ಪಾತೂರು ಮಾತು
ನಟನೆಗೆ ಮರಳದಂತೆ ಮಾಡಿರುವ ಘಟನೆ ಇದು ಎನ್ನುತ್ತಾರೆ ವಿಜಯಲಕ್ಷ್ಮೀ..!

Positive with Pathuru

ನಮಸ್ಕಾರ
ಪಾಸಿಟಿವ್ ಪಿಕ್ಚರ್ ಎನ್ನುವ ನಮ್ಮ ಸಿನಿ ವಾರ್ತಾಜಾಲ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೈಗಳಿಂದ ಲಾಂಚ್ ಆಗಿರುವ ಸಂಭ್ರಮದಲ್ಲಿದ್ದೇನೆ. ನೆಗೆಟಿವ್ ತುಂಬಿದ ಈ ಲೋಕದಲ್ಲಿ ಎಷ್ಟರ ಮಟ್ಟಿಗೆ ಪಾಸಿಟಿವ್ ಆಗಿ ಬೆಳೆಯಲು ಸಾಧ್ಯ ಎನ್ನುವುದನ್ನು ನೋಡಬೇಕಿದೆ ಎನ್ನುವ ಅವರ ಹಾರೈಕೆಯಲ್ಲೇ ಒಂದು ಚಾಲೆಂಜ್ ಎದುರಿಸಬೇಕಾದ ಪರಿಸ್ಥಿತಿ ನನಗಿದೆ ಎನ್ನುವ ಸೂಚನೆ ಇತ್ತು. ಅದಕ್ಕೆ ಪೂರಕವಾಗಿ ಆರಂಭದಲ್ಲೇ ಒಂದು ಚಾಲೆಂಜಿಂಗ್ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲೇಬೇಕಾದ ಸಮಯ ಬಂದಿದೆ. ಅದು ಬೇರೇನಲ್ಲ, ನಟಿ ವಿಜಯಲಕ್ಷ್ಮೀಯವರು ಹೇಳಿಕೊಂಡಂಥ ವಿಚಾರ. ಸುದ್ದಿ ಹಳೆಯದೆನಿಸಬಹುದಾದರೂ ಅವರು ಹೇಳಿರುವ ವಿಚಾರ ಹೊಸತು. ಅದಕ್ಕೆ ಕಾರಣ ಅವರಲ್ಲಿ ಉಂಟಾಗಿರುವ ಮನೋವೇದನೆ. ಅದನ್ನು ಮತ್ತೊಬ್ಬರಿಗೆ ನೋವಾಗದ ಹಾಗೆ, ಆದರೆ ಅರ್ಥವಾಗುವ ಹಾಗೆ ನಿಮ್ಮ ಮುಂದೆ ಇಡುವ ಜವಾಬ್ದಾರಿ ನನಗಿದೆ ಎಂದು ನಾನು ಕೂಡ ನಂಬಿದ್ದೇನೆ.
ನಿನ್ನೆ ಅಂದರೆ ಮಂಗಳವಾರ ಬೆಳಿಗ್ಗೆ ನಿರ್ದೇಶಕ ಮಾ ಚಂದ್ರು ಅವರು ವಿಜಯಲಕ್ಷ್ಮೀಯವರಿಗೆ ಫೋನ್ ಮಾಡಿ ತಮ್ಮ ಮುಂದಿನ ಚಿತ್ರದಲ್ಲಿ ಒಂದು ಪ್ರಧಾನ ಪಾತ್ರ ನಿರ್ವಹಿಸಲು ಆಹ್ವಾನಿಸಿದ್ದರಂತೆ. ಆದರೆ ಅವರಿಗೆ ತಮ್ಮ ನಿರಾಕರಣೆ ಹೇಳಿದ ಬಳಿಕ ನನಗೆ ಫೋನ್ ಮಾಡಿದ್ದಾರೆ. ಅದಕ್ಕೆ ಕಾರಣ ಮತ್ತೊಂದು ಫೋನ್ ತಮಗೆ ಬರಬಾರದು ಎನ್ನುವ ಕಾರಣಕ್ಕೆ! ಅರೆ..! ಅವಕಾಶವೇ ಬೇಡ ಎಂದು ಹೇಳಲು