ಪಾತೂರು ಮಾತು
ನಮಸ್ಕಾರ..
ನನ್ನ ಹೆಸರು ಶಶಿಕರ ಪಾತೂರು. ಪತ್ರಕರ್ತನಾಗಿ ಇದು ನನಗೆ ಹದಿನೇಳನೆಯ ವರ್ಷ. ಹದಿನೆಂಟರ ತಾರುಣ್ಯ ತಲುಪುವ ಹೊತ್ತಲ್ಲಿ ಮೂಡಿರುವ ಹೊಸ ಆಸೆ ಈ ಸಾಮಾಜಿಕ ಜಾಲತಾಣ, ಪಾಸಿಟಿವ್ ಪಿಕ್ಚರ್.

Positive with Pathuru
ಇಷ್ಟು ವರ್ಷಗಳಲ್ಲಿ ಹಲವಾರು ಪತ್ರಿಕೆಗಳಿಗೆ ಲೆಕ್ಕವಿಲ್ಲದಷ್ಟು ಲೇಖನ, ಸಂದರ್ಶನಗಳನ್ನು ಮಾಡಿದ್ದೇನೆ. ಎಲ್ಲ ಕಡೆಯಿಂದ ಪ್ರೋತ್ಸಾಹ ಲಭಿಸಿವೆ. ಆದರೆ ಎಲ್ಲವನ್ನೂ ನನಗೆ ತೋಚಿದ ಹಾಗೆ ಮಾಡಲು ಸಾಧ್ಯವಾಗಿದೆಯಾ ಎಂದರೆ ಸಾಧ್ಯವಾಗಿಲ್ಲ. ಇನ್ನೊಂದು ಸಂಸ್ಥೆಯಲ್ಲಿ ನೌಕರನಾಗಿದ್ದಾಗ ಅದು ಸಹಜ ಕೂಡ. ಈಗಲೂ ನಾನು ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೇನೆ. ಅದರ ಹೆಸರು ನಮ್ ರೇಡಿಯೋ. ಅಲ್ಲಿ ವರದಿಗಾರನಾಗಿದ್ದುಕೊಂಡೇ ನನ್ನ ಆಸಕ್ತಿಯ ಬರವಣಿಗೆಯ ಕ್ಷೇತ್ರಕ್ಕೆ ಈ ತಾಣವನ್ನು ಆಯ್ದುಕೊಂಡಿದ್ದೇನೆ.
ಸಿನಿಮಾರಂಗವೆಂದರೆ ಆಸಕ್ತಿ ಇರದವರು ಕಡಿಮೆ. ಇಷ್ಟ ಪಡದವರು ದ್ವೇಷಿಸಲಿಕ್ಕಾದರೂ ಸಿನಿಮಾ ಬಗ್ಗೆ ಮಾತನಾಡುತ್ತಿರುತ್ತಾರೆ! ಹಾಗಾಗಿಯೇ ಚಿತ್ರರಂಗದ ನೆಗೆಟಿವ್ ಸುದ್ದಿಗಳು ಹೆಚ್ಚು ಚಾಲ್ತಿಯಲ್ಲಿರುತ್ತವೆ. ಅವುಗಳನ್ನೇ ಮಾರ್ಕೆಟ್ ಮಾಡಿಕೊಂಡವರಿಗೂ ಕೊರತೆ ಇಲ್ಲ. ಆದರೆ ಪಾಸಿಟವ್ ಆಗಿ ಯಾಕೆ ಥಿಂಕ್ ಮಾಡಬಾರದು ಎನ್ನುವ ಬಗ್ಗೆ ಸಿಕ್ಕಾಗೆಲ್ಲ ಮಾತನಾಡುತ್ತಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್! ಒಂದಾನೊಂದು ಕಾಲದಲ್ಲಿಅವರ ಚಿತ್ರಗಳನ್ನು ನೋಡಿಯೇ ಸಿನಿಮಾರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನನಗೆ ಇಲ್ಲಿಯೂ ಅವರ ಮಾತುಗಳೇ ಸ್ಫೂರ್ತಿಯಾದವು. ನೆಗೆಟಿವ್ ನಿಂದ ಬಿಸ್ನೆಸ್ ಮಾಡುವುದರ ಬದಲು ಪಾಸಿಟಿವ್ ನತ್ತ ಗಮನ ಹರಿಸಲು ಪ್ರೇರಣೆಯಾಗೋಣ ಅನಿಸಿತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಅಷ್ಟೇ; ನಾವು ಇನ್ನೊಬ್ಬರ ಕಡೆಗೆ ಬೊಟ್ಟು ತೋರಿಸುವ ಮೊದಲು ನಾವು ಪಾಸಿಟಿವ್ ಆಗಿರೋಣ ಎನ್ನುತ್ತಿದ್ದರು. ಲಾಸ್ ಆದರೂ ಪರವಾಗಿಲ್ಲ ಎಥಿಕ್ಸ್ ಮರೆತು ಸಿನಿಮಾ ಮಾಡಬಾರದು ಎನ್ನುವ ನಿರ್ಮಾಪಕರಾಗಲು ಅವರು ಸಿದ್ಧರಿರುವಾಗ, ನಷ್ಟವಾದರೂ ಪರವಾಗಿಲ್ಲ ಬ್ರೇಕಿಂಗ್ ನ್ಯೂಸ್ ಗಾಗಿ ಅವಸರದಲ್ಲಿ ಎಂದು ಅಸ್ಪಷ್ಟವಾದ ಸುದ್ದಿಗಳನ್ನು ಹರಡದಿರುವ ತೀರ್ಮಾನ ನನ್ನದಾಯಿತು. ಅದರ ಫಲವೇ ಈ ಪಾಸಿಟಿವ್ ಪಿಕ್ಚರ್.
