ಪತಂಗ ಪ್ರಭಾವದಲ್ಲಿ ಮಂಗಳ ಮುಖಿಯರ ಅಂತರಂಗ


``ಆದಿ ಯಾವುದು ? ಪ್ರಪಂಚ ಅಂದರೆ ಎಷ್ಟು? ಎಲ್ಲರೂ ಏಕಾಂಗಿಗಳ?’’ ಮೊದಲಾದ ಪ್ರಶ್ನೆಗಳೊಂದಿಗೆ ಆರಂಭವಾಗುತ್ತದೆ ‘ಪತಂಗ ಪ್ರಭಾವ’ ನಾಟಕ. ಎರಡೇ ಎರಡು ಪಾತ್ರಧಾರಿಗಳ ಮೂಲಕ ಒಂದು ಗಂಟೆ ನಲುವತ್ತು ನಿಮಿಷಗಳ ತನಕ ರಂಗದಲ್ಲಿ ಸೃಷ್ಟಿಯಾಗುವ ಅಭಿನಯ ಲೋಕವೇ ಪತಂಗ ಪ್ರಭಾವ. ಪಾತ್ರಧಾರಿಗಳು ಇಬ್ಬರಾದರೂ ಬರುವ ಪಾತ್ರಗಳು ಹಲವಾರು. ಅವುಗಳು ಕೂಡ ವಿವಿಧ ಕಾಲಘಟ್ಟವನ್ನು ಪ್ರತಿನಿಧಿಸುತ್ತವೆ. ಆದರೆ ಎಲ್ಲ ಪಾತ್ರಗಳು ನೀಡುವ ಸಂದೇಶ ಒಂದೇ. ಅವುಗಳು ಸಂದೇಶಗಳಾಗಿರದೆ ವಾಸ್ತವ ಸಂದೇಹಗಳಾಗಿ ಕಾಡತೊಡಗುವುದು ನಾಟಕದ ಗೆಲುವು.
ಮಹಾಭಾರತ ಯುದ್ಧದ ಮಹಾಮೂಲ
ಮಹಾಭಾರತ ಯುದ್ಧ ಕೌರವ ಪಾಂಡವರ ನಡುವೆ ಆಸ್ತಿಗಾಗಿ ನಡೆಯಿತು ಎನ್ನುವುದು ಎಲ್ಲರೂ ಹೇಳುವ ಅಂಶ. ಅದರ ಹೊರತಾಗಿ ಶ್ರೀಕೃಷ್ಣನಿಂದಾಗಿ ನಡೆಯಿತು, ಕುಂತಿಯಿಂದಾಗಿ ನಡೆಯಿತು, ಶಕುನಿಯಿಂದ ನಡೆಯಿತು, ದ್ರೌಪದಿಯಿಂದ ನಡೆಯಿತು ಹೀಗೆ ವಿವಿಧ ಕೋನಗಳ ವಿಶ್ಲೇಷಣೆಯನ್ನು ಕೂಡ ಕಂಡಿದ್ದೇವೆ. ಆದರೆ ದ್ರುಪದನ ಸಂತಾನ ಶಿಖಂಡಿಯ ಮೂಲಕ ನಡೆಯಿತು ಎನ್ನುವ ದೃಷ್ಟಿಕೋನ ಇಲ್ಲಿ ನೀಡಲಾಗಿದೆ. ಪುರಾಣದಲ್ಲಿ ಶಿಖಂಡಿ ಎಂದು ಗುರುತಿಸಲ್ಪಟ್ಟ ಆತ ಹೇಗೆ ಭೀಷ್ಮನ ಮೇಲಿನ ಹಗೆಯನ್ನು ಮಹಾಭಾರತ ಯುದ್ಧದ ಮೂಲಕ ತೀರಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ನಾಟಕದಲ್ಲಿ ಅರ್ಥ ಸಿಗುತ್ತಾ ಹೋಗುತ್ತದೆ. ಮುಂದೆ ಬರುವ ಆಧುನಿಕ ಕಾಲದ ಎರಡು ಪಾತ್ರಗಳು ಕೂಡ ಇಂದು ತೃತೀಯ ಲಿಂಗಿಗಳ ಪರಿಸ್ಥಿತಿಯನ್ನು ಅವಲೋಕನಗೊಳಿಸುತ್ತಾ ಸಾಗುತ್ತದೆ.
