top of page

ವರ್ಷಾಂತ್ಯದಲ್ಲಿ ಸಿನಿಮಾಗಳ ಆಕರ್ಷಕ ವರ್ಷಧಾರೆ.!

D8H_4235_edited.jpg

Positive with Pathuru

ಇತ್ತೀಚಿನ ವರ್ಷಗಳಲ್ಲಿನ ಸಿನಿಮಾ ಬಿಡಗಡೆಯನ್ನು ಗಣನೆಗೆ ತೆಗೆದುಕೊಂಡರೆ ವರ್ಷಾಂತ್ಯಕ್ಕೆ ಒಂದಿಬ್ಬರು ತಾರೆಯರ ಸಿನಿಮಾಗಳು ಅದ್ಧೂರಿಯಾಗಿ ಬಿಡುಗಡೆಯಾಗುವುದನ್ನು ಕಾಣುತ್ತೇವೆ. ಆದರೆ ಈ ವರ್ಷಾಂತ್ಯದಲ್ಲಿ ತಾರೆಗಳು ಮಾತ್ರವಲ್ಲ, ತಾರೆಗಳೇ ಇಲ್ಲದ ಒಂದಷ್ಟು ಸದಭಿರುಚಿಯ ಚಿತ್ರಗಳು ಕೂಡ ಬಿಡುಗಡೆ ಕಂಡಿವೆ. ಕಳೆದ ಬಾರಿ ದೇಶದಲ್ಲೇ ಅತಿ ಹೆಚ್ಚು ಸಿನಿಮಾಗಳನ್ನು ಬಿಡುಗಡೆಗೊಳಿಸಿ ಸುದ್ದಿಯಾದ ಕನ್ನಡ ಚಿತ್ರರಂಗ ಈ ವರ್ಷ ತನ್ನ ಗುಣಮಟ್ಟವನ್ನು ಉಳಿಸಿಕೊಂಡಿರುವುದು ಖುಷಿಯ ವಿಚಾರವೇ ಸರಿ.

 

ನವೆಂಬರ್ ಒಂದರಂದು ರಾಜ್ಯಾದ್ಯಂತ ರಾಜ್ಯೋತ್ಸವದ ಸಂಭ್ರಮ. ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಪ್ರಮುಖ ತಾರೆಯ ಸಿನಿಮಾ ಬಿಡುಗಡೆ ಕೂಡ ಇದ್ದರೆ ಸಿನಿ ರಸಿಕರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಆ ಜಾಗವನ್ನು ಈ ಬಾರಿ ಡಾ. ಶಿವರಾಜ್ ಕುಮಾರ್ ಅವರ 'ಆಯುಷ್ಮಾನ್ ಭವ' ಚಿತ್ರ ಬರುವ ನಿರೀಕ್ಷೆ ಇತ್ತು. ಅವರು ಜಾಹೀರಾತು ಕೂಡ ನೀಡಿದ್ದರು. ಆದರೆ ದಿನಾಂಕ ಹತ್ತಿರವಾದ ಹಾಗೆ ಚಿತ್ರ ಮುಂದಕ್ಕೆ ಹೋಯಿತು! ಹಾಗಾಗಿ ಈ ಬಾರಿ ಯಾವುದೇ ಬಹು ನಿರೀಕ್ಷಿತ ತಾರೆಯರ ಚಿತ್ರಗಳಿಲ್ಲದೆ ರಾಜ್ಯೋತ್ಸವ ಆರಂಭವಾಯಿತು ಎಂದೇ ಹೇಳಬಹುದು.

 