ಸಾಮಾನ್ಯವಾಗಿ ಎಲ್ಲ ಸುದ್ದಿಗಳಿಗೂ ಎರಡು ಮುಖಗಳಿರುತ್ತವೆ. ಎಲ್ಲರಲ್ಲಿ ಕೂಡ ಹೇಗೆ ನೆಗಟಿವ್ ಕೂಡ ಇರುತ್ತದೆಯೋ ಅದೇ ರೀತಿ ಏನಾದರೊಂದು ಪಾಸಿಟಿವ್ ಇದ್ದೇ ಇರುತ್ತವೆ. ಆದರೆ ನಮ್ಮಲ್ಲಿ ಯಾವುದೇ ಜನಪ್ರಿಯ ವ್ಯಕ್ತಿ ಸಾಯುವ ತನಕ ಆತನ ಮೈನಸ್ ಗಳ ಬಗ್ಗೆ ಹುಡುಕಿ ಮಾತನಾಡಿ ಸತ್ತ ಮೇಲೆ ಹೊಗಳುವ ಅಭ್ಯಾಸ ಮಾಡಿಕೊಂಡಿದ್ದೇವೆ. ಇಂದು ಒಬ್ಬನ ನೆಗೆಟಿವ್ ಬಗ್ಗೆ ತಿಳಿದುಕೊಳ್ಳಲು ನೂರಾರು ದಾರಿಗಳಿವೆ. ಆದರೆ ಪಾಸಿಟಿವ್ ತಿಳಿಯಲು ಆತ ಸಾಯಲೇಬೇಕಾದ ಅನಿವಾರ್ಯತೆ ಇದೆ! ಆದರೆ ಅದನ್ನು ಮುರಿಯಲೆಂದೇ ನಾವು ಎಲ್ಲರ ಪಾಸಿಟಿವ್ ಮುಖಗಳ ಪರಿಚಯ ಮಾಡಿಕೊಡುತ್ತೇವೆ. ಹಾಗಂತ ಇದು ಸಿಕ್ಕವರಿಗೆಲ್ಲ ಬಕೆಟ್ ಹಿಡಿದು ಪ್ರಾಯೋಜಕತ್ವ ಪಡೆಯುವ ಸಂಚು ಎಂದು ಅಂದುಕೊಳ್ಳಬೇಡಿ. ಇಲ್ಲಿ ಒಳಗಣ್ಣು ತೆರೆದು ಒಳಿತನ್ನು ನೋಡುವ ‘ವೀಕೆಂಡ್ ವಿತ್ ರಮೇಶ್’ ಶೈಲಿಯ ಪ್ರಸ್ತುತ ಪಡಿಸುವಿಕೆ ಇರುವುದೇ ಹೊರತು ಬೇರೇನೂ ಅಲ್ಲ.
ಹಾಗೆ ನೋಡಿದರೆ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಒಮ್ಮೆಯೂ ನಾನು ಸುಳ್ಳು ಸುದ್ದಿ ಹರಡಿ ಇನ್ನೊಬ್ಬರಿಗೆ ನೋವು ಕೊಟ್ಟ ಉದಾಹರಣೆ ಇಲ್ಲ. ಅಥವಾ ದುಡ್ಡು ಕೊಡದಿದ್ದರೆ ನಿಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತೇನೆ ಎಂದು ಬೆದರಿಸಿದ ಬ್ಲ್ಯಾಕ್ಮೇಲ್ ಪತ್ರಕರ್ತನೂ ನಾನಲ್ಲ! ನಾನೇನೇ ಇದ್ದರೂ ಸಂಸ್ಥೆಗಳಿಂದ ಸಂಬಳ ಪಡೆದು ಸಂಸ್ಥೆಯ ಧ್ಯೇಯಕ್ಕೆ ಅನುಗುಣವಾಗಿ ಬರೆದವನು. ಅಲ್ಲಿಯೂ ನನ್ನ ನಿಷ್ಠೆಗೆ ಅವರು ಯೋಗ್ಯರಲ್ಲ ಎಂಬ ಅರಿವಾದಾಗ ಸಂಸ್ಥೆಯನ್ನೇ ತೊರೆದವನು! ಸಂಸ್ಥೆಗಳಿಗೆ ಸಹಜವಾಗಿ ಚಿತ್ರರಂಗಕ್ಕೆ ಬರುವ ಹೊಸಬರ ಬಗ್ಗೆ ಕಾಳಜಿ ಕಡಿಮೆಯೇ. ಯಾಕೆಂದರೆ ಅತಿಹೆಚ್ಚು ಚಿತ್ರಗಳನ್ನು ನಿರ್ಮಿಸುವ ಕರ್ನಾಟಕದಲ್ಲಿ ಹೊಸಬರ ಪ್ರವೇಶಕ್ಕೆ ಕೊರತೆಯೇ ಇಲ್ಲ. ಹಾಗಾಗಿ ಹೊಸಬರು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುವ ಮೊದಲು ಅವರ ಕುರಿತಾದ ಲೇಖನಗಳಿಗೆ ಮಾಧ್ಯಮಗಳಲ್ಲಿ ಅವಕಾಶ ಸಿಗುವುದು ಅಪರೂಪ. ಆದರೆ ಈ ಪಾಸಿಟಿವ್ ಪಿಕ್ಚರ್ ಅಂಥ ಕೊರತೆಯನ್ನು ನೀಗಲಿದೆ ಎನ್ನುವ ಭರವಸೆ ನಾನು ನೀಡುತ್ತೇನೆ.
