ಪಾತೂರು ಮಾತು
ಪಾಸಿಟಿವ್ ಪಿಕ್ಚರ್’ ಲೋಕಾರ್ಪಣೆಗೊಳಿಸಿದ ಪ್ರೇಮಲೋಕಾಧಿಪತಿ

Positive with Pathuru

ಸುದ್ದಿಗಳು ಸಿನಿಮಾದ್ದಾಗಿರಲಿ, ಯಾವುದೇ ಆಗಿರಲಿ ನೆಗೆಟಿವ್ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಬಾರದು. ಅಂಥ ಘಟನೆಗಳು ನಡೆದಾಗ ಅವುಗಳ ಮಾಹಿತಿ ನೀಡಬೇಕೇ ಹೊರತು ಮಸಾಲೆ ಹಾಕಬಾರದು. ಅದ ಪಾಸಿಟಿವ್ ಅಪ್ರೋಚ್. ಅದೇ ರೀತಿ ಪಾಸಿಟಿವ್ ಸಂಗತಿಯನ್ನು ಸದಾ ಹರಡಿ ಸ್ಫೂರ್ತಿ ತುಂಬುವುದು ಮಾಧ್ಯಮಗಳ ಕರ್ತವ್ಯವಾಗಬೇಕು ಎನ್ನುವುದೇ ನನ್ನ ಅಭಿಪ್ರಾಯ’ ಎಂದಿದ್ದರು ರವಿಚಂದ್ರನ್. ಇದು ಈ ಹಿಂದೆ ಅವರು ನನ್ನನ್ನು ಭೇಟಿಯಾದಾಗ ಹೇಳಿದ್ದಂಥ ಮಾತುಗಳು. ಅದನ್ನೇ ಸ್ಫೂರ್ತಿಯಾಗಿ ಇರಿಸಿಕೊಂಡು ಪಾಸಿಟಿವ್ ಪಿಕ್ಚರ್ ಎನ್ನುವ ವೆಬ್ ಸೈಟ್ ಶುರುಮಾಡಿದ್ದೇನೆ. ಹಾಗಾಗಿ ಅದರ ಲೋಕಾರ್ಪಣೆ ರವಿಚಂದ್ರನ್ ಮಾಡಿದರೇನೇ ಚಂದ ಎನ್ನುವ ಆಸಕ್ತಿ ಮೂಡಿತು. ಅದು ನೆರವೇರಿದ ಸುಮುಹೂರ್ತದ ನೆನಪು ಇದು.
ಸಕಲೇಶಪುರಕ್ಕೆ ಆಹ್ವಾನಿಸಿದರು ರವಿ ಬೋಪಣ್ಣ!
ರವಿಚಂದ್ರನ್ ಅವರಿಂದ ಒಂದು ಶುಭ ಹಾರೈಕೆ ಪಡೆಯುವುದೆಂದರೆ ಅದು ಅಷ್ಟು ಸುಲಭದ ವಿಚಾರವಲ್ಲ. ಯಾಕೆಂದರೆ ಅವರು ಶುಭ ಕೋರುವ ಮುನ್ನ ಆ ಸಂಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಅವರಿಗೆ ಮೂಡಿರಬೇಕು. ಹಾಗಾಗಿಯೇ ಸಿನಿಮಾ ಪ್ರಿವ್ಯೂನಿಂದ ಹಿಡಿದು ಟ್ರೇಲರ್ ಲಾಂಚ್ ತನಕ ಎಲ್ಲರಿಗೂ ಅವರು ಬರಲೇಬೇಕು ಎಂದು ಇದ್ದರೂ ಆಹ್ವಾನಿಸಲಿಕ್ಕೆ ಭಯಪಡುತ್ತಾರೆ. ಯಾಕೆಂದರೆ ಟ್ರೇಲರಾಗಲೀ, ಸಿನಿಮಾವಾಗಲೀ ತಮಗೆ ಇಷ್ಟವಾಗದಿದ್ದರೆ ತಾವು ಅದನ್ನು ಪ್ರಮೋಟ್ ಮಾಡಬೇಕಿದೆ ಎನ್ನುವುದನ್ನು ಕೂಡ ಮರೆತು, `ಚೆನ್ನಾಗಿಲ್ಲ’ ಎಂದು ಬಿಡುತ್ತಾರೆ! ಎದುರಿಗಿರುವವರು ಆತ್ಮೀಯರಿರಬಹುದು ಅಥವಾ ಅಪರಿಚಿತರೇ ಇರಬಹುದು. ಅದು ಅವರು ಹೇಳುವ ಅಭಿಪ್ರಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೆಂದು ಅವರನ್ನು ದೂರ ಮಾಡುವ ಬದಲು, ಅವರೇ ಮೆಚ್ಚುವ ಮಟ್ಟಕ್ಕೆ ನಮ್ಮ ಕಾರ್ಯಪ್ರವೃತ್ತಿ ಶ್ರೇಷ್ಠವಾಗಿದ್ದರಾಯಿತು ಎನ್ನುವ ನಂಬಿಕೆ ನನಗಿತ್ತು. ಮಾತ್ರವಲ್ಲ, ಬಾಲ್ಯದಿಂದಲೇ ಮೆಚ್ಚಿದ್ದ ನಟ, ನನಗೆ ಸಿನಿಮಾರಂಗದ ಮೇಲೆ ಆಸಕ್ತಿ ಮೂಡಿಸಿದ ನಟ ಕೂಡ ರವಿಚಂದ್ರನ್ ಅವರೇ ಆಗಿರುವುದರಿಂದ ಅವರನ್ನೇ ಕೇಳಿಕೊಂಡೆ. ಅವರು ಹೆಚ್ಚು ಯೋಚಿಸದೇ ಒಪ್ಪಿಕೊಂಡರು. ಒಬ್ಬ ಮಾಧ್ಯಮದ ವ್ಯಕ್ತಿಯಾಗಿ ಅಲ್ಲದೆ, ತಮ್ಮ ಅಭಿಮಾನಿಯೆನ್ನುವ ನೆನಪು ಕೂಡ ಅವರಿಗೆ ಇತ್ತೆನ್ನುವುದೇ ಅದಕ್ಕೆ ಕಾರಣ ಇರಬಹುದು. ಯಾಕೆಂದರೆ ಈ ಹಿಂದೆ ಅವರ ಮಗಳ ಮದುವೆಗೆ ಹೋಗಿದ್ದಾಗ, ``ಇವರು ಮೀಡಿಯಾದವರು ಮಾತ್ರವಲ್ಲ, ನನ್ನ ದೊಡ್ಡ ಫ್ಯಾನ್ ಕೂಡ ಹೌದು’’ ಎಂದು ಮಂಟಪದಲ್ಲೇ ನನ್ನನ್ನು ಅಳಿಯನಿಗೆ ಪರಿಚಯಿಸಿದ್ದನ್ನು ನಾನು ಮರೆಯಲಾರೆ. ಆದರೆ ಅವರು ಒಂದು ಕಂಡೀಷನ್ ಹಾಕಿದರು. ಈಗ ನಾನು ಸಕಲೇಶಪುರದಲ್ಲಿದ್ದೇನೆ. ನನ್ನದೇ ಡೈರೆಕ್ಷನ್ ನಲ್ಲಿರುವ `ರವಿ ಬೋಪಣ್ಣ’ದ ಶೂಟಿಂಗ್ ನಡೀತಿದೆ. ನಿಮ್ಮ ಬರ್ತ್ ಡೇ ದಿನವೇ ಇದರ ಲಾಂಚ್ ಆಗಬೇಕು ಎಂದಿದ್ದರೆ ನೀವೇ ಇಲ್ಲಿ ಬರಬೇಕು. ಅಥವಾ ಅಲ್ಲೇ ಫಂಕ್ಷನ್ ಮಾಡೋದಾದರೆ ನಾನು ಹತ್ತು ದಿನ ಬಿಟ್ಟೇ ಬೆಂಗಳೂರಿಗೆ ಬರೋದು ಎಂದಿದ್ದರು ರವಿಚಂದ್ರನ್. ನನಗೆ ಖುಷಿಯೇ ಆಯಿತು. ಯಾಕೆಂದರೆ ಬೆಂಗಳೂರಲ್ಲಿ ಕಾರ್ಯಕ್ರಮ ಮಾಡಿ ವೆಬ್ ಸೈಟ್ ಉದ್ಘಾಟಿಸುವ ಮಟ್ಟಕ್ಕೆ ನಾನ್ನಿನ್ನೂ ಬೆಳೆದಿದ್ದರೆ ತಾನೇ? ಇಷ್ಟಕ್ಕೂ ನಮ್ಮ ವೆಬ್ಸೈಟ್ ಗೆ ಸದ್ಯಕ್ಕೆ ನಾನು ಮತ್ತು ಪತ್ನಿ ಇಬ್ಬರೇ ನೌಕರರು! ಹಾಗಾಗಿ ನಾವಿಬ್ಬರೇ ಹೋಗಿ ಸಕಲೇಶಪುರದಲ್ಲೇ ರವಿಸರ್ ಮೂಲಕ `ಪಾಸಿಟಿವ್ ಪಿಕ್ಚರ್’ ಲಾಂಚ್ ಮಾಡಿಸಲು ತಯಾರಾದೆವು.
ಜತೆ ನೀಡಿದ ಛಾಯಾಗ್ರಾಹಕ ಉದಯ ಬಲ್ಲಾಳ
ಹೋಗುವುದೇನೋ ಸರಿ. ಆದರೆ ಅವರು ಲಾಂಚ್ ಮಾಡಿದ ಬಳಿಕ ಹೇಳುವ ಅಭಿಪ್ರಾಯವನ್ನು ಚಿತ್ರೀಕರಿಸಬೇಕಲ್ಲ? ಸದ್ಯದಲ್ಲಿ ಯೂಟ್ಯೂಬ್ ಯೋಜನೆ ಇರದ ಕಾರಣ, ನನ್ನಲ್ಲಿ ಕ್ಯಾಮೆರಾ ಇರಲಿಲ್ಲ. ಅಷ್ಟು ದೊಡ್ಡ ನಟನನ್ನು ಮೊಬೈಲ್ ನಲ್ಲಿ ಶೂಟ್ ಮಾಡೋದು ಚೆನ್ನಾಗಿರುವುದಿಲ್ಲ. ಹಾಗಾಗಿ ಕ್ಯಾಮೆರಾ ಎಲ್ಲಿಂದ ಹೊಂದಿಸುವುದು ಎನ್ನುವ ಸಮಸ್ಯೆ ತಲೆಗೆ ಹಚ್ಚಿಕೊಂಡಿದ್ದ ನನಗೆ ತಮ್ಮ ಕ್ಯಾಮೆರಾ ನೀಡುವುದಾಗಿ ಧೈರ್ಯ ತುಂಬಿದವರು ಅಶುಬೆದ್ರ. ಪ್ರಸ್ತುತ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ `ಅಳಿದು ಉಳಿದವರು’ ಚಿತ್ರದ ನಾಯಕ ಹಾಗೂ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕರಾಗಿರುವ ಅವರು, ತಮ್ಮ ಸಿನಿಮಾ ಕ್ಯಾಮೆರಾವನ್ನೇ ನನ್ನ ಕೈಗೊಪ್ಪಿಸಿದರು. ಆದರೆ ಕ್ಯಾಮೆರಾ ಸಿಕ್ಕಿತೆಂದು ಸಂಭ್ರಮಿಸಲು ನನಗೆ ಚಿತ್ರೀಕರಣ ವಿಧಾನವೇ ತಿಳಿದಿರಲಿಲ್ಲವಲ್ಲ? ಹಾಗೆ ಚಿಂತಿಸಿದಾಗ ನೆರವಿಗೆ ಬಂದವರು ಸಿನಿಮಾ ಛಾಯಾಗ್ರಾಹಕರಾದ ಉದಯ ಬಲ್ಲಾಳ್.

