top of page

ರಾಘಣ್ಣ ಯಾಕೆ 25 ನೇ ಚಿತ್ರದಲ್ಲಿ ಇಂಥ ಪಾತ್ರ ಮಾಡಿದರು?

 

ಹೌದು, ರಾಘವೇಂದ್ರ ರಾಜ್ ಕುಮಾರ್ ಅವರು 25ನೆ ಚಿತ್ರ ಮಾಡುತ್ತಿದ್ದಾರೆ ಎಂದು ' ಆಡಿಸಿದಾತ'  ಮುಹೂರ್ತಕ್ಕೆ ಬಂದವರಿಗೆ ಹೊಸಬರ ತಂಡವನ್ನು ಕಂಡು ಅಚ್ಚರಿಯಾಗಿತ್ತು. ಈ ಹೊಸಬರ ತಂಡದಲ್ಲಿ ಅವರು ನೋಡಿ 25 ನೇ ಚಿತ್ರ ನೀಡಲು ಒಪ್ಪಿಕೊಂಡಿರಬಹುದು? ಇದೇ ಪ್ರಶ್ನೆ ಯನ್ನು ನೇರವಾಗಿ ಕೇಳುವ ಮೂಲಕ ಚಿತ್ರ ಚಿತ್ತಾರ ರಾಘಣ್ಣನ ಜೊತೆಗೆ ಮಾತಿಗೆ ಮುಂದಾಯಿತು. ಆಗ ತಿಳಿದು ಬಂದ ವಿಷಯ ಹಲವಾರು. ಇಡೀ ಚಿತ್ರ ರಾಘವೇಂದ್ರ   ಅವರ ಮೇಲೆ ನಡೆಯುತ್ತದೆ. ಪ್ರತಿಯೊಂದು ದೃಶ್ಯಗಳಲ್ಲಿಯೂ ಸಂದೇಶಗಳಿವೆ. ಮಧ್ಯಂತರದ ಬಳಿಕ ನಿಜವಾದ ಕತೆ ಶುರುವಾಗುತ್ತದೆ. ಐದು ಹಾಡುಗಳಿವೆ‌ " ಚಿತ್ರಕತೆ ಕೇಳಿದಾಗ ನನಗೂ ಖುಷಿಯಾಯಿತು‌ ಎಲ್ಲ ಯುವಕರ ತಂಡವೇ ಇದೆ. ಆದರೆ ಏನೋ ಮಾಡಬೇಕು ಎನ್ನುವ ತುಡಿತ ಅವರಲ್ಲಿದೆ. ಅವರ ಆ ಕಾಂಟ್ರಿಬ್ಯೂಶನ್ ನನಗೆ ತುಂಬ ಸಹಾಯ ಆಗುತ್ತಿದೆ. ಅಂದರೆ ರೆಗ್ಯುಲರ್ ಸಿನಿಮಾ ಫಾರ್ಮ್ಯಾಟ್ ಅಲ್ಲದೇ ಬೇರೇನೋ ಹೇಳಬೇಕು ಎನ್ನುವ ಹಸಿವು ಅವರಲ್ಲಿದೆ. ಅದು ನನಗೆ ಇಷ್ಟವಾಯಿತು. ಇದೆಲ್ಲವೂ ಜನರಿಗೆ ತಲುಪಿದರೆ ನಾವು ಗೆದ್ದ ಹಾಗೆಯೇ ಎನ್ನುತ್ತಾರೆ" ರಾಘಣ್ಣ

Raghavendra.jpg

 

ರಾಘಣ್ಣ ಬಹು ನಿರೀಕ್ಷಿತ ಚಿತ್ರವಾಗಿ ಯುವ ನಿರ್ದೇಶಕ ಚಿತ್ರವನ್ನು ಒಪ್ಪಿಕೊಂಡೀದ್ದೀರಂತೆ?