ಎರಡನೇ ವಾರದಲ್ಲಿ ತೆರೆಕಂಡ ರವಿಚಂದ್ರನ್ ನಾಯಕರಾಗಿದ್ದ 'ಆ ದೃಶ್ಯ' ಹೆಚ್ಚು ದಿನ ಮೋಡಿ ಮಾಡದೇ ಬೇಗ ಅದೃಶ್ಯವಾಗಿ ಬಿಟ್ಟಿತು. ಅದು ರಿಮೇಕ್ ಚಿತ್ರವಾಗಿದ್ದರೂ ಚಿತ್ರ ನೋಡಿದವರೆಲ್ಲ  ರವಿಚಂದ್ರನ್ ಅವರನ್ನು, ಅವರ ಹೊಸ ಇಮೇಜನ್ನು ಮೆಚ್ಚಿಕೊಂಡವರೇ. ಅದೇ ದಿನ ತೆರೆಕಂಡ ರವಿ ಬಸ್ರೂರು ಮತ್ತು ತಂಡ ನಿರ್ದೇಶಿಸಿದ್ದ ಗಿರ್ಮಿಟ್ ಮಕ್ಕಳು ದೊಡ್ಡವರ ಪಾತ್ರ ನಿರ್ವಹಿಸಿರುವ ಕಾರಣಕ್ಕೆ ಗಮನ ಸೆಳೆಯಿತು. ನಾಯಕ, ನಾಯಕಿಗೆ ಯಶ್ ಮತ್ತು ರಾಧಿಕಾ ಪಂಡಿತ್ ನೀಡಿದ ವಾಯ್ಸ್ ಎಲ್ಲರನ್ನೂ ಆಕರ್ಷಿಸಿತು. ಆದರೆ ಜನ ಥಿಯೇಟರ್ ಗೆ ಬರುತ್ತಿಲ್ಲ ಎಂದು ಖುದ್ದು ಬಸ್ರೂರು ಕಣ್ಣೀರು ಹಾಕಿದರು. ನವೆಂಬರ್ ಒಂದರಂದು ಬಿಡುಗಡೆಗೊಳಿಸುವ ಕನಸಿನೊಂದಿಗೆ ಕವಿರಾಜ್ ಸಿದ್ಧಪಡಿಸಿದ ಚಿತ್ರ 'ಕಾಳಿದಾಸ ಕನ್ನಡ ಮೇಷ್ಟ್ರು'. ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ಜೋಡಿಯಾಗಿ ನಟಿಸಿರುವ ಈ ಚಿತ್ರ ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ನೈಜವಾಗಿ ಹೇಳುವಂಥ ಚಿತ್ರ ಎನ್ನುವ ಕಾರಣದಿಂದಲೇ ಸುದ್ದಿಯಾಗಿತ್ತು.  ಅದೇ ದಿನ ಬಿಡುಗಡೆಯಾದ ಕನ್ನಡಾಭಿಮಾನದ ಕುರಿತಾದ ಮತ್ತೊಂದು ಚಿತ್ರವೇ ಕನ್ನಡ್ ಗೊತ್ತಿಲ್ಲ. ನಿರ್ದೇಶಕ ಮಯೂರ ರಾಘವೇಂದ್ರ ಅವರ ಕಾನ್ಸೆಪ್ಟ್ ಚೆನ್ನಾಗಿತ್ತು ಎನ್ನುವುದನ್ನು ಬಿಟ್ಟರೆ ಚಿತ್ರ ಅಷ್ಟೇನೂ ಗಮನ ಸೆಳೆಯಲಿಲ್ಲ. ಅದೇ ದಿನ ತೆರೆಕಂಡ 'ರಾಜಲಕ್ಷ್ಮಿ' ಚಿತ್ರ ಕಂಡ ಬಹುತೇಕರು ಇಷ್ಟಪಟ್ಟಿದ್ದು ನಾಯಕ ನವೀನ್ ತೀರ್ಥಹಳ್ಳಿಯನ್ನು ಮಾತ್ರ. ಅದೇ ರೀತಿ ಆಯುಷ್ಮಾನ್ ಭವ ಚಿತ್ರದಲ್ಲಿ ಮೋಡಿ ಮಾಡುತ್ತಾರೆ ಎನ್ನಲಾಗಿದ್ದ ಪಿ ವಾಸು ರವಿಚಂದ್ರನ್ ಜೋಡಿ ಅಂಥ ವಿಶೇಷಗಳನ್ನು ಸೃಷ್ಟಿಸಲಿಲ್ಲ.