ಪ್ರಸ್ತುತ ಅವರು ರಾಘವೇಂದ್ರ ರಾಜ್ ಕುಮಾರ್ ಅವರು ಅಭಿನಯಿಸಿರುವ `ಆಡಿಸಿದಾತ’ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಮಂಗಳೂರಲ್ಲಿದ್ದ ಅವರು ಅಲ್ಲಿಂದಲೇ ಬಂದು ಸಕಲೇಶಪುರದಲ್ಲಿ ಭೇಟಿಯಾಗುವುದಾಗಿ ಹೇಳಿದರು. ಹಾಗೆ ಮುಂಜಾವಿಗೂ ಮುನ್ನ ಸಕಲೇಶಪುರ ತಲುಪಿದ ನಮಗೆ ಅಲ್ಲಿಂದ ಕೋಟೆಬೆಟ್ಟಕ್ಕೆ ಹೋಗಬೇಕಾಗಿತ್ತು. ಕೋಟೆಬೆಟ್ಟದ ಸಮೀಪದಲ್ಲಿರುವ ಎಲ್ಲ ವಸತಿಗೃಹಗಳಲ್ಲಿ ಅದಾಗಲೇ ಚಿತ್ರತಂಡ ಬೀಡುಬಿಟ್ಟಿದ್ದ ಕಾರಣ ನಾವು ಸಕಲೇಶಪುರದಲ್ಲಿ ತಂಗಿ ಬೆಳಿಗ್ಗೆ ಹೊತ್ತಿಗೆ ಹೊರಟು ನಿಂತೆವು. ಅಷ್ಟು ಹೊತ್ತಿಗಾಗಲೇ ಉದಯ ಬಲ್ಲಾಳ್ ಅವರು ಕೂಡ ನಮ್ಮನ್ನು ಸೇರಿಕೊಂಡಿದ್ದರು. ಆದರೆ ಕೋಟೆಬೆಟ್ಟಕ್ಕೆ ಯಾವುದೇ ಬಸ್ ವ್ಯವಸ್ಥೆ ಇರದ ಕಾರಣ, ಜೀಪ್ ಮಾಡಿಕೊಂಡು ಹೋದೆವು. ಮಧ್ಯಾಹ್ನದ ಹೊತ್ತಿಗೆ ಅಲ್ಲಿಗೆ ತಲುಪಿ ನೋಡಿದರೆ ಬೆಟ್ಟದ ಮೇಲೆ ರವಿಚಂದ್ರನ್ ಅವರು ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಆ ಬಗ್ಗೆ ನಾನು ಹಿಂದಿನ ಮೋಹನ್ ಅವರಲ್ಲಿ ಮಾತನಾಡಿದಾಗ ಮೊದಲೇ ನನಗೆ ಆ ಸೂಚನೆ ನೀಡಿದ್ದರು. ಆದರೆ ರವಿಚಂದ್ರನ್ ಅವರು ಹಾಡಿನ ಚಿತ್ರೀಕರಣ ಎಂದರೆ ಹೇಗಿರಬಹುದು ಎನ್ನುವ ಕಲ್ಪನೆಯಲ್ಲಿದ್ದ ನನಗೆ ಅಲ್ಲಿ ಕಂಡಿದ್ದು, ಮಧ್ಯ ವಯಸ್ಸು ದಾಟಿದ ಗೆಟಪ್ಪಿನಲ್ಲಿ ಒಂದಷ್ಟು ಗಂಡಸರೊಂದಿಗೆ ಮದ್ಯದ ಬಾಟಲಿ ಹಿಡಿದ ರವಿ ಸರ್! ಅವರೊಂದಿಗೆ ಅಲ್ಲಿ ನಾಯಕಿ ಇರಲಿಲ್ಲ. ಮೋಹನ್, ಲಕ್ಷ್ಮಣ್, ರವಿಶಂಕರ್ ಗೌಡ ಮೊದಲಾದವರು ಆ ಹಾಡಿಗೆ ಹೆಜ್ಜೆ ಹಾಕಿದ್ದರು! ಬ್ರೇಕ್ ನಲ್ಲಿ ನನ್ನನ್ನು ಕಂಡೊಡನೆ ರವಿ ಸರ್ ಹ್ಯಾಪಿ ಬರ್ತ್ ಡೇ ಎಂದರು! ಅವರಿಂದ ವೆಬ್ಸೈಟ್ ಲಾಂಚ್ ಮಾಡಿಸಬೇಕೆಂಬ ಗಡಿಬಿಡಿಯಲ್ಲಿ ನಾನೇ ಮರೆತಿದ್ದ ನನ್ನ ಜನ್ಮದಿನದ ಸಂಭ್ರಮ ಅಲ್ಲಿಂದ ಶುರುವಾಯಿತು. ಊಟದ ವಿರಾಮ ಮತ್ತು ಅದರ ಬಳಿಕ ಲಾಂಚ್ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಅದರ ಬಳಿಕ, ಅವರೊಂದಿಗೆ ನಾವೆಲ್ಲರೂ ಫೊಟೋ ಕ್ಲಿಕ್ಕಿಸಿಕೊಂಡೆವು.