 

ಹೊಸಬರು ಅಂದ್ರೆ ನಿರ್ದೇಶಕರಾಗಿ ಇದೇ ಮೊದಲ ಚಿತ್ರ ಏನಲ್ಲ. ಎಂ ಡಿ ಶ್ರೀಧರ್ ಅವರಿಗೆ ಅಸಿಸ್ಟೆಂಟ್, ಅಸೋಸಿಯೇಟಾಗಿದ್ದಂಥವರು ನಿರ್ದೇಶಕ ಪಣೀಶ ಭಾರದ್ವಾಜ್. ಈ ಹಿಂದೆ ಅವರು ' ಮೈಲಾಪುರ ಎನ್ನುವ ಚಿತ್ರ ಮಾಡಿದ್ದರು. ಅದಕ್ಕಿಂತ ಹೆಚ್ಚಾಗಿ ನನ್ನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಅವರು ನನ್ನ ' ನಂಜುಂಡಿ ಕಲ್ಯಾಣ' ಚಿತ್ರ ಬರುವಾಗ ತುಂಬ ಚಿಕ್ಕ ಹುಡುಗನಾಗಿದ್ರಂತೆ. ಮುಂದೊಂದು ದಿನ ನನಗಾಗಿ ಸ್ವಸ್ತಿಕ್ ಗಿಂತಲೂ ಡಿಫರೆಂಟಾಗಿ ಒಂದು ಸಿನಿಮಾ ಮಾಡಬೇಕು ಎನ್ನುವ ಕನಸು ಕಂಡವರು. ಆದರೆ ನಾನು ಅನಾರೋಗ್ಯ ಕ್ಕೊಳಗಾಗಿ ಚಿತ್ರರಂಗದಿಂದ ದೂರವಾಗಿಬಿಟ್ಟಿದ್ದೆ.  ಆದರೆ ಮತ್ತೆ ಬಣ್ಣ ಹಚ್ಚುತ್ತಿದ್ದೇನೆ ಎಂದು ತಿಳಿದೊಡನೆ ಅವರು ತಕ್ಷಣ ನನಗಾಗಿಯೇ ಹೊಸದಾಗಿ ಒಂದು ಕತೆ ಮಾಡಿಕೊಂಡು ಬಂದಿರುವುದಾಗಿ ಹೇಳಿ ಮನೆಗೆ ಬಂದಿದ್ದರು.

 

ನಿಮಗೆ ಕತೆ ಹೊಸದಾಗಿದೆ ಎಂದು ಅನಿಸಿತೇ?

 

ನಾನು 30 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ತುಂಬ ಸಿನಿಮಾಗಳನ್ನು ಮಾಡಿಲ್ಲ. ಹಾಗಾಗಿ ನಾನು ಮಾಡಿರದಂಥಹ ಹೊಸ ಪಾತ್ರಗಳು ತುಂಬ ಸಿಗುತ್ತವೆ. ಅದರ ಹೊರತು ಹಿಂದೆಂದೂ ಕೇಳಿರದಂಥಹ ಕತೆ ಎಂದು ನಾನು ಹೇಳಲ್ಲ. ಯಾಕೆಂದರೆ ಯಾವ ಕತೆ‌ಮಾಡಿದರೂ ರಾಮಾಯಣ, ಮಹಾಭಾರತ ಹೇಳಿರದಂಥ ಹೊಸ ಕತೆಗಳು ಯಾವುದೂ‌ ಇಲ್ಲ. ಚಿತ್ರಕತೆಯಲ್ಲಿ ಹೊಸತನದ ಪ್ರಯತ್ನ ನಡೆದಿದೆ. ಹಾಗಾಗಿ ಚಿತ್ರ ನೋಡುತ್ತಾ ಹೋಗಬೇಕಾದರೆ ಒಂದು ಹಂತದ ತನಕ ಕುತೂಹಲ ಕಾಪಾಡುತ್ತ ಹೋಗುತ್ತದೆ. ಸಸ್ಪೆನ್ಸ್ ಇರುವ ಪಾತ್ರವಾದ ಕಾರಣ ನಾನು ನಿಮ್ಮಲ್ಲಿ ಇದಕ್ಕಿಂತ ಹೆಚ್ಚು ವಿವತಣೆ ನೀಡಲು ಸಾಧ್ಯವಿಲ್ಲ.

 

ನಿಮ್ಮ ಮೂಲಕ ಚಿತ್ರದಲ್ಲಿ ಹೇಳಿರುವಂಥ ಸಂದೇಶ ಏನು?