ಪರಿಚಯದೊಂದಿಗೆ ಪಾತೂರು
ಸಿನಿಮಾ ರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಾ ಇರುತ್ತದೆ. ಬಂದವರು ಕೆಲವೊಮ್ಮೆ ಹಾಗೆಯೇ ಮರೆಯಾಗುತ್ತಾರೆ. ಮತ್ತೆ ಕೆಲವರು ಒಂದು ಬ್ರೇಕ್ ಬಳಿಕ ಮರಳುತ್ತಾರೆ. ಇನ್ನು ಕೆಲವರು ಸ್ಟಾರಾಗಿ ಮರೆಯುತ್ತಾರೆ. ಹೊಸದಾಗಿ ಬರುವ ಪ್ರತಿಭಾವಂತರನ್ನು ಮತ್ತು ಪ್ರತಿಭೆ ಇದ್ದರೂ ಮಾಧ್ಯಮಗಳ ಕಣ್ಣಿನಿಂದ ಮರೆಯಾಗಿರುವವರನ್ನು ಅವರ ಪ್ರತಿಭೆಗೆ ಅನುಸಾರವಾಗಿ ನಿಮ್ಮೆದುರು ಪರಿಚಯಿಸುವ ಅಂಕಣವೇ ` ಪರಿಚಯದೊಂದಿಗೆ ಪಾತೂರು’ ಎಂಬ ಈ ಅಂಕಣ.
ಚಂದದ ವನ
ಕನ್ನಡ ಚಿತ್ರರಂಗಕ್ಕೆ ಚಂದನವನ ಎನ್ನುವ ಹೆಸರಿರುವುದು ನಿಮಗೆಲ್ಲ ತಿಳಿದಿದೆ. ಆದರೆ ನಮ್ಮ ಚಂದನವನದ ಸುದ್ದಿಗಳನ್ನು ಚಂದದವನದಲ್ಲಿ ನೀಡುತ್ತೇವೆ. ಅದಕ್ಕೆ ಕಾರಣ ಇಲ್ಲಿ ಚಂದನವಷ್ಟೇ ಅಲ್ಲ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಅಪರೂಪದ ಚಿತ್ರಗಳ ಬಗ್ಗೆಯೂ ಮಾಹಿತಿಗಳು ಇರುತ್ತವೆ. ಇವೆಲ್ಲವೂ ಸೇರಿ ಚಂದದ ವನವಾಗುತ್ತವೆ ಎನ್ನುವ ನಿರೀಕ್ಷೆ ನನ್ನದು. ಮುಖ್ಯವಾಗಿ ಇಲ್ಲಿ ಕರ್ನಾಟಕದ ಸಿನಿಮಾಗಳ ಕುರಿತಾದ ವಿಶೇಷ ಮಾಹಿತಿ ಇರುತ್ತದೆ. ಅದೇ ವೇಳೆ ಆಕರ್ಷಕ ಸುದ್ದಿಗಳಿರಬಹುದೇ ಹೊರತು ಆ ಕ್ಷಣದ ಅರೆಬೆಂದ ಸುದ್ದಿಗಳನ್ನು ಹರಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇವೆ.
ರಾಜ್ ಬಿಂಬ
ಪದ್ಮಭೂಷಣ ಡಾ.ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದರೂ ಅವರ ಪ್ರತಿಬಿಂಬ ನಮ್ಮೊಳಗೆ ಸಿನಿಮಾ ಮೂಲಕ ಕಾಡುತ್ತಲೇ ಇರುತ್ತದೆ. ಒಂದು ವೇಳೆ ಸಿನಿಮಾ ಇರದಿದ್ದರೂ, ರಾಜ್ಯ ರಾಜಧಾನಿಯ ಯಾವುದೇ ಪ್ರಮುಖ ಬೀದಿಗೆ ಕಾಲಿಟ್ಟರೂ ಅಲ್ಲೇ ಅನತಿ ದೂರದಲ್ಲಿ ರಾಜ್ ಅವರ ಪ್ರತಿಮೆಯೊಂದು ಅಕ್ಕರೆಯಿಂದ ನಮ್ಮತ್ತ ನೋಡುವಂತೆ ಕಡೆದು ನಿಲ್ಲಿಸಲಾಗಿರುತ್ತದೆ. ಒಬ್ಬ ನಟನ ಬಗ್ಗೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಪುಸ್ತಕಗಳೇನಾದರೂ ರಚಿಸಲ್ಪಟ್ಟಿದ್ದರೆ ಅದು ಡಾ.ರಾಜ್ ಅವರ ಬಗ್ಗೆ ಎನ್ನುವುದು ನಿಜ. ಅದೇ ರೀತಿ ಪ್ರತಿಮೆಗಳ ವಿಚಾರದಲ್ಲಿಯೂ ಅವರಿಗೆ ಅವರೇ ಸಾಟಿ. ಹಾಗಾಗಿಯೇ ಅಣ್ಣಾವ್ರ ಬಗ್ಗೆ ಹೊಸದಾಗಿ ಏನು ಬರೆಯಬಹುದು ಎಂದು ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ವಿಚಾರಿಸಿದಾಗ ಅವರು ನೀಡಿದಂಥ ಸಲಹೆ ಇದು. “ಅಪ್ಪಾಜಿಯವರ ಪ್ರತಿಮೆಯನ್ನು ನಾಡಿನ ಹಲವಾರು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿಯೊಂದರ ಸ್ಥಾಪನೆಗೆ ಕಾರಣವಾದ ಅಭಿಮಾನದ ಹಿಂದೆಯೂ ಒಂದೊಂದು ಕತೆಗಳಿರುತ್ತವೆ. ಅವುಗಳ ಅನಾವರಣ ಮಾಡುತ್ತಾ ಹೋದಂತೆ, ಅದು ಅಪ್ಪಾಜಿಯವರ ಅಭಿಮಾನಿ ದೇವರುಗಳ ಕುರಿತಾದ ಕುತೂಹಲದ ಮಾಹಿತಿಗಳನ್ನು ನೀಡುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಪ್ರತಿಮೆಯ ಶಂಕುಸ್ಥಾಪನೆಯ ಬಳಿಕ ಅವರನ್ನು ನೆನಪಿಸಿಕೊಳ್ಳುವವರೇ ಇರುವುದಿಲ್ಲ. ಆದರೆ ಅವರು ಮೂರ್ತಿಯ ಬಗ್ಗೆ ಕಾಳಜಿ ತೋರಿಸುತ್ತಿರುತ್ತಾರೆ. ಅವರ ಅಭಿಮಾನದ ಕತೆಯನ್ನು ಹಂಚಿಕೊಂಡರೆ ಅದು ಚೆನ್ನಾಗಿರುತ್ತದೆ’’ ಎಂದರು. ರಾಘಣ್ಣನ ಯೋಚನೆ ತುಂಬ ಆಸಕ್ತಿದಾಯಕವಾಗಿರುವ ಕಾರಣ ‘ರಾಜ್ ಬಿಂಬ’ ಎನ್ನುವ ಈ ಅಂಕಣದ ಮೂಲಕ ಅದನ್ನು ನೆರವೇರಿಸುತ್ತಿದ್ದೇವೆ.
