
ಸಂಗೀತದಲ್ಲೇ ದಿಲ್ ಎನ್ನುತ್ತಾರೆ ಶಶಿಕಲಾ ಸುನೀಲ್
ಎಷ್ಟೇ ಪ್ರತಿಭಾವಂತ ಗಾಯಕ- ಗಾಯಕಿಯರಿದ್ದರೂ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ನೀಡಿದರೆ ಮಾತ್ರವೇ ಗುರುತಿಸಿಕೊಳ್ಳುವಂಥ ಸಂದರ್ಭ ಇದು. ಅಂಥವರಲ್ಲಿ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಹಿಟ್ ನೀಡದೆಯೂ ಸಿನಿ ಸಂಗೀತ ಲೋಕದಲ್ಲಿ ಗುರುತಿಸಿಕೊಳ್ಳುತ್ತಿರುವಂಥ ಪ್ರತಿಭೆ ಶಶಿಕಲಾ ಸುನೀಲ್. ರಾಜಧಾನಿಯ ಹುಡುಗಿ, ಶಾಸ್ತ್ರೀಯ ಸಂಗೀತ ಪಾರಂಗತೆ. ಎಸ್ ಪಿ ಬಿ, ವಿಜಯ ಪ್ರಕಾಶ್ ಅವರೊಂದಿಗೆ ವೇದಿಕೆಯಲ್ಲಿ ಗಾಯಕಿಯಾಗಿದ್ದಾರೆ. ವಿವಾಹ ದ ಬಳಿಕ ಪತಿಯಿಂದಲೂ ಪ್ರೋತ್ಸಾಹ ದೊರಕಿದೆ. ಹಾಗಾಗಿಯೇ ಶಶಿಕಲಾ ಸಿಕ್ಕ ಅವಕಾಶದಲ್ಲಿ ಚೊಕ್ಕವಾಗಿಯೇ ಗಮನ ಸೆಳೆಯುತ್ತಾರೆ.
ಶಶಿಕಲಾ ಹುಟ್ಟಿದ್ದು ಬೆಂಗಳೂರಾದರೂ ಬೆಳೆದಿದ್ದು ರಾಮನಗರದ ಚನ್ನಪಟ್ಟಣದಲ್ಲಿ. ಅಪ್ಪ ಜಯದೇವ್. ಜೀವ ವಿಮಾ ಪ್ರತಿನಿಧಿ. ಅಮ್ಮ ಉಮಾ ಜಯದೇವ್ ಗೃಹಿಣಿ. ಮಧ್ಯಮ ವರ್ಗದ ಕುಟುಂಬ. ಓರ್ವ ಪುತ್ರ ಮತ್ತು ಇಬ್ಬರು ಹೆಣ್ಣು ಮಕ್ಕಳು. ಹಿರಿಯವಳೇ ಗಾನ ಪ್ರತಿಭೆ ಶಶಿಕಲಾ ಸುನೀಲ್.
