top of page

ಟೈಗರ್ ಟೈಮ್ - 1

Ramesh-Aravind-Images-1_edited.jpg

ನಮ್ಮದು ಮನೆ ಮತ್ತು ಮನಗಳ ಸಂಬಂಧ ! - ರಮೇಶ್ ಅರವಿಂದ್​

ಪ್ರಭಾಕರ್ ಅವರು ನನಗೆ ಎರಡು ರೀತಿಯಿಂದ ಆತ್ಮೀಯರಾಗಿದ್ರು. ಒಂದು ಒಬ್ಬ ಹಿರಿಯ ಕಲಾವಿದರಾಗಿ. ಇನ್ನೊಂದು ಸಂಬಂಧ ವೈಯಕ್ತಿಕವಾದಂಥದ್ದು. ಅದು ನಮ್ಮ ಮನೆಗಳಿಗೆ ಸಂಬಂಧಿಸಿದ್ದು. ಹಾಗಂತ ನಮ್ಮದು ಅಕ್ಕಪಕ್ಕದ ಮನೆಗಳೇನಲ್ಲ. ಆದರೆ ನಮ್ಮ ಮನೆಯೇ ಅವರದಾಗುವ ಘಟನೆ ನಡೆಯಿತು!' ಹೀಗೆ ಆಕರ್ಷಕವಾಗಿ ಮಾತು ಆರಂಭಿಸಿದ್ದು ಕನ್ನಡದ ಎವರ್​ಗ್ರೀನ್ ಲವಲವಿಕೆಯ ಸ್ಟಾರ್​ ರಮೇಶ್ ಅರವಿಂದ್. ಈ ಬಾರಿಯ ಟೈಗರ್ ಟೈಮ್ ಅಂಕಣದಲ್ಲಿ ಅವರೇನು ಹೇಳಿದ್ದಾರೆ ಅಂತ ಪೂರ್ತಿಯಾಗಿ ಓದಿ.

ಹೌದು; ಆ ದಿನಗಳಲ್ಲಿ ನಾನು ಇನ್ನೂ ಚಿಕ್ಕ ಹುಡುಗ. ಆದರೆ ಅವರಾಗಲೇ ಸ್ಟಾರ್ ಆಗಿದ್ದರು. ಜಯಮಾಲಾ ಅವರೊಂದಿಗಿನ ವಿವಾಹವೂ ಆಗಿತ್ತು. ನನಗೆ ಎಲ್ಲ ಸಾಮಾನ್ಯರಂತೆ ಅವರಿಬ್ಬರನ್ನು ಪರದೆಯ ಮೇಲೆ ಮಾತ್ರ ನೋಡಿ ಗೊತ್ತಿತ್ತು. ಆದರೆ ಒಂದು ಸುಮುಹೂರ್ತದಲ್ಲಿ ಅವರಿಬ್ಬರೂ ನನ್ನ ಮನೆ ಮುಂದೆಯೇ ಬಂದು ನಿಂತಿದ್ದರು! ಅದು ನಮ್ಮಪ್ಪನಿಗೆ ಬಿಸ್ನೆಸ್ ನಲ್ಲಿ ಲಾಸ್ ಆಗಿದ್ದಂಥ ದಿನಗಳು. ಹಾಗಾಗಿ ನಾವಿದ್ದಂಥ ಮನೆ ಮಾರಬೇಕಾದ ಪರಿಸ್ಥಿತಿ  ಬಂದಿತ್ತು. ಹಾಗೆ ಆ ಮನೆಯನ್ನು ಕೊಳ್ಳಲೆಂದು ಬಂದಿದ್ದವರೇ ಟೈಗರ್ ಪ್ರಭಾಕರ್! ನಾನಂತೂ ಮನೆ ಮುಂದೆ ಪ್ರಭಾಕರ್ ಜಯಮಾಲರನ್ನು ನೋಡಿ ಶಾಕ್ ಹೊಡೆದಂತಾಗಿ ಹೋಗಿದ್ದೆ. ಕೊನೆಗೂ ಅವರಿಗೆ ನಮ್ಮ ಮನೆ ಇಷ್ಟವಾಗಿ ಅದನ್ನು ಕೊಂಡುಕೊಂಡರು ಕೂಡ. ಆಮೇಲೆ ಅದು ಪ್ರಭಾಕರ್ ಮನೆಯಾಗಿಯೇ ಹೆಸರು ಪಡೆಯಿತು. ಆ ಸಂದರ್ಭದಲ್ಲಿ ನನ್ನನ್ನು ಜಯಮಾಲ ಕೂಡ ಮಾತನಾಡಿಸಿದ್ದರು. ಅವರು ನನ್ನಲ್ಲಿ ಹೇಳಿದಂಥ ಮಾತೊಂದನ್ನು ನಾನು ಈಗಲೂ ನೆನಪಿಸುತ್ತಾ ಇರುತ್ತೇನೆ. ಬೇರೇನಲ್ಲ, ಅವರು ಹೇಳಿದ್ದಿಷ್ಟೇ , 'ನೋಡೋಕೆ ತುಂಬ ಚೆನ್ನಾಗಿದ್ದೀಯ ಕಣೋ, ದೊಡ್ಡೋನಾದ ಮೇಲೆ ನೀನು ಹೀರೋ ಆಗ್ತೀಯ ಬಿಡು!' ಅಂತ. 