 

ನವ ನಿರ್ದೇಶಕ ಕ್ರಿಶ್ ನಿರ್ದೇಶನದಲ್ಲಿ ತೆರೆಕಂಡ 'ಕಪಟ ನಾಟಕ‌ ಪಾತ್ರಧಾರಿ' ಚಿತ್ರದಲ್ಲಿ ಕಾನ್ಸೆಪ್ಟ್ ಹೊಸತನದಿಂದ ಕೂಡಿತ್ತು. ಹಿಂದಿ ಚಿತ್ರ 'ತಲಾಶ್' ನೆನಪಿಸುವಂತಿದ್ದ ಈ ಸಿನಿಮಾ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಇವೆಲ್ಲದರ ನಡುವೆ ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಾಟಕ್ಕಿದೆ' ಚಿತ್ರ ತೆಲುಗು ರಿಮೇಕ್ ಆದರೂ, ಚಿತ್ರದ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು. ನವೆಂಬರ್ ಅಂತ್ಯದಲ್ಲಿ ಕೂಡ ಒಂದಷ್ಟು ಬಹುನಿರೀಕ್ಷೆಯ ಚಿತ್ರಗಳು ಬಿಡುಗಡೆಯಾದವು. ಬಹುದಿನಗಳ ಬಳಿಕ ರಾಧಿಕಾ ಕುಮಾರಸ್ವಾಮಿ ನಟಿಸಿದ 'ದಮಯಂತಿ' ಕೂಡ ಅವುಗಳಲ್ಲೊಂದು. ಆದರೆ ದಮಯಂತಿಯ ಪಾತ್ರ ಪ್ರಮಾಣ ಚಿಕ್ಕದಾಗಿದ್ದು, ಉಳಿದ ಭಾಗ 'ಮನೆ ಮಾರಾಟಕ್ಕಿದೆ' ಚಿತ್ರವನ್ನೇ ಮತ್ತೊಮ್ಮೆ ಕಂಡಂತಾದ ಕಾರಣ ಅಭಿಮಾನಿಗಳು ನಿರಾಶರಾಗಿದ್ದು ಸುಳ್ಳಲ್ಲ. ಆದರೆ ಚಂದ್ರಮೋಹನ್ ನಿರ್ದೇಶನದ 'ಬ್ರಹ್ಮಚಾರಿ' ಸಿನಿಮಾವು ಕಟ್ಟಾ ಬ್ರಹ್ಮಚರ್ಯ ಪಾಲಿಸಿ ವಿವಾಹಿತನಾದವನ ದಾಂಪತ್ಯ ಬದುಕು ಹೇಗಾದೀತು ಎನ್ನುವುದನ್ನು ಹೇಳಿತ್ತು. ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಅವರ ಜುಗಲ್ಬಂಧಿ ಮತ್ತು ಅಚ್ಯುತ ಕುಮಾರ್ ಅವರ ಪಕ್ಕವಾದ್ಯ ಚಿತ್ರದ ಹೈಲೈಟಾಗಿತ್ತು! 'ಮುಂದಿನ ನಿಲ್ದಾಣ' ಸಿನಿಮಾದ ಮೂಲಕ ಕನ್ನಡಕ್ಕೊಬ್ಬ ಕ್ಲಾಸ್ ನಿರ್ದೇಶಕ ಎಂಟ್ರಿಯಾಗಿರುವುದನ್ನು ವಿನಯ್ ಭಾರದ್ವಾಜ್ ಸಾಬೀತು ಪಡಿಸಿದರು. ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಮತ್ತು ನವ ಕಲಾವಿದರ ಪಾತ್ರಗಳನ್ನು ನಿರೂಪಿಸಿದ ರೀತಿ, ಸಂಭಾಷಣೆಯ ವೈಖರಿ ಎಲ್ಲವೂ ಆಕರ್ಷಕವಾಗಿತ್ತು.

 

ಮೂಕಜ್ಜಿಯ ಕನಸುಗಳು ಸಿನಿಮಾ ಕೂಡ ಒಂದು ಉತ್ತಮ ಚಿತ್ರವಾಗಿ ಗಮನ ಸೆಳೆಯಿತು. ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಎನ್ನುವುದರ ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿಯವರ   ನಿರ್ದೇಶನದ ಚಿತ್ರ ಎನ್ನುವುದು ಚಿತ್ರದ ಕುರಿತು ವಿಶೇಷ ನಿರೀಕ್ಷೆ ಮೂಡಿಸಿದ ಅಂಶವಾಗಿತ್ತು. ಆ ಎಲ್ಲ ನಿರೀಕ್ಷೆಗಳೊಂದಿಗೆ ಚಿತ್ರ ನೋಡಿದಾಗಲೂ ನಿರಾಶೆ ಮೂಡಿಸದ ಮಾದರಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಅದರಲ್ಲಿ ಮೂಕಜ್ಜಿಯಾಗಿ ನಟಿಸಿದ ಹಿರಿಯ ನಟಿ ಬಿ. ಜಯಶ್ರೀ ಮತ್ತು ಅರವಿಂದ ಕುಪ್ಲೀಕರ್ ಮೊದಲಾದ ಕಲಾವಿದರ ತಂಡದ ಪಾತ್ರವೂ ಪ್ರಧಾನವೆನಿಸಿದೆ.