ತಾಯಿಯೇ ಪ್ರೇರಣೆ
ಅಮ್ಮನಿಗೆ ಸಂಗೀತವೆಂದರೆ ಪ್ರಾಣ. ಆದರೆ ಅದು ರೇಡಿಯೋ ಕೇಳುವುದಕ್ಕಷ್ಟೇ ಸೀಮಿತ. ಮಕ್ಕಳನ್ನು ಗಾಯಕಿಯರಾಗಿಸಬೇಕು ಎನ್ನುವುದು ಅವರ ಹಂಬಲ. ' ಸಂಪಿಗೆ ಮರದ ಎಲೆಗಳ ನಡುವೆ ಕೋಗಿಲೆ ಹಾಡಿತ್ತು. ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೇ...ಮುಂತಾದ ಹಾಡುಗಳನ್ನು ಮೂರನೇ ವರ್ಷಕ್ಕೆ ಕಲಿಸಿದಾಕೆ. ಮನೆ ಪಕ್ಕದ ಸಾಯಿ ಮಂದಿರದ ಭಜನೆಗಳಲ್ಲಿ ಸದಾ ಮಕ್ಕಳೊಂದಿಗೆ ಪಾಲ್ಗೊಳ್ಳುತ್ತಿದ್ದರು. ಎರಡನೇ ತರಗತಿಯಿಂದಲೇ ಶಾಲೆಯಲ್ಲಿ ಹಾಡುಗಳ ಮೂಲಕ ಗುರುತಿಸಿಕೊಂಡ ಶಶಿಕಲಾ, ಸ್ಥಳೀಯ ಗಾಯಕಿ ಸುಧಾ ಅವರ ಬಳಿ ಸರಳವರಸೆ ಜಂಟಿ ವರಸೆಗಳ ಕಲಿಕೆ. ಬಳಿಕ ರಾಮನಗರದ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಶಿಷ್ಯೆಯಾಗಿಸಿದ ತಾಯಿ. ಮೂರನೇ ತರಗತಿಯಿಂದ ಎಸ್ ಎಸ್ ಎಲ್ ಸಿಯವರೆಗೆ ಅಂದರೆ ಎಂಟು ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ. ವಾರಕ್ಕೆರಡು ದಿನ ಶಾಲೆ ಮನೆ ಪಾಠ ಮುಗಿಸಿ ಚೆನ್ನಪಟ್ಟಣದಿಂದ ರಾಮನಗರಕ್ಕೆ ಪಯಣ. ಸತತ ಮೂರು ತಾಸುಗಳ ಸ್ವರಾಭ್ಯಾಸ. ಸರಿರಾತ್ರಿಯಲ್ಲಿ ಮನೆಗೆ ವಾಪಾಸ್. ಒಟ್ಟಿನಲ್ಲಿ ಹತ್ತನೆಯ ತರಗತಿಯ ವೇಳೆಗೆ ಶಶಿಕಲಾ ಸಂಗೀತದಲ್ಲಿ ಜೂನಿಯರ್ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದರು. ಇದರ ಜೊತೆಗೆ ಸಹೋದರಿಯರನ್ನು ನೃತ್ಯ ಗುರು ಸುನಂದಾದೇವಿಯವರ ಬಳಿ ತಂಜಾವೂರು ಶೈಲಿಯ ಭರತನಾಟ್ಯದ ತರಬೇತಿಗೆ ಕಳಿಸಿದರು. ಅದರಲ್ಲಿಯೂ ಜೂನಿಯರ್ ಸೀನಿಯರ್ ಮುಗಿಸಿದ ಕೀರ್ತಿ ಲಭಿಸಿತು. ಸಂಗೀತ ನೃತ್ಯದ ಜೊತೆ ಜೊತೆಯಲ್ಲಿ ಅಮ್ಮನಿಂದ ವಚನ, ದೇವರನಾಮ, ಭಾವಗೀತೆಗಳನ್ನು ಹಾಡಿಸುವ ಕೆಲಸ ನಡೆದೇ ಇತ್ತು. ಚೆನ್ನಪಟ್ಟಣ ತಾಲೂಕಿನಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಸಂಗೀತ ನೃತ್ಯ ಪ್ರದರ್ಶನ. ಸಹೋದರಿಯ ಜೊತೆಗೆ ಜಿಲ್ಲೆಯಾದ್ಯಂತ ಕಾರ್ಯಕ್ರಮ ನೀಡಿ 'ಚೆನ್ನಪಟ್ಟಣದ ಸಿಸ್ಟರ್ಸ್' ಎಂದು ಜನಪ್ರಿಯತೆ ಪಡೆದರು. ಬೆಂಗಳೂರು ಸೇರಿದಂತೆ ಎಲ್ಲೆಡೆ ಗಾನ ಸ್ಪರ್ಧೆ ಇದ್ದರೂ ಬಹುಮಾನ ಇವರದೇ !
ಬಹುಮುಖ ಪ್ರತಿಭೆ
ಸೈಂಟ್ಸ್ ಆನ್ಸ್ ಪ್ರೌಢಶಾಲೆಯಲ್ಲಿ ಆಂಗ್ಲದಲ್ಲೇ ಎಸ್ ಎಸ್ ಎಲ್ ಸಿ ಮಾಡಿದರೂ, ಶಶಿಕಲಾ ಮನದ ಗೀತೆಗಳೆಲ್ಲ ಕನ್ನಡವೇ. ಶಶಿಕಲಾ ಮನದ ಗೀತೆಗಳೆಲ್ಲ ಕನ್ನಡವೇ. ಹಿಂದಿ ಬಗ್ಗೆ ವಿಶೇಷ ಒಲವು. ಚೆನ್ನಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ ಯು ಶಿಕ್ಷಣ. ಸರ್ಕಾರಿ ಪದವಿ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ. ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟದಲ್ಲಿ ಆಡಿದ ಕ್ರೀಡಾಪಟು. ಗಣಿತ ಮತ್ತು ಆಂಗ್ಲ ಭಾಷೆಯ ಶಿಕ್ಷಕರಾದ ಸದಾಶಿವ ಮತ್ತು ವಿಜಯನರಸಿಂಹ ಅವರು ತೋರಿದ ಅಕ್ಕರೆ ಪ್ರೋತ್ಸಾಹವನ್ನು ಶಶಿಕಲಾ ಇಂದಿಗೂ ಸ್ಮರಿಸುತ್ತಾರೆ. ಆದರೆ ಎಲ್ಲ ಪ್ರೋತ್ಸಾಹಗಳ ಹಿಂದೆ ಈಕೆಯ ಬಹುಮುಖ ಪ್ರತಿಭೆಯೂ ಅಡಗಿತ್ತು ಎನ್ನುವುದನ್ನು ಹೇಳಲು ಮರೆಯುತ್ತಾರೆ. ಪದವಿಯ ದ್ವಿತೀಯ ವರ್ಷದಲ್ಲಿದ್ದಾಗಲೇ ವಿವಾಹ ಆಮೇಲೆ ಪದವಿ ಸಂಪೂರ್ಣ. ಗಂಡ ಸುನೀಲ್ ಟೊಯೋಟಾ ಸಂಸ್ಥೆಯಲ್ಲಿ ಮ್ಯಾನೇಜರ್. ಈಗ ಈ ದಂಪತಿಗೆ ದರ್ಶೀಲ್ ಎಂಬ ಐದನೇ ತರಗತಿ ದಾಟಿರುವ ಪುತ್ರನಿದ್ದಾನೆ.
ರಿಯಾಲಿಟಿ ಶೋನಿಂದ ಗುರುತು
ಇಂದಿನ ಬಹುತೇಕ ಯುವ ಗಾನ ಪ್ರತಿಭೆಗಳಂತೇ ಶಶಿಕಲಾ ಕೂಡ ಕಿರುತೆರೆ ರಿಯಾಲಿಟಿ ಕಿರುತೆರೆ ಶೋ ಒಂದರ ಕೊಡುಗೆ. ಅದನ್ನು ಕನ್ನಡದ ಪ್ರಥಮ ಮ್ಯೂಸಿಕಲ್ ಶೋ ಎನ್ನಬಹುದು. ಅದಕ್ಕೂ ಮೊದಲು ಪಿಯುಸಿಯಲ್ಲಿದ್ದಾಗ ದೂರದರ್ಶನದ 'ನಾದ ಸುರಭಿ' ಮೂಲಕ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದರು. ಬಳಿಕ ಎಂಎಸ್ಐಎಲ್ ನಡೆಸಿ ಸಂಗೀತ ರಿಯಾಲಿಟಿ ಶೋ ನಲ್ಲಿ ಪಡೆದಿದ್ದು ಮೂರನೇ ಸ್ಥಾನ. ಈ ಟಿವಿ ವಾಹಿನಿಯ 'ಎದೆತುಂಬಿ ಹಾಡಿದೆನು' 'ಅನ್ವೇಷನೆ ಗಾಯಕಿಯರು' ಮಾಲಿಕೆಯಲ್ಲಿ ಆಯ್ಕೆಯಾಗಿ ಜನಪ್ರಿಯ ಗಾಯಕ ಡಾ.