 

ನೀವು ಚಿತ್ರದ ಟ್ಯಾಗ್ ಲೈನ್ ಗಮನಿಸಿರಬಹುದು, 'ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ' ಎಂದು ಬರೆಯಲಾಗಿದೆ. ಅದು ಪ್ರಕೃತಿಯ ಗುಣ. ನಾವು ಇತರರಿಗೆ ಒಳ್ಳೆಯದನ್ನು ಬಯಸಿದರೆ ಅದು ನಮಗೆ ಒಳಿತನ್ನೇ ನೀಡುತ್ತದೆ ಎನ್ನುವುದು ತಾತ್ಪರ್ಯ. ಉದಾಹರಣೆಗೆ ರೆಫ್ರಿಜರೇಟರ್‌ ಬಂದ ಮೇಲೆ ಅದು ಇನ್ನೊಬ್ಬರ ಊಟವನ್ನು ಕಿತ್ತುಕೊಳ್ಳುತ್ತಿದೆ. ನಮ್ಮ ಊಟದ ಬಳಿಕ ಹೆಚ್ಚಾಗಿ ಉಳಿದರೆ ಅದನ್ನು ಹಸಿದವರಿಗೆ ಕೊಡುವ ಅಭ್ಯಾಸ ನಮ್ಮಲ್ಲಿ ಬೆಳೆಯುವುದಿಲ್ಲ. ನಾವೇ ನಾಳೆ ಬಳಸಿಕೊಳ್ಳೋಣ ಎಂದು ಎತ್ತಿಟ್ಟುಕೊಳ್ಳುತ್ತೇವೆ. ಆದರೆ ಮರುದಿನ ನಾವೇ ಮರೆತು ಬಿಡುತ್ತೇವೆ.ಅಷ್ಟರಲ್ಲಿ ಎತ್ತಿಟ್ಟಿರುವುದು ಹಾಳಾಗಿ ಹೋಗಿರುತ್ತದೆ.‌ಅಲ್ಲಿಗೆ ಎತ್ತಿಟ್ಟದ್ದು ಪರರಿಗರ ಎನ್ನುವ ಮಾತು ನಿಜವಾ್ ಹಾಗೆ ಆಯಿತು. ಆ ಸಂದೇಶವನ್ನು ನನ್ನ ಪಾತ್ರ ಹೇಳುತ್ತದೆ.

 

ಇಪ್ಪತ್ತೈದನೇ ಚಿತ್ರ ಎನ್ನುವ ಕಾರಣಕ್ಕೆ ನಿರೀಕ್ಷೆ ಇರಿಸಿಕೊಂಡವರಿಗೆ ಚಿತ್ರ ತೃಪ್ತಿ ನೀಡಬಹುದೆ?

ಚಿತ್ರ ಆರಂಭವಾದ ತುಂಬ ಸಮಯಗಳ ಕಾಲ‌ ' ರಾಘಣ್ಣ ಯಾಕೇ 25 ನೇ ಚಿತ್ರದಲ್ಲಿಚಿತ್ರದಲ್ಲಿ ಇಂಥ ಪಾತ್ರ ಮಾಡಿದರು' ಎಂದು ಯೋಚಿಸುವಂತೆ ಮಾಡುತ್ತದೆ. ಸಿನಿಮಾದ ನಿರೂಪಣೆಯೇ ಚಿತ್ರದ ಸರ್ ಪ್ರೈಸ್ . ಆದರೆ ಅಂಥ ಯೋಚನೆ ಪ್ರೇಕ್ಷಕರಿಗೆ ಮೂಡುವ ಹೊತ್ತಿಗೆ ಸರಿಯಾಗಿ ಅಲ್ಲಿಗೇ ಒಂದು ಆನ್ಸರ್ ಸಿಕ್ಕಾಗ ಪ್ರೇಕ್ಷಕರಿಗೆ‌ ಖುಷಿತಾಗುತ್ತದೆ‌.‌ ನಡೆದಾಡುವುದೇ ಕಷ್ಟ ಎಂಬಂತಿರುವ ನನ್ನಿಂದ ಫೈಟ್ ಮಾಡಿಸುವುದಕ್ಕೋಸ್ಕರ ಮುಂಬೈನಿಂದ ಸಾಹಸ ಸಂಯೋಜಕರನ್ನು ಕರೆಸುತ್ತಿದ್ದಾರೆ. ಹಾಡು ಹಾಡಿಸುತ್ತಿದ್ದಾರೆ.

 

ಇವೆಲ್ಲವೂ ನಿಮಗೆ ಕಷ್ಟ ಅನಿಸುತ್ತಿಲ್ಲ ತಾನೇ..?