 

ಡಿಸೆಂಬರ್ ಪ್ರಥಮ ವಾರದಲ್ಲೇ ಮತ್ತೆ ಎರಡು ವೈವಿಧ್ಯಮಯ ಸಿನಿಮಾಗಳು ಆಗಮಿಸಿವೆ. ಯುವ ನಿರ್ಮಾಪಕ ಅಶು ಬೆದ್ರ ಅವರು ಪ್ರಥಮ ಬಾರಿಗೆ ನಾಯಕರಾಗಿ ನಟಿಸಿರುವ 'ಅಳಿದು ಉಳಿದವರು' ಅವುಗಳಲ್ಲಿ ಒಂದು. ಅರವಿಂದ ಶಾಸ್ತ್ರಿ ಅವರ ಆಕರ್ಷಕ ನಿರ್ದೇಶನ ಪವನ್ ಕುಮಾರ್, ಸಂಗೀತಾ ಭಟ್, ಅತುಲ್ ಕುಲಕರ್ಣಿ ಮತ್ತು ಅರವಿಂದ್ ರಾವ್ ಮೊದಲಾದವರ ಆಕರ್ಷಕ ತಾರಾಗಣ ಚಿತ್ರದ ಹೈಲೈಟ್ ಆಗಿದೆ. ಅದೇ ರೀತಿ ಪುಟ್ಟಣ್ಣ ಕಣಗಾಲ್ ಅವರ ಬಳಿಕ ಅದೇ ಮಾದರಿಯಲ್ಲಿ ಬೇರೆ ಬೇರೆ ಕತೆಗಳನ್ನು ಒಂದು ಗುಚ್ಛವಾಗಿಸಿ 'ಕಥಾ ಸಂಗಮ' ಎನ್ನುವ ಅದೇ ಹಳೆಯ ಹೆಸರಿನಲ್ಲಿ ಹೊಸಬರ ಹೊಸ ಚಿತ್ರದೊಂದಿಗೆ ಬಂದಿದ್ದಾರೆ ನಿರ್ದೇಶಕ ರಿಷಭ್ ಶೆಟ್ಟಿ. ಏಳು ನಿರ್ದೇಶಕರು ಏಳುಕತೆಗಳೊಂದಿಗೆ ಬಂದಿರುವ ಈ ಸಿನಿಮಾ ಕೂಡ ಪ್ರೇಕ್ಷಕರ ನಡುವೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. 

 

ಇವೆಲ್ಲದರ ಜತೆಗೆ ಇದೇ  ವಾರ ಬಿಡುಗಡೆಗೊಳ್ಳಲಿರುವ ದರ್ಶನ್ ನಟನೆಯ 'ಒಡೆಯ', ಸುದೀಪ್ ಖಳನಟರಾಗಿ ನಟಿಸಿರುವ ಹಿಂದಿ ಚಿತ್ರ 'ದಬಂಗ್ 3', ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ‌ ಚಿತ್ರ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳು ಸಿನಿರಸಿಕರನ್ನು ನಿರೀಕ್ಷೆಯ ತುದಿಯಲ್ಲಿರಿಸಿವೆ. ಸ್ಟಾರ್  ಸಿನಿಮಾಗಳ ಜತೆಗೆ ಬಿಡುಗಡೆಯಾಗಿರುವ ದೊಡ್ಡ ತಾರೆಯರಿಲ್ಲದ ಆದರೆ ಉತ್ತಮ ಅಭಿರುಚಿಯ ಸಣ್ಣ ಬಜೆಟ್ ಚಿತ್ರಗಳು ಕೂಡ ಗೆಲುವು ಕಾಣಲಿ ಎನ್ನುವುದೇ ನಮ್ಮ ಆಶಯ.

3cc3a183160477.5d341cfc05cc7.png
Mundina-Nildana4.jpg
Rate UsDon’t love itNot greatGoodGreatLove itRate Us
bottom of page