ನಿರ್ಮಾಪಕರ ಪ್ರಕಾರ
ಸಿನಿಮಾಗಳಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಂಡು ಅದರ ಸೃಷ್ಟಿಕರ್ತರಾಗಿದ್ದುಕೊಂಡು ಕೂಡ ಗುರುತಿಸಲ್ಪಡದೇ ಹೋಗುವ ಒಂದು ವರ್ಗವಿದೆ. ಅವರೇ ನಿರ್ಮಾಪಕರು. ಡಿಮಾನಿಟೈಸೇಷನ್ ಬಳಿಕ ಕೂಡ ಚಿತ್ರರಂಗ ಉಳಿದುಕೊಂಡಿದ್ದರೆ ಅದು ಸಿನಿಮಾವನ್ನು ಮೆಚ್ಚಿ ದುಡ್ಡು ಹಾಕಲು ತಯಾರಾಗಿರುವ ನಿರ್ದೇಶಕರು ಇರುವ ಕಾರಣ ಮಾತ್ರ. ಅಷ್ಟಾದರೂ ಸಿನಿಮಾ ಹೆಸರಿನ ಕೆಳಗೆ ನಿರ್ಮಾಪಕ ಎಂದು ದುಂಡಗಿನ ಅಕ್ಷರಗಳಲ್ಲಿ ಹೆಸರು ಅಚ್ಚಾಗುವುದು ಬಿಟ್ಟರೆ ಬೇರೆ ಯಾವ ಲಾಭವೂ ಆತನಿಗೆ ದೊರಕುವುದಿಲ್ಲ. ಯಾಕೆಂದರೆ ನಿರ್ಮಾಪಕ ಎಷ್ಟೇ ದುಡ್ಡು ಹಾಕಿದರೂ ಅದನ್ನು ನಿರ್ದೇಶಕರ ಚಿತ್ರವಾಗಿಯೇ ಗುರುತಿಸಲಾಗುತ್ತದೆ. ಮಾತ್ರವಲ್ಲ ಚಿತ್ರ ನೋಡಿದವರು ಕಲಾವಿದರು, ನಿರ್ದೇಶಕರ ಬಗ್ಗೆ ಮಾತನಾಡುತ್ತಾರೆಯೇ ಹೊರತು ನಿರ್ಮಾಪಕರನ್ನು ನೆನಪಿಸಿಕೊಳ್ಳುವುದೇ ಇಲ್ಲ. ನೂರಾರು ಕೋಟಿ ಬಜೆಟ್ ಹೂಡಿದ್ದರೆ ಮಾತ್ರ ನಿರ್ಮಾಪಕರ ಹೆಸರು ನೆನಪಿಸಿಕೊಳ್ಳಬೇಕು ಎನ್ನುವಂಥ ಪರಿಸ್ಥಿತಿ ಬಂದಿದೆ. ಆದರೆ ನಿಜದಲ್ಲಿ ಬಿಡುಗಡೆಯಾಗುವ ನೂರಾರು ಚಿತ್ರಗಳಲ್ಲಿ ನಿರ್ಮಾಪಕರಿಗೆ ಲಾಭ ತರುವ ಚಿತ್ರಗಳು ಹತ್ತು ಹದಿನಾರು ಚಿತ್ರಗಳು ಮಾತ್ರ! ಇದು ನಂಬಿಕೆಗೆ ಕಷ್ಟವಾದರೂ ನಡೆಯುತ್ತಿರುವಂಥ ಸತ್ಯ. ಹೀಗಿದ್ದರೂ ಪ್ರತಿ ವರ್ಷ ಹೊಸ ನಿರ್ಮಾಪಕರ ದಂಡೇ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಬಿಡುಗಡೆಯಾಗುವ 240 ಚಿತ್ರಗಳಲ್ಲಿ ಸುಮಾರು 40ರಷ್ಟು ಚಿತ್ರಗಳ ನಿರ್ಮಾಪಕರು ತಮ್ಮ ಮಗನನ್ನೋ, ತಮ್ಮನನ್ನೋ ಅಥವಾ ಕುಟುಂಬದ ಇನ್ನಾರನ್ನೋ ಸಿನಿಮಾದಲ್ಲಿ ಮೆರೆಸಬೇಕು ಎನ್ನುವ ಆಸೆ, ಒತ್ತಡದಿಂದ ಮಾಡಿರುತ್ತಾರೆ. ಇನ್ನು ಸುಮಾರು ನೂರು ನೂರೈವತ್ತು ಚಿತ್ರಗಳ ನಿರ್ಮಾಪಕರು ಲಾಭ ಮಾಡಲೆಂದೇ ಚಿತ್ರೋದ್ಯಮಕ್ಕೆ ಬಂದಿರುತ್ತಾರೆ. ಅವರಿಗೆಲ್ಲ ನೂರಾರು ಕೋಟಿ ಬಾಚಿದ ಮುಂಗಾರು ಮಳೆಯಂಥ ಚಿತ್ರಗಳನ್ನು ಉದಾಹರಣೆ ಹೇಳಿ ಚಿತ್ರ ಮಾಡಿಸುವವರು ಇರುತ್ತಾರೆ ಹೊರತು, ನೂರಾರು ಸೋಲುಗಳ ಬಗ್ಗೆ ತುಟಿ ಪಿಟಿಕ್ ಎನ್ನುವವರು ಇರುವುದಿಲ್ಲ. ಇನ್ನು ಉಳಿದ ಸುಮಾರು ನೂರರಷ್ಟು ನಿರ್ಮಾಪಕರು ಖರ್ಚಾದ ದುಡ್ಡು ವಾಪಾಸು ಬಂದರೆ ಸಾಕು, ಆದರೆ ಸಿನಿಮಾ ನಿರ್ಮಾಪಕರಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿಂದಲೂ ಬರುತ್ತಾರೆ. ವಿಚಿತ್ರ ಎಂದರೆ ಇವರ ಯಾವ ಆಸೆಗಳು ಕೂಡ ಚಿತ್ರರಂಗದಲ್ಲಿ ನೆರವೇರುವ ಸಂಭವಗಳೇ ಇರುವುದಿಲ್ಲ. ಆದರೆ ಅವರ ಹಣದಿಂದ ಸೃಷ್ಟಿಯಾದ ಚಿತ್ರಗಳನ್ನು ಕಂಡ ನಾವು ಹಾಗೆ ಆ ಋಣವನ್ನು ಮರೆಯಲು ಸಾಧ್ಯವೇ? ದುಡ್ಡು ಕೊಟ್ಟ ಚಿತ್ರದ ನಾಯಕನನ್ನು ಆತ್ಮೀಯವಾಗಿ ಕಾಣುವ ನಾವು ದುಡ್ಡು ಹಾಕಿದ ನಿರ್ಮಾಪಕನ ಪರಿಚಯ ಇರಿಸಿಕೊಳ್ಳುವುದು ತಪ್ಪಲ್ಲ ತಾನೇ? ಅದಕ್ಕೆಂದೇ ಇಲ್ಲೊಂದು ಹೊಸ ಅಂಕಣವಿದೆ. ಅದರ ಹೆಸರೇ ನಿರ್ಮಾಪಕರ ಪ್ರಕಾರ. ಒಂದೇ ಒಂದು ಚಿತ್ರ ಮಾಡಿದರೂ ಆ ನಿರ್ಮಾಪಕರ ಸಂಪೂರ್ಣ ಪರಿಚಯ ಇಲ್ಲಿ ಇರುತ್ತದೆ. ಅದನ್ನು ನೇರವಾಗಿ ಅವರೊಂದಿಗೆ ಮಾತನಾಡಿಯೇ ಪಡೆದುಕೊಂಡಿರುತ್ತೇವೆ.
ರಂಗ ಚಿತ್ರ
ವಾಸ್ತವದಲ್ಲಿ ಸಿನಿಮಾಗಿಂತಲು ಪ್ರಖರವಾದ ಕಲಾ ಪ್ರಕಾರ ರಂಗಭೂಮಿ. ಭಾರತೀಯ ಸಿನಿಮಾರಂಗಕ್ಕೆ ಅದರಲ್ಲಿಯೂ ಕನ್ನಡ ಚಿತ್ರರಂಗಕ್ಕೆ ರಂಗಭೂಮಿಯ ಭದ್ರವಾದ ತಳಪಾಯ ಇದೆ. ಕನ್ನಡ ಚಿತ್ರರಂಗದ ಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು, ಪ್ರಥಮ ತಾರೆ ಡಾ.ರಾಜಕುಮಾರ್ ಅವರಿಂದ ಹಿಡಿದು ಇಂದಿನ ದರ್ಶನ್ ತನಕ ಜನಪ್ರಿಯ ನಟರಾದವರಿಗೆ ಒಂದು ರಂಗಭೂಮಿಯ ಹಿನ್ನೆಲೆ ಇದೆ ಎನ್ನುವುದು ವಿಶೇಷ. ಇಂದಿಗೂ ರಂಗಭೂಮಿಯಿಂದ ಸಿನಿಮಾ, ಧಾರಾವಾಹಿ ಕ್ಷೇತ್ರಗಳಿಗೆ ಪ್ರವೇಶಿಸುತ್ತಿರುವವರು ಅಥವಾ ರಂಗಭೂಮಿಯಲ್ಲಿದ್ದುಕೊಂಡೇ ಗಮನ ಸೆಳೆಯುತ್ತಿರುವವರ ಮಾಹಿತಿ, ಹಿರಿಯ ರಂಗ ದಿಗ್ಗಜರು, ಜನಪ್ರಿಯ ನಾಟಕಗಳು ಮೊದಲಾದ ಎಲ್ಲ ವಿಚಾರಗಳ ಚಿತ್ರಗಳನ್ನು ನಿಮ್ಮ ಮುಂದಿಡುವ ಪ್ರಯತ್ನವೇ ‘ರಂಗ ಚಿತ್ರ’ ಎನ್ನುವ ಈ ವಿಭಾಗ. ಪ್ರಚಾರಗಳಿಂದ ಸದಾ ದೂರವಿರುವ ರಂಗಭೂಮಿಯ ಪ್ರತಿಭಾವಂತರಿಗೆ ಈ ವಿಭಾಗ ಸಹಕಾರಿಯಾದೀತು ಎನ್ನುವ ನಂಬಿಕೆ ನಮ್ಮದು.