ಗಲಭೆ ಮನದೊಳಗೆ ಮತ್ತು ಹೊರಗೆ
ಆಧುನಿಕ ಕಾಲಕ್ಕೆ ಬಂದಾಗ ರಸ್ತೆಯಲ್ಲೊಂದು ಗಲಭೆಯ ವಾತಾವರಣ. ತನ್ನ ಮನೆ ಮುಂದೆ ಆತಂಕದಿಂದ ನಿಂತ ಯುವತಿಯನ್ನು ಮನೆಯೊಳಗೆ ಆಹ್ವಾನಿಸುವ ಮನೆಯೊಡತಿ. ಆದರೆ ಒಳಗೆ ಬಂದಾಕೆ ತೃತೀಯ ಲಿಂಗಿ ಎನ್ನುವ ಅರಿವಾದಾಗ ಮನೆಯೊಡತಿಗೆ ಆತಂಕ, ಕಸಿವಿಸಿ. ಆದರೆ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡ ತೃತೀಯ ಲಿಂಗಿ ತನ್ನ ಕತೆಯನ್ನು ಹೇಳಿಕೊಳ್ಳುತ್ತಾಳೆ. ಕತೆ ಪೂರ್ತಿಯಾಗಿ ಆಲಿಸಿದ ಮೇಲೆ ಮನೆಯೊಡತಿಗೆ ಇದು ತನ್ನ ಕತೆಗಿಂತ ಭಿನ್ನವೇನಲ್ಲ ಅನಿಸುತ್ತದೆ. ಯಾಕೆಂದರೆ ಬಂದ ಮಂಗಳಮುಖಿಗೆ ಬಹಿರಂಗವಾದ ನೋವು ಇದ್ದರೆ, ಈಕೆಗೆ ತನ್ನ ಪತಿ ತನ್ನೊಂದಿಗೆ ಅಂತರಂಗ ತೆರೆದು ಬೆರೆಯುತ್ತಿಲ್ಲ ಎಂಬ ನೋವು ಇರುತ್ತದೆ. ಶ್ರೀಮಂತಿಕೆ ಆಡಂಬರ ಎಲ್ಲವೂ ಇದ್ದರೂ ಆ ಮನೆ ಅವಳ ಪಾಲಿಗೆ ಒಂದು ವಜ್ರದ ಸೆರೆಮನೆ. ಭಾವಗಳೇ ಇರದ ಹಾಗೆ ತನ್ನೊಂದಿಗೆ ವರ್ತಿಸುವ ಪತಿ ಇನ್ನಾರಿಗೋ ಕವನಗಳ ಮೂಲಕ ತನ್ನ ಪ್ರೀತಿಯನ್ನು ಹಂಚಿಕೊಂಡಾಗ ಈಕೆಯೊಳಗೆ ಉಂಟಾಗಿರುವ ನೋವು ತನ್ನದಲ್ಲದ ತಪ್ಪಿಗೆ ಸಮಾಜದಿಂದ ಅವಗಣನೆಗೆ ಒಳಗಾದ ಮಂಗಳಮುಖಿಗೆ ಸಮಾನವೆಂಬ ಹಾಗೆ ತೋರಿಸಲಾಗಿದೆ.
ಪತಂಗದ ಪ್ರಭಾವ ಏನು?
ವಿಜ್ಞಾನದ ಪ್ರಕಾರ ಪ್ರಪಂಚದ ಯಾವುದೋ ಮೂಲೆಯಲ್ಲಿ ನಡೆಯುವ ಹಲವಾರು ಚಿಟ್ಟೆಗಳ ಹಾರಾಟ ಮತ್ತೆಲ್ಲೋ ಸಂಭವಿಸಲಿರುವ ಚಂಡಮಾರುತದ ಸೂಚನೆಯಂತೆ. ಅದೇ ರೀತಿ ನಾಟಕದ ಕೊನೆಯಲ್ಲಿ ಮನೆಯೊಡತಿ ತನ್ನ ಮನೆ ಅತಿಥಿಯನ್ನು ಅರ್ಥಮಾಡಿಕೊಳ್ಳುವ ರೀತಿ, ಮುಂದೆ ಇಡೀ ಸಮಾಜವೇ ಮಂಗಳಮುಖಿಯರಿಗೆ ನೀಡುವ ಪ್ರೀತಿಯ ಸೂಚಕವಾಗಲಿದೆ ಎನ್ನುವುದು ತಾತ್ಪರ್ಯ. ಅದು ಹಾಗೆ ಆಗಬೇಕಿರುವುದು ಧರ್ಮವೂ ಹೌದು.