ಎರಡನೆಯ ಭೇಟಿಯಲ್ಲೊಂದು ಸ್ಫೂರ್ತಿ

 

ಇನ್ನೊಂದು ಘಟನೆ ನಾನು ಒಂದು ಸ್ಪೋರ್ಟ್ಸ್ ಅಂಗಡಿಗೆ ಹೋಗಿದ್ದಾಗ ನಡೆದಂಥದ್ದು. ಇದು ಕೂಡ ನಾನು ಸ್ಕೂಲ್ ಹುಡುಗನಾಗಿದ್ದಾಗಲೇ ನಡೆದಂಥ ವಿಚಾರ. ನಾನು ಹೋಗಿದ್ದ ವೇಳೆ ಅಲ್ಲಿಗೆ  ಪ್ರಭಾಕರ್ ಅವರೂ ಬಂದಿದ್ದರು. ಬಹುಶಃ ಅವರು ಡಂಬಲ್ಸ್ ಕೊಳ್ಳೋಕೆ ಅಂತ ಬಂದಿರಬೇಕು. ಸಾರ್ವಜಕನಿಕವಾಗಿ ಒಬ್ಬ ಸ್ಟಾರ್ ವರ್ಚಸ್ಸು ಹೇಗಿರುತ್ತದೆ ಅನ್ನೋದನ್ನು ನಾನು ಮೊದಮೊದಲು ನೇರವಾಗಿ ಕಂಡಂಥ ಸಂದರ್ಭ ಅದು. ಜನ ಅವರಿಗೆ ಕೈ ನೀಡಲು, ಆಟೋಗ್ರಾಫ್ ಪಡೆಯಲು ಮುಗಿದ ಬೀಳುತ್ತಿರುವುದನ್ನು ಕಣ್ಣಾರೆ ಕಂಡೆ. ಇಂದು ನಾನು ಕೂಡ ಒಬ್ಬ ನಟನಾಗಿ ಬೆಳೆಯಲು ಅಂದು ಕಂಡ ಆ ದೃಶ್ಯ ಕೂಡ ನನಗೆ ಸುಪ್ತವಾಗಿ ಸ್ಫೂರ್ತಿಯಾಗಿದ್ದಲ್ಲಿ ಅಚ್ಚರಿಯಿಲ್ಲ.

 

ಪ್ರಭಾಕರ್ ಮೈಕ್ !

