಸಂಪೂರ್ಣ ಪರಿಚಯ ಇಲ್ಲಿ ಇರುತ್ತದೆ. ಅದನ್ನು ನೇರವಾಗಿ ಅವರೊಂದಿಗೆ ಮಾತನಾಡಿಯೇ ಪಡೆದುಕೊಂಡಿರುತ್ತೇವೆ.

ಹೆಚ್ಚಿನ ‌ವಿವರಗಳು ಸದ್ಯದಲ್ಲೇ...

bottom of page