 

ಖಂಡಿತವಾಗಿ ಇಲ್ಲ. ಈಗ ಸಿನಿಮಾ ತುಂಬಾ ಸುಲಭವಾಗಿದೆ. ಹಾಗೆ ನೋಡಿದರೆ ಈಗ ಮುಂಚಿನಷ್ಟು ಕಷ್ಟವೇ ಇಲ್ಲ. ಚಿತ್ರೀಕರಣದ ಬಳಿಕ ಕೂಡ ಪ್ರಮುಖ ಬದಲಾವಣೆಗಳನ್ನು ಟೇಬಲ್ ಮೇಲೆಯೇ ಮುಗಿಸಬಹುದು. ಟೆಕ್ನಾಲಜಿ ತುಂಬ ಬೆಳೆದಿದೆ. ನನ್ನ ಗೆಟಪ್, ಬ್ರೌನಿಶ್ ಕೂದಲು, ಕೂಲಿಂಗ್ ಗ್ಲಾಸ್ ಎಲ್ಲವೂ ನನ್ನನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆದಿದೆ.

 

ಮೊದಲ ದಿನದ ಶೂಟಿಂಗ್ ಗೆ ಪುನೀತ್ ಕ್ಲ್ಯಾಪ್ ಮಾಡಿದ್ದರು. ರಾತ್ರಿ ನಮ್ಮ ಮನೆಯ ಹತ್ತಿರವೆ ಚಿತ್ರೀಕರಣ ನಡೆಯಿತು. ಅಪ್ಪುಗೆ ಎಲ್ಲ ಒಂದು ಕನಸು ಈಗ, ರಾಘಣ್ಣನಿಗೆ ಸ್ಪ್ರೋಕ್ ಆದಮೇಲೆ ಮನೆಯಲ್ಲೇ ಇದ್ದು ಬಿಡುತ್ತಾನೆ ಎಂದುಕೊಂಡಿರಬೇಕಾದ್ರೆ ಮತ್ತೆ ನಾನು ಆ್ಯಕ್ಟ್ ಮಾಡ್ತಿರೋದಕ್ಕೆ ತುಂಬ ಖುಷಿಯಾಗಿದೆ. ಅದಕ್ಕೆ ಅಣ್ಣನ ಆ್ಯಕ್ಟಿಂಗ್ ನೋಡೋಣ ಎಂದು ಕುತೂಹಲದಿಂದ ಬರ್ತಾ ಇದ್ದಾರೆ. ನಮ್ಮ ಹಳೆಯ ದಿನಗಳು ನೆನಪಾಗುತ್ತಿವೆ. ನನ್ನ ನಂಜುಂಡಿ ಕಲ್ಯಾಣ, ಸ್ವಸ್ತಿಕ್ ಚಿತ್ರಗಳ ಶೂಟಿಂಗ್ ವೇಳೆ ಅಪ್ಪು ದಿನಾ ಬರೋರು. ಅಪ್ಪು ಆಗ ಪ್ರೊಡಕ್ಷನ್ ನೋಡಿಕೊಳ್ಳುತ್ತಾ ಇದ್ರು. ಶೂಟಿಂಗ್ ಗೆ ಹೋಗ್ತೀನಿ. ನನ್ನ ಮಗಾನೂ ಶೂಟಿಂಗ್ ಗೆ ಬರ್ತಾನೆ. ನನ್ನ ಜೊತೆಗೆ ಗಂಟೆಗಳ ಕಾಲ ಕಳೆಯುತ್ತಾನೆ. ಗೆಟಪ್ ಬಗ್ಗೆ ನೋಡುತ್ತಾನೆ. ಚಿಕ್ಕ ಮಗಾನೂ ಬರುತ್ತಾನೆ. ಹೀಗೆ ನನ್ನ ಮರು ಎಂಟ್ರಿಯಲ್ಲಿ ಕುಟುಂಬದ ಸಹಕಾರ ತುಂಬಾನೇ ಇದೆ.

 

ಹೊಸ‌ ಜಮಾನದ ಯುವಕರ ಜೊತೆಗೆ ಕೆಲಸ ಮಾಡುವಾಗ ಅನಿಸಿದ್ದೇನು?