ಕಾರಣವಾದರೂ ಏನಾಗಿರಬಹುದು ಎಂದು ಹಚ್ಚು ಯೋಚಿಸಬೇಕಿಲ್ಲ. ಯಾಕೆಂದರೆ ಕಳೆದವರ್ಷ ಅವರಿಗೆ ಎದುರಾದ ಅನಾರೋಗ್ಯ ಮತ್ತು ಅದರ ಬಳಿಕ ಉಂಟಾದ ವಿವಾದಗಳನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಅಷ್ಟು ಸುಲಭದಲ್ಲಿ ಮರೆತು ಬಿಡಲು ಸಾಧ್ಯವಿಲ್ಲ. ಆದರೆ ಈಗ ಚಿತ್ರರಂಗದವರೇ ಹೇಗೆ ಮರೆತು ಬಿಟ್ಟಿದ್ದಾರೆ ಎನ್ನುವುದೇ ವಿಜಯಲಕ್ಷ್ಮಿಯ ಪ್ರಶ್ನೆ. ಅಂದಹಾಗೆ ಘಟನೆಯ ಬಗ್ಗೆ ನೂರು ವಿಧ ಕತೆಗಳು ಅಂತರ್ಜಾಲದಲ್ಲಿ ಲಭ್ಯ ಇರಬಹುದು. ಆದರೆ ವಿಜಯಲಕ್ಷ್ಮಿಯವರು ಅದನ್ನು ನನ್ನೊಂದಿಗೆ ನೆನಪಿಸಿಕೊಂಡಿದ್ದು ಮಾತ್ರ ಹೀಗೆ.
"ನನಗೆ ಇಷ್ಟು ದೊಡ್ಡಮಟ್ಟದಲ್ಲಿ ಅನಾರೋಗ್ಯ ಕಾಡಿದ್ದು ಇದೇ ಮೊದಲು. ಅಷ್ಟು ದೊಡ್ಡ ಚಿಕಿತ್ಸೆಗೆ ಔಷಧಿ ಪಡೆಯಲು ನನಗೆ ಆರ್ಥಿಕವಾಗಿ ಶಶಕ್ತಿಯೂ ಇರಲಿಲ್ಲ. ಆದರೆ ನನ್ನ ಪರಿಸ್ಥಿತಿ ಹೀಗೆ ಇದೆ ಎನ್ನುವುದನ್ನು ಸ್ವತಃ ನನ್ನ ಅಕ್ಕ ಮೊದಲು ಮಾಧ್ಯಮಗಳಿಗೆ ತಿಳಿಸಿದರು. ಸುದೀಪ್ ಸರ್ ಸೇರಿದಂತೆ ಚಿತ್ರರಂಗದ ಗಣ್ಯರು ಸಹಾಯ ಮಾಡಿದರು. ಆಗ ಹಾಗೆ ಬಂದವರಲ್ಲಿ ರವಿ ಪ್ರಕಾಶ್ ಕೂಡ ಒಬ್ಬರು. ಅವರಾಗಿ ತಮ್ಮನ್ನು ಪರಿಚಯಿಸಿಕೊಳ್ಳುವ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಅವರೇ ಲಕ್ಷ ರುಪಾಯಿ ದುಡ್ಡು ಕೊಡುತ್ತಾರೆ. ಬಹುಶಃ ಅದನ್ನೇ ಸಲುಗೆಯಾಗಿ ತೆಗೆದುಕೊಂಡ ಅವರು ನೇರವಾಗಿಯೇ ನಾನಿರುವ ಆಸ್ಪತ್ರೆಯ ವಾರ್ಡ್ ಗೆ ಬಂದು ನನ್ನ ವೈಯಕ್ತಿಕ ಬದುಕಿನ ಬಗ್ಗೆ ವಿಚಾರಿಸುತ್ತಾ ಕುಳಿತುಕೊಳ್ಳಲು ಶುರು ಮಾಡಿದರು. ಅದು ನನಗೂ ಇಷ್ಟವಿರಲಿಲ್ಲ. ಸುದೀಪ್ ಅವರ ಕಡೆಯಿಂದ ಬಂದಿದ್ದ ಜಾಕ್ ಮಂಜು ಸೇರಿದಂತೆ ಧನ ಸಹಾಯ ನೀಡಿದ ಯಾರೇ ಬಂದರೂ, ಅಲ್ಲಿ ಹೆಚ್ಚು ಹೊತ್ತು ಇರುತ್ತಿರಲಿಲ್ಲ ಯಾಕೆಂದರೆ ಮಲ್ಯ ಹಾಸ್ಪಿಟಲ್ ರೂಲ್ಸ್ ಆ ರೀತಿ ಇತ್ತು. ಈ ಬಗ್ಗೆ ನಾವು ರವಿ ಪ್ರಕಾಶ್ ಅವರಿಗೆ ಕೇಳಿಕೊಂಡರೂ ಅವರು ಅದನ್ನು ಕಿವಿಗೆ ಹಾಕಿಕೊಳ್ಳದಂತೆ ವರ್ತಿಸಿದರು. ಆಸ್ಪತ್ರೆಯವರು ವಿಸಿಟರ್ಸ್ ನಿಂದ ತೊಂದರೆ ಆಗುತ್ತಿದೆ ಎಂದಾಗ ನಾವೇ ಪೊಲೀಸ್ ಮೊರೆ ಹೋಗಬೇಕಾಯಿತು. ನಿಜ ಹೇಳಬೇಕೆಂದರೆ ನನ್ನದು ದೂರಾಗಿರಲಿಲ್ಲ. ರವಿ ಪ್ರಕಾಶ್ ಅವರು ಆಸ್ಪತ್ರೆಗೆ ಬರದಂತೆ ಪೊಲೀಸ್ ಕಡೆಯಿಂದ ವಾರ್ನ್ ಮಾಡಬೇಕಾಗಿತ್ತು. ಅಷ್ಟೇ. ಆದರೆ ಅದಕ್ಕೆ ಅವರು ಕಲಾವಿದರ ಸಂಘಕ್ಕೆ ನೀಡಿದ್ದು ಐದು ಪುಟಗಳ ದೂರು. ಅದರಲ್ಲಿ ನನಗೆ ತಲೆ ಕೆಟ್ಟಿದೆ ಎಂದು ಕೂಡ ಬರೆದಿದ್ದರು. ಮಾಧ್ಯಮದ ಮುಂದೆ ನನ್ನನ್ನು ಕೆಟ್ಟವಳನ್ನಾಗಿ ಮಾಡಿದಾಗ ನನಗಿರುವ ಬೆಂಬಲಗಳೆಲ್ಲ ದೂರವಾಯಿತು. ತಾವು ಸೆಕ್ಸ್ಯುಯಲ್ ಆಗಿ ಕಾಡಿದ್ದರೆ ಆ ಬಗ್ಗೆ ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಕರೆದಿದ್ದರು. ಸೆಕ್ಸ್ಯುಯಲ್ ಹರಾಸ್ಮೆಂಟ್ ಎಂದು ನಾನೆಲ್ಲೂ ಹೇಳಿಕೊಂಡಿರಲಿಲ್ಲ. ಹಾಗಂತ ಸುದ್ದಿ ಮಾಡಿದ್ದು ಒಂದು ಖಾಸಗೀ ವಾಹಿನಿ. ಯಾಕೆ ಆ ರೀತಿ ಸುದ್ದಿ ಮಾಡಿದಿರಿ ಎಂದು ಪ್ರಶ್ನಿಸಿ ನಾನೇ ಅವರಿಗೆ ಕಳಿಸಿದ್ದ ವಿಡಿಯೋ ಈಗಲೂ ನನ್ನ ಬಳಿ ಇದೆ. ಆಸ್ಪತ್ರೆಯಲ್ಲಿ ಆ ರೀತಿಯ ಘಟನೆ ನಡೆಯುವುದು ಸಾಧ್ಯವಿಲ್ಲ. ನಡೆಯದೇ ಇರುವ ಘಟನೆಯನ್ನು ನಡೆದಿದೆ ಎಂದು ಆಪಾದಿಸುವಷ್ಟು ಕೀಳು ಮಟ್ಟದವಳು ನಾನು ಅಲ್ಲ. ಅವರು ಕೊಟ್ಟ ಒಂದು ಲಕ್ಷವನ್ನು ವಾಪಾಸು ಮಾಡಲು ಸಿದ್ಧನಿದ್ದೇನೆ. ಸದ್ಯಕ್ಕೆ ನನ್ನ ಆರೋಗ್ಯ ಸರಿಯಿಲ್ಲ. ನನ್ನನ್ನು ಕೋರ್ಟು ಕೇಸ್ ಎಂದು ಸುತ್ತಾಡಿಸದಿರುವಂತೆ ನಾನೇ ಬಾ.