ರವಿಚಂದ್ರನ್ ಅವರ ಮನಗೆದ್ದ ಕರಣ್ ಆಚಾರ್ಯರ ಚಿತ್ರ!
ಪಾಸಿಟಿವ್ ಪಿಕ್ಚರ್ ಗೆ ಶುಭವಾಗಲಿ ಎಂದು ಹಾರೈಸಿದ ರವಿಚಂದ್ರನ್ ಕೈಕುಲುಕಿ ನಮ್ಮನ್ನು ಬೀಳ್ಕೊಡಲು ತಯಾರಾದರು. ತಕ್ಷಣ ಎಚ್ಚೆತ್ತುಕೊಂಡ ನಾನು ನಿಮಗೊಂದು ಕೊಡುಗೆ ಇದೆ ಸರ್ ಎಂದು ಹೇಳುತ್ತಾ, ನನ್ನ ಕೈಯ್ಯಲ್ಲಿದ್ದ ಕಟ್ಟು ಹಾಕಿದ ಚಿತ್ರವೊಂದನ್ನು ಅವರ ಕೈಗೆ ನೀಡಿದೆ.! ಅವರು ಅದನ್ನು ಆಗಲೇ ನೋಡಿ ಮೆಚ್ಚಿದ್ದು ಮಾತ್ರವಲ್ಲದೆ, ಮತ್ತೆ ಶೂಟಿಂಗ್ ಬ್ರೇಕ್ ಟೈಮ್ ನಲ್ಲಿಯೂ ತರಿಸಿಕೊಂಡು ನೋಡಿದರು. ಬಳಿಕ ನನಗೆ ಹೇಳಿ ಕರಣ್ ಆಚಾರ್ಯ ನಂಬರ್ ಪಡೆದುಕೊಂಡರು. ಅದು ರವಿಬೋಪಣ್ಣದಲ್ಲಿ ರವಿಚಂದ್ರನ್ ಹಾಕಿದ್ದ ಗೆಟಪ್ ಆಗಿತ್ತು. ಅದನ್ನು ತಮ್ಮ ಸಿನಿಮಾದಲ್ಲಿ ಕೂಡ ಬಳಸಿಕೊಳ್ಳುವ ಆಕಾಂಕ್ಷೆ ಇರುವುದಾಗಿ ತಿಳಿಸಿದ ರವಿಚಂದ್ರನ್ ಆ ಬಗ್ಗೆ ಕರಣ್ ಜತೆಗೆ ಮಾತನಾಡುವುದಾಗಿ ಹೇಳಿದರು. ನನಗೆ ತುಂಬ ಖುಷಿಯಾಯಿತು. ಅದಕ್ಕಿಂತಲೂ ಖುಷಿಯ ವಿಚಾರ ಏನೆಂದರೆ ಅಂದಿನಿಂದಲೇ ಅವರು ತಮ್ಮ ವಾಟ್ಸ್ಯಾಪ್ ಡಿ.ಪಿಯಾಗಿ ಅದೇ ಚಿತ್ರವನ್ನು ಬಳಸಿಕೊಂಡರು.