ಟೈಗರ್ ಟೈಮ್
ಕನ್ನಡ ಚಿತ್ರರಂಗದಿಂದ ಅಗಲಿದ ಹಿರಿಯ ತಾರೆಗಳನ್ನು ನೆನಪಿಸುವಾಗ ನಾವು ಮೊದಲು ಹೇಳುವ ಹೆಸರು ಡಾ.ರಾಜಕುಮಾರ್. ಅವರ ಬಳಿಕ ಸಹಜವಾಗಿ ವಿಷ್ಣುವರ್ಧನ್, ಅಂಬರೀಶ್ ಮತ್ತು ಶಂಕರನಾಗ್ ಹೆಸರುಗಳನ್ನು ನೆನಪಿಸಿಕೊಳ್ಳುವಾಗ ನಾವು ಮರೆತೇ ಹೋಗುವ ಒಂದು ಹೆಸರಿದೆ. ಅದುವೇ ಟೈಗರ್ ಪ್ರಭಾಕರ್. ಬಹುಶಃ ತಾರೆಗಳ ವೈಯಕ್ತಿಕ ಬದುಕು ಕೂಡ ಅಭಿಮಾನದ ಮೇಲೆ ತುಂಬ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆಯಾಗಬಹುದು. ಪ್ರಭಾಕರ್ ಅವರ ವೈಯಕ್ತಿಕ ಬದುಕಿಗೆ ಕೊನೆಯ ತನಕವೂ ಒಂದು ಶಿಸ್ತು ಇರಲಿಲ್ಲ ಎನ್ನುವುದನ್ನು ಹೊರತುಪಡಿಸಿದರೆ ಅವರು ತಮ್ಮ ಪ್ರತಿಭೆಯಲ್ಲಿ ವಿಷ್ಣು ಮತ್ತು ಅಂಬಿಗೆ ಯಾವ ಮಟ್ಟದಲ್ಲಿಯೂ ಕಡಿಮೆ ಇರದಂಥ ನಟ ಆಗಿದ್ದರು. ತಮಿಳು ಚಿತ್ರಗಳಲ್ಲಿ `ಕನ್ನಡ ಪ್ರಭಾಕರ್’ ಎಂದೇ ಗುರುತಿಸಿಕೊಂಡಿದ್ದ ಅದ್ಭುತ ಖಳನಟ. ಆರಂಭದ ದಿನಗಳಲ್ಲಿ ವಿಷ್ಣುವರ್ಧನ್ ತಂದೆಯಾಗಿಯೂ ನಟಿಸಿದ್ದಅವರು ಬಳಿಕ ಸ್ಟಾರ್ ಪಟ್ಟ ಹಂಚಿಕೊಳ್ಳುವಂಥ ಸ್ನೇಹಿತನಾಗಿಯೂ ಕಾಣಿಸಿದ್ದರು. ನಾನೂರರಷ್ಟು ಚಿತ್ರಗಳಲ್ಲಿ ನಟಿಸಿರುವ ಪ್ರಭಾಕರ್ ಅವರ ಬಗ್ಗೆ ಇದುವರೆಗೆ ಯಾವುದೇ ಪುಸ್ತಕಗಳು ಪ್ರಕಟವಾಗಿಲ್ಲ ಎನ್ನುವುದು ಕೂಡ ದುರಂತ. ಹಾಗಾಗಿ ನಾವು ಆ ದಿಗ್ಗಜನ ನೆನಪಿಗಾಗಿ ಒಂದು ಅಂಕಣವನ್ನು ಮೀಸಲಿಡುತ್ತೇವೆ. ಅದುವೇ ಟೈಗರ್ ಟೈಮ್. ಟೈಗರ್ ಪ್ರಭಾಕರ್ ಅವರ ಕಾಲಘಟ್ಟದಲ್ಲಿದ್ದುಕೊಂಡು ಅವರನ್ನು ಆತ್ಮೀಯವಾಗಿ ಬಲ್ಲ ಹಾಗೂ ಅವರೊಂದಿಗೆ ನಟಿಸಿರುವ ಹಿರಿಯ ಕಲಾವಿದರ ಜತೆಗೆ ಮಾತನಾಡಿ ಸಿದ್ಧಪಡಿಸಲಾಗುವ ಈ ಅಂಕಣ ಕರುನಾಡಿನ ಸಮಸ್ತ ಟೈಗರ್ ಫ್ಯಾನ್ಸ್ ಗಳಿಗೆ ಸಮರ್ಪಣೆ.