ಮ ಹರೀಶ್ ಅವರಲ್ಲಿ ಕೇಳಿಕೊಂಡಿದ್ದೆ. ಪ್ರಸ್ತುತ ವಾಣಿಜ್ಯ ಮಂಡಳಿಯ ಬದಲಾದ ಅಧ್ಯಕ್ಷರು, ಉಮೇಶ್ ಬಣಕಾರ್ ಸರ್ ಎಲ್ಲರೂ ಇದ್ದಾರೆ. ಅವರೆಲ್ಲ ನನ್ನ ಪರಿಸ್ಥಿತಿಯ ಬಗ್ಗೆ ನಿಜವಾಗಿಯೂ ಯೋಚಿಸಬೇಕಿದೆ. ನನ್ನ ಕುಟುಂಬ ಅಂದರೆ ನನ್ನ ತಾಯಿ, ನನ್ನ ಅಕ್ಕ. ಅವರಿಬ್ಬರನ್ನು ನಾನೇ ನೋಡಿಕೊಳ್ಳಬೇಕು. ಈ ಬಗ್ಗೆ ಅವರು ಕೂಡ ಯೋಚಿಸಬೇಕಲ್ಲವೇ? ಅರ್ಜುನ್ ಸರ್ಜ ಅವರ ಪ್ರಕರಣವನ್ನು ಮಾತುಕತೆಯಲ್ಲಿ ಮುಗಿಸಲು ತೋರಿಸಿದಂಥ ಆಸಕ್ತಿಯನ್ನು ಇವರೇಕೆ ನನ್ನ ವಿಚಾರದಲ್ಲಿ ತೋರಿಸಿಲ್ಲ?! ಇದೆಲ್ಲದರ ನಡುವೆ ಇಷ್ಟು ದೊಡ್ಡ ಘಟನೆ ನಡದು ನಾನು ನಾಳೆ ಮತ್ತೆ ಕೋರ್ಟ್ ಗೆ ಹಾಜರಾಗಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಇದೇನೂ ಗೊತ್ತಿಲ್ಲ ಎನ್ನುವಂತೆ ಚಿತ್ರೋದ್ಯಮದಿಂದ ನಟಿಸಲು ಆಹ್ವಾನ ಬರುತ್ತಿದೆ. ನನಗೆ ಅಚ್ಚರಿಯಾಗುತ್ತಿದೆ. ಆರೋಗ್ಯಕ್ಕಾಗಿಯೇ ಇಷ್ಟು ಕಷ್ಟಪಡುತ್ತಿರುವ ನನ್ನ ಹೆಸರನ್ನು ಬಳಸಿಕೊಂಡು ಬಿಗ್ ಬಾಸ್ ಗೆ ಹೋಗುತ್ತಿರುವುದಾಗಿ ಪ್ರಚಾರ ನಡೆಸಲಾಗುತ್ತಿದೆಯಲ್ಲ? ಅದೆಷ್ಟು ಸರಿ?
ಬಾ.ಮ ಹರೀಶ್ ಸರ್, ಉಮೇಶ್ ಬಣಕಾರ್ ಸರ್ ಅವರಲ್ಲಿ ವಿನಂತಿ ಮಾಡಿಕೊಂಡರೂ ಸಹ ಅರ್ಜುನ್ ಸರ್ಜ ವಿಚಾರದಲ್ಲಿ ಮಾತುಕತೆಯ ಮೂಲಕ ಪರಿಹಾರಕ್ಕೆ ಅವರು ತೋರಿದಂಥ ಕಾಳಜಿ ಅವರಿಂದ ನನಗೆ ಇಲ್ಲಿಕಾಣಿಸಲಿಲ್ಲ. ಮುಖ್ಯವಾಗಿ ನನಗೆ ಆರೋಗ್ಯ ಸರಿಯಾಗಿಲ್ಲ ಎನ್ನುವಾಗ ಮಾನವೀಯತೆಯ ಕಾರಣದಿಂದಲಾದರೂ ಪ್ರಕರಣವನ್ನು ಕೋರ್ಟ್ ನಿಂದ ಕೈ ಬಿಡುವಂತೆ ರವಿ ಪ್ರಕಾಶ್ ಮೇಲೆ ಒತ್ತಡ ಹೇರಬಹುದಿತ್ತು. ನಮ್ಮ ವಾಣಿಜ್ಯ ಮಂಡಳಿಯೇ ನನ್ನ ಬಗ್ಗೆ ಕಲಾವಿದೆ ಎನ್ನುವ ಕಾಳಜಿ ತೋರಿಸದ ಹಾಗೆ ವರ್ತಿಸುವಾಗ ನಾನು ಕಲಾವಿದೆ ಎಂದುಕೊಂಡು ಬಾಳುವುದರಲ್ಲಿ ಅರ್ಥವಿಲ್ಲ. ನಾಗ ಮಂಡಲದ ವಿಜಯಲಕ್ಷ್ಮಿಯ ನೆನಪು ಅಲ್ಲಿಗೆ ಕೊನೆಯಾಗಲಿ..’’ ಮಾತಿನ ಕೊನೆಗೆ ಅವರ ಅಳುವಿನ ದನಿ ಕೇಳಿಸಿತು! ಸಮಾಧಾನಿಸಲು ಮುಂದಾದಾಗ “ನನಗೆ ಮಾಧ್ಯಮಗಳ ಕಾಲಜಿಯ ಬಗ್ಗೆ ಗೌರವ ಇದೆ. ಅದರಲ್ಲಿಯೂ ನಿಮ್ಮಲ್ಲಿಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಹೇಳಿದ್ದನ್ನಷ್ಟೇ ಸರಿಯಾಗಿ ಹಾಕಬೇಕು. ಅದಕ್ಕೆ ಮಸಾಲೆ ಹಾಕದೇ ನೇರವಾಗಿ ಅರ್ಥವತ್ತಾಗಿ ನೀಡುವವರು ಒಬ್ಬರು ಇದ್ದರೆ ಅದು ನೀವೇ ಎಂದು ನನ್ನ ನಂಬಿಕೆ’’ ಎಂದರು. “ಮಾಧ್ಯಮದವರು ಎಂದರೆ ನನಗೆ ಆಪ್ತರಿದ್ದ ಹಾಗೆ. ಅವರೇ ನನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದವರು. ಪ್ರತಿಯೊಬ್ಬರಲ್ಲಿಯೂ ಹೇಳಿಕೊಳ್ಳಲು ನನಗೆ ಕಷ್ಟವಾದೀತು. ಇತ್ತೀಚೆಗಷ್ಟೇ ನನ್ನನ್ನು ಪೊಲೀಸ್ ಸ್ಟೇಷನ್ ನಲ್ಲಿ ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಕರೆದಿದ್ದರು. ನನಗೆ ಮಾತನಾಡುವುದೇ ಕಷ್ಟವಾಗುತ್ತೆ. ನಾನು ಹುಟ್ಟಿ ಬೆಳೆದ ನಾಡಿನಲ್ಲೇ ನನ್ನ ಮೇಲೆ 420 ಕೇಸು ದಾಖಲಾಗುವ ಪರಿಸ್ಥಿತಿ ಬಂದಿರುವ ಬಗ್ಗೆ ನನಗೆ ವಿಪರೀತ ನೋವಿದೆ.
ಬಿಗ್ ಬಾಸ್ ನಿಂದ ನನಗೆ ಕರೆ ಬಂದಿಲ್ಲ. ಆದರೆ ವೀಕೆಂಡ್ ವಿತ್ ರಮೇಶ್ ಗೆ ಕರೆದಾಗಲೂ ನಾನು ಅದೇ ವಿಚಾರ ಹೇಳಿದೆ. ನನಗೆ ಸಾಕಷ್ಟು ಅವಮಾನ ಮಾಡಿ ಆಗಿದೆ. ಇನ್ನು ಸನ್ಮಾನ ಯಾಕೆ ಎಂದು. ಕಲಾವಿದರ ಸಂಘದವರು ಒಂದು ಮೀಟಿಂಗ್ ಮಾಡಿ ನನಗೆ ಅವಮಾನ ಆಗುವುದನ್ನು ತಪ್ಪಿಸುತ್ತಾರೆ ಎಂದು ಕಾದೆ. ಆದರೆ ಈಗ ನಿರೀಕ್ಷೆಗಳೆಲ್ಲ ಕಳೆದುಕೊಂಡು ಸುಸ್ತಾಗಿದ್ದೇನೆ ಎಂದರು.