 

' ರಾಜ್ ಕುಮಾರ್ ಮಗ, ಸಾಕಷ್ಟು ಚಿತ್ರಗಳಲ್ಲಿ ಮಾಡಿದ್ದಾರೆ. ಇವರಿಗೆ ನಾವು ಹೇಳಿಕೊಡೋಕಾಗುತ್ತಾ' ಎಂಬ ಮೆಂಟಾಲಿಟಿ ಹೊಂದಿರುತ್ತಾರೆ. ಆದರೆ ಕಲಿಯೋದಕ್ಕೆ ಕೊನೆಯೇ ಇಲ್ಲ ಎಂದು ನಮ್ಮ ಅಪ್ಪಾಜಿ ನಮಗೆ ಹೇಳಿಕೊಟ್ಟಿದ್ದಾರೆ. ಅದೇ ರೀತಿ ಪ್ರತಿಯೊಂದು ಕೂಡ ನನಗೆ ಹೊಸ ಅನುಭವ ನೀಡುತ್ತಿದ್ದಾರೆ. ಅರೇ ನನ್ನ ಇಷ್ಟು ವರ್ಷಗಳಲ್ಲಿ ಇವನ್ನೆಲ್ಲ ನಾನು ನೋಡೇ ಇರಲಿಲ್ಲವಲ್ಲ ಎಂದು ಕುತೂಹಲದೊಂದಿಗೆ ಈ ತರುಣರ ಜೊತೆಗೆ ತಯಾರಾಗಿದ್ದೇನೆ. ಕಲಾವಿದನಾಗಿ ನನ್ನ ಕೆಲಸ ನಿರ್ದೇಶಕರನ್ನು ಒಪ್ಪಿಸುವಂಥದ್ದು ಮಾತ್ರ. ಪ್ರೇಕ್ಷಕರನ್ನು ಒಪ್ಪಿಸುವ ಜವಾಬ್ದಾರಿ ನಿರ್ದೇಶಕರದ್ದು. ಅವರಿಗೆ ತೃಪ್ತಿಯಾಗಿಲ್ಲವಾದರೆ ಹತ್ತಲ್ಲ, ಇಪ್ಪತ್ತು ಟೇಕ್ ಆದರೂ ನಾನು ಅಭಿನಯಿಸಲು ಸಿದ್ಧನಿರುತ್ತೇನೆ. ಸಾಮಾನ್ಯವಾಗಿ ನಾನು ಕತರ ಪಡೆದುಕೊಂಡು ಒಪ್ಪಿಗೆ ನೀಡುವುದಕ್ಕೆ ಎರಡು ದಿನಗಳ ಕಾಲ ಟೈಮ್ ತೆಗೆದುಕೊಳ್ಳುತ್ತೇನೆ. ದಿನ ಕಳೆಯುತ್ತಿದ್ದಂತೆ ಪ್ರೀತಿ ಜಾಸ್ತಿಯಾಯಿತು. ಇಷ್ಟೆಲ್ಲ ಪ್ರೀತಿ ನೀಡುತ್ತಿರುವ ಅಭಿಮಾನಿಗಳಿಗೆ ಏನಾದರೊಂದು ನೀಡಬೇಕು. ನಾನೂ ಅವರೊಂದಿಗೆ ಇರಬೇಕು ಅಂತ ಬ್ಯಾಕ್ ಗ್ರೌಂಡ್ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ಮಧ್ಯರಾತ್ರಿ ನಾಲ್ಕು ಗಂಟೆಯ ತನಕವೂ ಚಿತ್ರೀಕರಣ ನಡೆಯಿತು. ಬ್ರಿಜ್ ಕೆಳಗೆ, ರಸ್ತೆ ಮೇಲೆ ಮಲಗಿಸೋದು ಮುಂತಾದ ಪ್ರಯೋಗಗಳನ್ನೆಲ್ಲ ಮಾಡಿದರು. ಈಗೆಲ್ಲ ಮಾನಿಟರ್ ಬಂದಿದೆ. ಅಲ್ಲಲ್ಲೇ ನೋಡಿಕೊಂಡು ಬಿಡುತ್ತೇವೆ. ಶೂಟಿಂಗ್ ವೇಳೆಯಲ್ಲಿ ಎಡಿಟ್ ಮಾಡಿ ಅಗತ್ಯ ಬಿದ್ದರೆ ಅಲ್ಲೇ ಸಂಗೀತ ನೀಡುವುದನ್ನು ಕಂಡಿದ್ದೇವೆ.

Rate UsDon’t love itNot greatGoodGreatLove itRate Us
bottom of page