ಕಿರುಚಿತ್ರಣ
ಮೊದಲೆಲ್ಲ ಹೊಸಬರು ಚಿತ್ರರಂಗಕ್ಕೆ ಬಂದಾಗ ಹತ್ತಾರು ವರ್ಷ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಆನಂತರದಲ್ಲಿ ಎಲ್ಲೋ ಅಪರೂಪಕ್ಕೆ ನಿರ್ದೇಶಕರಾಗಿ ಕೆಲಸ ಸಿಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಹೊಸಬರ ತಂಡದಲ್ಲಿ ನಿರ್ದೇಶಕರು ಕೂಡ ಹೊಸಬರೇ ಇರುತ್ತಾರೆ. ಬಹಳಷ್ಟು ಬಾರಿ ಇದರಿಂದ ಕಳಪೆ ಗುಣಮಟ್ಟದ ಚಿತ್ರಗಳ ಸೃಷ್ಟಿಯಾಗುತ್ತವೆ. ಆದರೆ ಕೆಲವೊಮ್ಮೆ ಹೊಸದಾಗಿ ಬಂದು ಪ್ರಥಮ ಪ್ರಯತ್ನದಲ್ಲೇ ಉತ್ತಮ ಚಿತ್ರ ಮಾಡುವವರೂ ಇರುತ್ತಾರೆ. ಹಾಗಾಗಿ ಹೊಸ ನಿರ್ದೇಶಕರನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಬೇಕು ಎನ್ನುವ ಗೊಂದಲಕ್ಕೆ ಬೀಳುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ ಸುಲಭದ ಆಯ್ಕೆಗೆ ಪೂರಕವಾದ ಮಾರ್ಗವೊಂದು ಇತ್ತೀಚೆಗೆ ಹೆಚ್ಚು ಪಸರಿಸುತ್ತಿದೆ. ಅದುವೇ ಕಿರು ಚಿತ್ರ. ಗಮನ ಸೆಳೆಯುವಂಥ ಶಾರ್ಟ್ ಮೂವಿಗಳನ್ನು ಮಾಡಿ ಅವುಗಳನ್ನು ನಿರ್ಮಾಪಕರಿಗೆ ತೋರಿಸಿ ತಮಗೆ ಸಿನಿಮಾ ನಿರ್ದೇಶಿಸುವ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುವ ಮತ್ತು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದೇ ಕಾರಣಕ್ಕೆ ಶಾರ್ಟ್ ಮೂವಿಗಳು ಕೂಡ ಹೆಚ್ಚಾಗುತ್ತಿವೆ. ಕಿರು ಚಿತ್ರಗಳ ಉತ್ಸವ, ಸ್ಪರ್ಧೆ ನಡೆಯುತ್ತಿರುವ ಈ ಕಾಲದಲ್ಲಿ ಅವುಗಳ ಕುರಿತಾದ ವಿವರವನ್ನು ನೀಡುವಂಥ ವಿಭಾಗವೇ ನಮ್ಮ ವಿಶೇಷ ಅಂಕಣವಾದ ಕಿರು ಚಿತ್ರಣ. ಇದು ಕಿರುಚಿತ್ರಗಳ ಮೂಲಕ ಚಿತ್ರೋದ್ಯಮದ ಗಮನ ಸೆಳೆಯಬಯಸುವವರಿಗೆ ವರದಾನವಾಗುವುದರಲ್ಲಿ ಸಂದೇಹವೇ ಇಲ್ಲ.
ನಾ ಕಂಡಂತೆ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತುತ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವಂಥ ನಟ ಎನ್ನುವುದು ನಿರ್ವಿವಾದದ ಸಂಗತಿ. ಅದನ್ನು ಕಣ್ಣಾರೆ ಅನುಭವಿಸಲು ಅವರ ಚಿತ್ರಗಳ ಓಪನಿಂಗ್ ಗಮನಿಸಿದರೆ ಸಾಕು. ಆದರೆ ದರ್ಶನ್ ಸಂದರ್ಶನಗಳಿಗೆ ಸಿಗುವುದು ತೀರ ಅಪರೂಪ. ಸಿಕ್ಕರೆ ಅವರಿಂದ ಮಾಹಿತಿಗಳನ್ನು ಕಲೆ ಹಾಕುವುದು ಕೂಡ ಕಷ್ಟವೇ. ಆದರೆ ಅವರಿಗೆ ಸಿಟ್ಟು ಬರುವಂತೆ ಪ್ರಶ್ನೆಗಳನ್ನು ಕೇಳಿ, ಅವುಗಳಿಗೆ ಅವರು ನೀಡುವ ಕಡಕ್ ಉತ್ತರಗಳನ್ನು ವೈರಲ್ ಮಾಡುವುದನ್ನು ಒಂದಷ್ಟು ವರ್ಷಗಳಿಂದ ನೋಡುತ್ತಲೇ ಇದ್ದೇವೆ. ಆದರೆ ದರ್ಶನ್ ಅವೆಲ್ಲವುಗಳನ್ನು ಮೀರಿ ಸಾಕಷ್ಟು ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಅವರ ಆತ್ಮೀಯರಿಗೆಲ್ಲ ಗೊತ್ತು. ಅದರ ಬಗ್ಗೆ ಅವರು ಯಾವತ್ತಿಗೂ ಹೇಳಿಕೊಳ್ಳಲು ಬಯಸಿದವರೇ ಅಲ್ಲ. ಮಾತ್ರವಲ್ಲ, ತಾವು ಮಾಡಿದ ಸಹಾಯದ ಬಗ್ಗೆ ಇನ್ನೊಬ್ಬರು ಮಾತನಾಡುವುದನ್ನು ಕೂಡ ಇಷ್ಟಪಡದಂಥ ವ್ಯಕ್ತಿತ್ವ ಅವರದು. ಹೀಗೆ ಇರಬೇಕಾದರೆ ಅವರ ಒಳ್ಳೆಯತನದ ಬಗ್ಗೆ ತಿಳಿದು ಸ್ಫೂರ್ತಿ ಪಡೆಯಲು ಕಾದಿರುವ ಅಭಿಮಾನಿಗಳಿಗೆ ಮಾಧ್ಯಮದ ಮೂಲಕ ನೀಡಬಹುದಾದ ವಿಚಾರಗಳಾದರೂ ಏನು ? ಎಂಬ ಯೋಚನೆ ಮೂಡಿದಾಗ ಕಂಡಂಥ ಉತ್ತರವೇ ಇದು. ಇಲ್ಲಿ ದರ್ಶನ್ ಅವರ ಸ್ನೇಹದ ಬಗ್ಗೆ ಅರಿತಿರುವ ಚಿತ್ರರಂಗದ ದಿಗ್ಗಜರಿಂದ ಹಿಡಿದು, ಅವರನ್ನು ಅಕ್ಕರೆಯಿಂದ ಡಿ ಬಾಸ್ ಎಂದು ಕರೆಯುವ ಅಭಿಮಾನಿಗಳ ತನಕ ಪ್ರತಿಯೊಬ್ಬರು ಕೂಡ ಹಂಚಿಕೊಂಡಿರುವ ವಿಶೇಷ ವಿಚಾರಗಳಿರುತ್ತವೆ. ಈ ವಿಶೇಷ ಅಂಕಣದ ಹೆಸರೇ ‘ನಾ ಕಂಡಂತೆ ದರ್ಶನ್’
ರಂಗಿ ತರಂಗ
ರಂಗಿ ತರಂಗ ಎನ್ನುವ ಹೆಸರು ಕನ್ನಡದ ಜನಪ್ರಿಯ ಸಿನಿಮಾ ಮೂಲಕ ಪ್ರಚಾರ ಪಡೆದುಕೊಂಡಿರುವಂಥದ್ದು. ಆದರೆ ಈ ಅಂಕಣದಲ್ಲಿ ಕನ್ನಡದ ಜತೆಗೆ ದೇಶದ ಇತರ ಪ್ರಮುಖ ಚತುರ್ಭಾಷಾ ಚಿತ್ರರಂಗದ ಮಾಹಿತಿಗಳು ಕೂಡ ಲಭ್ಯ ಇರುತ್ತವೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಚಿತ್ರರಂಗದ ಮಾಹಿತಿಗಳನ್ನು ನೀಡುವಾಗ ಆ ಚಿತ್ರರಂಗದ ಜತೆಗೆ ಸಂಬಂಧ ಇರಿಸಿರುವ ಕನ್ನಡಿಗರ ಬಗ್ಗೆ ಮತ್ತು ಅಲ್ಲಿಂದ ಬಂದು ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭೆಗಳ ಬಗ್ಗೆ ತಿಳಿಸುವಂಥ ಕೆಲಸವನ್ನು ಮಾಡುತ್ತೇವೆ. ಹಾಗಾಗಿ ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದಂತೆ `ಮಲ್ಲು ಮೆಲೊಡೀಸ್’ ನಲ್ಲಿ ಮಲಯಾಳದ ಸಂಗೀತ ನಿರ್ದೇಶಕರು, ಗಾಯಕರು ಮತ್ತಿತರ ಪ್ರತಿಭೆಗಳ ಬಗ್ಗೆ, ಕಾಲಿವುಡ್ ಕುರಿತಾದ ಸುದ್ದಿಗೆ ‘ತಮಿಳ್ ತೇರು’ ಎಂದು ಹೆಸರಿಟ್ಟು ತಮಿಳು ಚಿತ್ರರಂಗದ ತೇರು ಏರಿರುವ ಕನ್ನಡಿಗರ ಬಗ್ಗೆ, ಒಟ್ಟು ತೆಲುಗು ಚಿತ್ರರಂಗದ ಕುರಿತಾದ ವಿವರಗಳನ್ನು `ತೆಲುಗು ತೀರ’ದ ಮೂಲಕ ಮತ್ತು ಬಾಲಿವುಡ್ ಸಂಗತಿಗಳನ್ನು `ಹಲೋ ಮುಂಬೈ’ ಮೂಲಕ ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದ್ದೇವೆ.
ಡೈರೆಕ್ಟರ್ಸ್ ವಾಯ್ಸ್
ಪಾಸಿಟಿವ್ ಪಿಕ್ಚರ್ ನಲ್ಲಿ ಎಲ್ಲ ವೈವಿಧ್ಯತೆಗಳಿವೆ. ಆದರೆ ಸಿನಿಮಾದ ವಿಚಾರಕ್ಕೆ ಬಂದರೆ ಅಂತಿಮವಾಗಿ ನಿರ್ದೇಶಕರೇ ಕಪ್ತಾನ. ಹೀಗಿರುವಾಗ ನಿರ್ದೇಶಕರ ಧ್ವನಿಗೆ ಇಲ್ಲಿಯೂ ಅವಕಾಶ ಇದೆ. ಅವರಿಗೆಂದೇ ಇರುವ ವಿಶೇಷ ಅಂಕಣದ ಹೆಸರೇ ಡೈರೆಕ್ಟರ್ಸ್ ವಾಯ್ಸ್. ಸದ್ಯಕ್ಕೆ ಇದು ನಮ್ಮ ವೈವಿಧ್ಯಮಯ ಅಂಕಣಗಳು. ಮುಂದೆ ಓದುಗರ ಸಲಹೆಗೆ ಅನುಗುಣವಾಗಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುವ ಭರವಸೆ ನೀಡುತ್ತೇವೆ.