ನಾನು ವಿಜಯ ಲಕ್ಷ್ಮಿಯವರ ಮಾತುಗಳನ್ನು ಆದಷ್ಟು ಸೌಮ್ಯವಾದ ಪದಗಳಲ್ಲಿ ತುಂಬಿ ಓದುಗರಿಗೆ ನೀಡಲು ಸಿದ್ಧವಾಗುತ್ತಿದ್ದಾಗ ಅವರಿಂದಲೇ ಒಂದು ವಾಟ್ಸ್ಯಾಪ್ ವಿಡಿಯೋ ಬಂತು. ಅದರಲ್ಲಿ ಅವರು ತಮ್ಮ ಆಕ್ರೋಶ, ಹತಾಶೆಯನ್ನೆಲ್ಲ ತುಂಬಿಸಿಕೊಂಡಿದ್ದರು. ಅದು ಯಾವ ಪರಿಣಾಮ ಬೀರುತ್ತದೆ ಎಂದು ನನಗೆ ಗೊತ್ತಿಲ್ಲ. ಆದರೆ ಮನುಷ್ಯನ ಬದುಕಿನಲ್ಲಿ ಎಲ್ಲದಕ್ಕೂ ಒಂದು ಪ್ರಾಯಶ್ಚಿತ್ತದ ಕಾಲಾವಧಿ ಇರುತ್ತದೆ. ಆ ಮಟ್ಟವನ್ನು ವಿಜಯಲಕ್ಷ್ಮಿ ತಲುಪಿರುವುದರಲ್ಲಿ ಸಂದೇಹವಿಲ್ಲ. ರವಿಪ್ರಕಾಶ್ ಅವರ ಬಗ್ಗೆ ನನಗೂ ಗೊತ್ತಿಲ್ಲ. ಆದರೆ ಧನ ಸಹಾಯ ನೀಡಿದ ಕರುಣಾಮಯಿ ಅವರಾಗಿದ್ದರೆ ವಿಜಲಕ್ಷ್ಮಿಯರ ಈ ಪರಿಸ್ಥಿತಿಯನ್ನು ನಮಗಿಂತ ಚೆನ್ನಾಗಿ ಅವರೇ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಪಾಸಿಟಿವ್ ನಂಬಿಕೆ ನನಗಿದೆ.
ಈ ಸಂದರ್ಭದಲ್ಲಿ ಪಾಸಿಟಿವ್ ಪಿಕ್ಚರ್ ಮೆಚ್ಚಿ ಮಾತನಾಡಿದ ಸರ್ವರಿಗೂ ಅಭಿನಂದನೆಗಳು. ಈ ಪ್ರಯೋಗಕ್ಕೆ ಪ್ರೋತ್ಸಾಹಿಸಿ ತಾವಾಗಿಯೇ ಶುಭ ಕೋರಿದಂಥಚಿತ್ರರಂಗದ ಗಣ್ಯರಾದ ನಟ ಶರಣ್, ಸಂಚಾರಿ ವಿಜಯ್, ರವಿಶಂಕರ ಗೌಡ, ನಿರ್ದೇಶಕ ಟಿಎನ್ ಸೀತಾರಾಮ್, ಲಿಂಗದೇವರು, ಎಂ.ಕೆ ಮಠ, ಜಯರಾಮ್ ಭದ್ರಾವತಿ, ಅಶು ಬೆದ್ರ, ಸುನಾದ್ ಗೌತಮ್, ಸುನೀತಾ ಶೆಟ್ಟಿಮೊದಲಾದವರಿಗೆ ತುಂಬು ಹೃದಯದ ವಂದನೆಗಳು. ಉಳಿದವರ ಬಳಿಗೆ ನಿಧಾನವಾಗಿಯಾದರೂ ತಲುಪುವ ಪ್ರಯತ್ನ ನನ್ನದಾಗಿರುತ್ತದೆ. ನಟಿ ವಿಜಯಲಕ್ಷ್ಮಿಯವರು ಈ ಸಂದರ್ಭದಲ್ಲಿ ಕೂಡ ನಮ್ಮ ಪಾಸಿಟಿವ್ ಪಿಕ್ಚರ್ ಗೆ ಶುಭ ಕೋರಲು, ನನಗೆ ಜನ್ಮದಿನದ ಶುಭ ಹಾರೈಸಲು ಮರೆಯಲಿಲ್ಲ. ಅವರ ಒಳ್ಳೆಯ ಮನಸಿಗೆ ಒಳಿತಾಗಲೆಂದು ಮತ್ತೊಂದು ಹಾರೈಸುತ್ತಾ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ವಂದನೆಗಳೊಂದಿಗೆ
ಶಶಿಕರ ಪಾತೂರು