ಮೆಚ್ಚುಗೆಯ ಪ್ರತಿಕ್ರಿಯೆಗಳು
ನಾಟಕದ ವಿಶೇಷ ಪ್ರಯೋಗದ ಸಂದರ್ಭದಲ್ಲಿ ನಾಟಕಕ್ಕೆ ಪ್ರೇಕ್ಷಕರಾಗಿ ತೃತೀಯ ಲಿಂಗೀಯರು ಕೂಡ ಉಪಸ್ಥಿತರಿದ್ದರು. ಅವರಲ್ಲಿ ಬಹುತೇಕರು ಮಂಗಳ ಮುಖಿಯಾಗಿ ನಟಿಸಿದ ಚಂದ್ರಕೀರ್ತಿಯವರನ್ನು ತಮ್ಮದೇ ವರ್ಗಕ್ಕೆ ಸಂಬಂಧಿಸಿದವರು ಎಂದುಕೊಂಡಿದ್ದಾಗಿ ತಿಳಿಸಿದ್ದರು. ನಿಜದಲ್ಲಿ ಅದು ಚಂದ್ರಕೀರ್ತಿಯ ನಟನೆಗೆ ದೊರಕಿದಂಥ ದೊಡ್ಡ ಸರ್ಟಿಫಿಕೇಟ್ ಎಂದೇ ಹೇಳಬೇಕು. ಅದು ಅವರ ಪಾಲಿನ ಅತಿ ಶ್ರೇಷ್ಠ ಪ್ರಶಸ್ತಿಯ ಹಾಗೆ. ಉಳಿದಂತೆ ಡಾ. ಸೀತಾಕೋಟೆ ದ್ರೌಪದಿಯಾಗಿ, ಕೃಷ್ಣನಾಗಿ ಮತ್ತು ಸಾಂದರ್ಭಿಕ ಪಾತ್ರಗಳಿಗೆ ಭಾವಗಳಾಗಿ ಅಮೋಘ ನಟನೆ ನೀಡುತ್ತಾರೆ. ಕಾರ್ತಿಕ್ ಹೆಬ್ಬಾರ್ ನಿರ್ದೇಶನದಲ್ಲಿ ಮೂಡಿರುವ `ಪತಂಗ ಪ್ರಭಾವ’ ತನ್ನ ಸಂಭಾಷಣೆ ಮತ್ತು ಅವರದೇ ಸಂಗೀತದ ವೈಶಿಷ್ಟ್ಯದ ಮೂಲಕ ಗಮನ ಸೆಳೆಯುತ್ತದೆ. ಆದರೆ ದ್ರೌಪದಿಯ ಕಡೆಯಿಂದ ಹೇಳಲ್ಪಡುವ ಎಲ್ಲ ಸಂಭಾಷಣೆಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ಒಟ್ಟು ನಾಟಕ ಮಂಗಳಮುಖಿಯರ ಬಗ್ಗೆ ಸಮಾನ ನಿಲುವು ತಾಳುವ ಪ್ರಯತ್ನಕ್ಕೆ ಪೂರಕ ಶಕ್ತಿ ನೀಡುವುದರಲ್ಲಿ ಸಂದೇಹವಿಲ್ಲ. ಕಾರ್ತಿಕ್ ಹೆಬ್ಬಾರ್ ಅವರು ಸಂಗೀತದಲ್ಲಿ ಬರಿಯ ಚರ್ಮ ವಾದ್ಯಗಳನ್ನು ಮಾತ್ರ ಬಳಸಿ ನಡೆಸಿದ ಪ್ರಯೋಗ ಆಕರ್ಷಕ. ‘ಮನಸಿಗೆ ಆಕರ್ಷಣೆ ಇದೆ ಆದರೆ ಗುರುತ್ವಾಕರ್ಷಣ ಇಲ್ಲ, ಹಾಗಾಗಿ ಒಂದೇ ಕಡೆಗೆ ಹಿಡಿದಿಟ್ಟುಕೊಳ್ಳುವುದಿಲ್ಲ,’ ‘ಅವನಾದರೇನು ಅವಳಾದರೇನು ಅನುರಾಗವಿರದ ತನಕ’ ಮೊದಲಾದ ಸಂಭಾಷಣೆಯ ಸಾಲುಗಳು ಮನಸಿಗೆ ತಟ್ಟುತ್ತವೆ. ಎಂ.ಜಿ ನವೀನ್ ನರಸಿಂಹರ ವೇದಿಕೆ ಬೆಳಕಿನ ಸಂಸಂಯೋಜನೆ ಪ್ರಶಂಸಾರ್ಹ.