ಎಸ್. ಪಿ. ಬಿ ಜೊತೆ ಹಾಡಿದ ಸಂತಸ. ಅವರ ಪ್ರಶಂಸೆಯೊಂದಿಗೆ ಈ ಟಿವಿ ಬಳಗದ ಗಾಯಕಿಯಾಗಿ ಗುರುತು. ವಾಟಿಕ ವರುಷದ ಪರಿಪೂರ್ಣ ಮಹಿಳೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗಾಯನ. ಸಿ.ಅಶ್ವತ್ಥ್ ಸಂಯೋಜನೆಯ ೫೮ ವಚನಗಳ ಗಾನ ತಂಡದ ಸದಸ್ಯೆಯಾಗಿ ಅನುಭವ. ಮನುಜಮತ ವಿಶ್ವಪಥದಲ್ಲಿ ಹಾಡುಗಾರಿಕೆ. ವಿದುಷಿ ಶ್ಯಾಮಲಾ ಜಿ ಭಾವೆ ಅವರ ಸಲಹೆಯ ಮೇರೆಗೆ ಪಂಡಿತ್ ಎಂ ವಿ ನಾಗರಾಜ್ ಬಳಿ ಹಿಂದುಸ್ಥಾನಿ, ಬಿ.ಕೆ.ಸುಮಿತ್ರಾರವರ ಮಾರ್ಗದರ್ಶನದಲ್ಲಿ ಲಘು ಸಂಗೀತದ ಕಲಿಕೆ. ಸಂಗೀತಗಾರ ರವಿ ಮೂರುರರಿಂದ ಭಾವಗೀತೆಗಳ ಗಾಯನ ಕರಗತ. ಗಾಯಕಿ ಶಮಿತಾ ಮಲ್ನಾಡದ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥನ್ ರ ತಂಡದಲ್ಲಿ ಸತತ ಸಂಗೀತ ಕಾರ್ಯಕ್ರಮಗಳು ದೊರಕಿದವು. ಖ್ಯಾತ ಕೊಳಲು ವಾದಕ ಪ್ರವೀಣ್ ಡಿ ನಾಯಕ್ ರ ನಾಯಕತ್ವದಲ್ಲಿ 'ಅಂತರ್ಧ್ವನಿ' ತಂಡದ ಸದಸ್ಯೆಯಾಗಿಯೂ ಗುರುತಿಸಿಕೊಂಡರು.
ಸಿನಿಮಾ ಹಿನ್ನೆಲೆ ಗಾಯನ ಗಾನಪ್ರತಿಭೆ ಹರಡತೊಡಗಿದಂತೆ ಸ್ವರಸಂಯೋಜಕ ಮಾರುತಿ ಮೀರಜ್ ಕರ್ ರಿಂದ ಧ್ವನಿಸುರುಳಿಗಳಿಗೆ ಟ್ರ್ಯಾಕ್ ಹಾಡುವ ಅವಕಾಶ. 'ಸಿದ್ಧಪ್ಪಾಜಿ ಮಹದೇವೇಶ್ವರ' ಭಕ್ತಿಗೀತೆ ಸಿಡಿಗಳಲ್ಲಿ ಗಾಯನ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ರಿಂದ 'ಪರೋಡಿ' ಚಿತ್ರದಲ್ಲಿ ಅವಕಾಶ. ' ಬಾರೇ ಬಾರೇ ಬಾರೇ ನೀ ಯಾರೇ ಆಗಿರೇ' ಎನ್ನುವ ಹಾಡಿನ ಮೂಲಕ ಚಲನಚಿತ್ರ ಹಿನ್ನೆಲೆಗಾಯನ ಕ್ಷೇತ್ರಕ್ಕೆ ಪ್ರವೇಶ. ಆದರೆ ಇವರನ್ನು ಟ್ರ್ಯಾಕ್ ಸಿಂಗಿಂಗ್ ಗೆ ಮಾತ್ರ ಬಳಸಿಕೊಂಡಿದ್ದು ವಿಪರ್ಯಾಸ. ಪರೂಪದಲ್ಲೊ 'ಹುಂಜ', 'ಸೀಯೂ', 'ಪಾರಿಜಾತ' ಮುಂತಾದ ಚಿತ್ರಗಳಿಗೆ ಹಾಡುವ ಅವಕಾಶ ಪಡೆದುಕೊಂಡರು. 'ಸೂರು' ಧಾರಾವಾಹಿ, 'ಚಿಂಟೂ' ಕಾರ್ಟೂನ್ ಸರಣಿಗಳಿಗೆ ಧ್ವನಿ ನೀಡಿದ ಅನುಭವವೂ ಇವರದಾಗಿದೆ.
ಗಾಯಕಿಯಾಗಿ ಹದಿನೈದು ವರ್ಷಗಳಿಂದ ಸಕ್ರಿಯರಾಗಿರುವ ಶಶಿಕಲಾ ದೇಸೀ ಸೊಗಡಿನ ಪ್ರತಿಭೆ. ಇದುವರೆಗೆ ಸುಮಾರು ೫೦ ಚಲನಚಿತ್ರಗಳು, ೫೦೦ ಕ್ಕೂ ಹೆಚ್ಚು ಭಕ್ತಿಗೀತೆಗಳು ರಾಜ್ಯ ಹೊರದೇಶದಲ್ಲಿ ನಡೆದ ನೂರಾರು ಸಂಗೀತ ಕಾರ್ಯಕ್ರಮಗಳಲ್ಲಿ ಶಶಿಯ ಕಂಠ ಸಿರಿ ಮೊಳಗಿದೆ. ಗಾನ ಮಾಧುರ್ಯ ಸಮ್ಮೋಹಗೊಳಿಸಿದೆ. ವಿಶೇಷ ಪ್ರಯೋಗವಾದ 'ಮಹಾಬೆಳಗು; ಗಾನ ಸಾಂದ್ರಿಕೆ ಶ್ರೋತೃಗಳಿಗೆ ಮೋಡಿ ಮಾಡಿದ್ದರೂ, ಬೆಳ್ಳಿತೆರೆಯಲ್ಲಿ ಭರ್ಜರಿ ಯಶಸ್ಸು ಕಾಣಬೇಕೆಂಬ ಹಂಬಲ ಮಾತ್ರ ಈಡೇರಲಿಲ್ಲ. ಒಂದಿಷ್ಟು ಚಿತ್ರಗಳಿಗೆ ಹಾಡಿರುವುದೇ ಹಾಡು ತೃಪ್ತಿ. ಮನೋಮೂರ್ತಿಯವರ ಸಂಗೀತದಲ್ಲಿ ಹಾಡಿದಂಥ 'ಸವರ್ಣದೀರ್ಘಸಂಧಿ' ಮತ್ತು 'ಜಸ್ಸಿ ಗಿಫ್ಟ್' ಅವರ ಸಂಗೀತದಲ್ಲಿ ಹಾಡಿರುವ ಚಿತ್ರಗಳು ತೆರೆಕಂಡರೆ ಇನ್ನಷ್ಟು ಅವಕಾಶಗಳು ಸಿಗಬಹುದೆಂಬ ನಿರೀಕ್ಷೆ ಶಶಿಕಲಾರಿಗಿದೆ.
ಆದರೆ ವೇದಿಕೆ ಕಾರ್ಯಕ್ರಮಗಳಿಗೆ ಕೊರತೆಯಿಲ್ಲ. ಮೈಸೂರು ದಸರಾಗೆ ಹಾಡುವುದರಿಂದ ಹಿಡಿದು, ಹಂಪಿ ಉತ್ಸವ, ಬ್ಯಾಂಕಾಕ್, ನೈರೋಬಿ ಸೇರಿದಂತೆ ಅಮೆರಿಕಾದ 'ಅಕ್ಕ' ಸಮ್ಮೇಳನದಲ್ಲಿ ವಿಜಯಪ್ರಕಾಶ್ ಅವರೊಂದಿಗೆ ಹಾಡುವ ತನಕ. ಇದುವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ವೇದಿಕೆಗಳನ್ನು ಹಂಚಿಕೊಂಡಿದ್ದಾರೆ.



