ರೆಡಿಯಾಗುತ್ತಿದ್ದಾನೆ ಕನಸುಗಾರನ ರವಿ ಬೋಪಣ್ಣ

ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಇಷ್ಟವಾಗುವುದೇ ಅವರ ಚಿತ್ರಗಳ ಅದ್ಧೂರಿತನದಿಂದ. ಕನ್ನಡದಲ್ಲಿ ಕೋಟಿ ದಾಟಿದ ಚಿತ್ರ ಮಾಡಿ ಅದೇ ರೀತಿ ಕಲೆಕ್ಷನ್ ಕೂಡ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಕನ್ನಡ ಚಿತ್ರರಂಗದ ಸರ್ವವೂ ಇವರೇ.
ಸ್ಟಾರ್ ನಟರು ಒಂದು ಇಮೇಜ್ ಗೆ ಕಟ್ಟು ಬಿದ್ದರೆ ಅದನ್ನು ಮುಂದುವರಿಸುವುದೇ ಹೆಚ್ಚು. ಯಾಕೆಂದರೆ ಅವರಿಗೆ ವಿಭಿನ್ನ ರೀತಿಯ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇದ್ದರೂ ಪ್ರೇಕ್ಷಕರು ಅಭಿಮಾನಿಗಳನ್ನು ಸ್ವೀಕರಿಸದೇ ಹೋಗುವ ಅಪಾಯವಿರುತ್ತದೆ. ರವಿಚಂದ್ರನ್ ಕೂಡ ಪ್ರೇಮ ಚಿತ್ರಗಳ ನಾಯಕರಾಗಿ ಗುರುತಿಸಿಕೊಂಡವರು. ಆದರೆ ಅದೇ ವೇಳೆ ರಣಧೀರದಂಥ ಆ್ಯಕ್ಷನ್ ಚಿತ್ರಗಳಿಗೂ ನಾಯಕರಾದರು. ಮಾಣಿಕ್ಯದಲ್ಲಿ ಸುದೀಪ್ ತಂದೆಯಾಗಿ ನಟಿಸಿದಾಗ ಇದು ಅವರ ಬದುಕಿನ ಸೆಕೆಂಡ್ ಇನ್ನಿಂಗ್ಸ್ ಎಂದುಕೊಂಣಡವರಿದ್ದರು. ಆದರೆ ಮತ್ತೆ ತಾವೇ ಕೇಂದ್ರ ಪಾತ್ರವಾಗಿರುವ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಆದರೆ ಪ್ರೇಕ್ಷಕರಿಗೆ ರವಿಚಂದ್ರನ್ ನಿರ್ದೇಶನದ ಚಿತ್ರ ಎಂದರೇನೇ ಆಸಕ್ತಿ. ಅದು ರವಿಚಂದ್ರನ್ ಅವರಿಗೂ ಗೊತ್ತು. ಹಾಗಾಗಿ ತಾವು ನಿರ್ದೇಶನಕ್ಕೆ ಕೈ ಹಾಕಿದೊಡನೇ ಮೂಲ ಚಿತ್ರದ ಸ್ವರೂಪವನ್ನೇ ಬದಲಾಯಿಸಿ ಹೊಸದಾದ ರವಿಚಂದ್ರನ್ ಟಚ್ ಜತೆಗೆ ನೀಡುತ್ತಾರೆ. ಹಾಗಾಗಿಯೇ ರವಿಚಂದ್ರನ್ ರಿಮೇಕ್ ಚಿತ್ರ ಮಾಡಿದರೂ ಒರಿಜಿನಲ್ ನೋಡಿದ ಜನರೇ ರವಿಚಂದ್ರನ್ ಡಿಫರೆಂಟಾಗಿ ಮಾಡಿರುತ್ತಾರೆ ಎಂದು ನಂಬಿಕೊಂಡು ಥಿಯೇಟರ್ ಗೆ ಮುಗಿ ಬೀಳುತ್ತಾರೆ. ಹಾಗೆ ಪಿ ವಾಸು ಅವರ ನಿರ್ದೇಶನದಲ್ಲಿ ತೆರೆಕಂಡಿದ್ದ ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಅವರ ನಟನೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇದೀಗ ಅಂಥದೇ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ರವಿಚಂದ್ರನ್ ಅವರೇ ನಿರ್ದೇಶನದ ಮೂಲಕ ಕಾಲಿಟ್ಟಿದ್ದಾರೆ. ಅದುವೇ ರವಿ ಬೋಪಣ್ಣ.
ರವಿಚಂದ್ರನ್ ಇಷ್ಟೊಂದು ದಾಡಿ ಬಿಟ್ಟಿರುವುದನ್ನು ಇದುವರೆಗೆ ಯಾರೂ ನೋಡಿರಲಿಲ್ಲ. ಅದೇ ಗೆಟಪ್ ನಲ್ಲಿರುವ ರವಿಚಂದ್ರನ್ ಸ್ವತಃ ರವಿ ಬೋಪಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ರವಿ ಬೋಪಣ್ಣ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ರವಿಚಂದ್ರನ್ ಅದರಲ್ಲಿ ಬೆಂಕಿಯುಗುಳುವ ಕಣ್ಣುಗಳೊಂದಿಗೆ ಮೀಸೆ ಮೇಲೆ ಕೈ ಇಟ್ಟು ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಚಿತ್ರದಲ್ಲಿ ಸುದೀಪ್ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಾರೆ ಎನ್ನುವ ಕಾರಣದಿಂದ ಸುದ್ದಿಯಾಗಿತ್ತು. ಇದೀಗ ಮಡಿಕೇರಿಯಲ್ಲಿ ಚಿತ್ರೀಕರಣ ನಿರತವಾಗಿರುವ ತಂಡ ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿದೆ.
ಚಿತ್ರದಲ್ಲಿ ನಟ, ನಿರ್ದೇಶಕ ಮೋಹನ್ ಅವರ ಸಂಭಾಷಣೆ ಇದೆ. ಕಲಾವಿದರಾದ ರವಿಶಂಕರ್ ಗೌಡ, ಹಿರಿಯ ನಟ ರಾಮಕೃಷ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಹೆಚ್ಚಿನ ವಿವರಗಳನ್ನು ಪಾಸಿಟಿವ್ ಪಿಕ್ಚರ್ ಸದ್ಯದಲ್ಲೇ ತಮ್ಮ ಮುಂದೆ ಇಡಲಿದೆ.