ನಾನು ನಟಿಸಿದ ಪ್ರಥಮ ಚಿತ್ರ 'ಸುಂದರ ಸ್ವಪ್ನಗಳು'. ಅದರ ಡಬ್ಬಿಂಗ್ ಕೆಲಸಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿತ್ತು. ಆಗ ನಮಗೆಲ್ಲ ನಾರ್ಮಲ್ ಮೈಕ್ ಗಳನ್ನು ನೀಡಿದ್ದರು. ಆದರೆ ಅಲ್ಲೊಂದು ಬೃಹತ್ ಮೈಕನ್ನು ಸಪರೇಟಾಗಿ ನೋಡಿದೆ. ಅದು ವಿಪರೀತ ದಪ್ಪ ಇತ್ತು. ಅದನ್ನು ಯಾರು ಕೂಡ ಬಳಸೋದನ್ನು ನಾನು ನೋಡಿರಲಿಲ್ಲ. ಹಾಗಾಗಿ ಸಹಜವಾಗಿ ಅದರ ಬಗ್ಗೆ ಸೌಂಡ್ ಇಂಜಿನಿಯರ್ ಅವರಲ್ಲಿ ವಿಚಾರಿಸಿದ್ದೆ. ಆಗ ಅವರು ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿತು. ಅದು ಪ್ರಭಾಕರ್ ಬಳಸುತ್ತಿದ್ದಂಥ ಮೈಕ್ ಅಂತೆ! ಅದನ್ನು ಬೇರೆ ಯಾರೂ ಬಳಸದ ಕಾರಣ ಅದಕ್ಕೆ 'ಪ್ರಭಾಕರ್ ಮೈಕ್' ಎಂದೇ ಹೆಸರು ಇಡಲಾಗಿತ್ತು! ಅದು ಅವರ ದೊಡ್ಡ ದನಿಗೆ ಸಿಕ್ಕಂಥ ಕೊಡುಗೆ ಎಂದೇ ಹೇಳಬಹುದು. ಬಹುಶಃ ಆ ಮೈಕ್ ಇಂದಿಗೂ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿದೆ ಎಂದುಕೊಂಡಿದ್ದೇನೆ.

ಮೈಕಟ್ಟಿನ ಗುಟ್ಟು

ನಾವು ಒಂದೇ ಚಿತ್ರದಲ್ಲಿ ನಟಿಸುವಂಥ ಸಂದರ್ಭ ಬಂದಾಗ ಈ ಎಲ್ಲ ವಿಚಾರಗಳನ್ನು ನಾನೇ ಅವರಲ್ಲಿ ಹೇಳಿಕೊಂಡಿದ್ದೆ. ಮಾತ್ರವಲ್ಲ ನಾನು ಬಹಳ ಸಮಯದಿಂದ ಕೇಳಬೇಕು ಎಂದುಕೊಂಡಿದ್ದ ಪ್ರಶ್ನೆಯೊಂದನ್ನು ಕೂಡ ಅವರ ಮುಂದೆ ಇಟ್ಟಿದ್ದೆ. ಅದೇ 'ಹೆಂಗ್ಸಾರ್ ಈ ಥರ ಬಾಡಿ ಮೆಯ್ನ್ಟೇನ್ ಮಾಡ್ತೀರಿ? ಅಂತ. ಅದಕ್ಕೆ  ಅವರು ನೀಡಿದ ಉತ್ತರ ಅಷ್ಟೇ  ಸೊಗಸಾಗಿತ್ತು. 'ವ್ಯಾಯಾಮ.. ಗೊತ್ತಲ್ಲ? ಇನ್ನು ಫುಡ್ ವಿಚಾರಕ್ಕೆ ಬಂದ್ರೆ, ನಾನು ಬೆಳಿಗ್ಗೇನೆ ಒಂದು ಬೌಲಲ್ಲಿ ಡ್ರೈ ಫ್ರುಟ್ಸ್ ಹಾಕ್ಕೊಂಡು ತಿನ್ತಾ ಇರ್ತೀನಿ. ಅದೇ ರಹಸ್ಯ..' ಅಂತ ಹೇಳಿ ನಕ್ಕಿದ್ರು.

ಬಹುಮುಖ ಪ್ರತಿಭೆ

ಅವರ ಕೊನೆಯ ದಿನಗಳಲ್ಲಿ  ನಾನು ಅವರೊಂದಿಗೆ  ನಟಿಸಿದ್ದೆ. ಆಗ ಅವರ ಕಾಲಿಗೊಂದು ಪ್ಲಾಸ್ಟರ್  ಇರುತ್ತಿತ್ತು. ಗ್ಯಾಂಗ್ರಿನ್ ಗೆ ತುತ್ತಾದ ಕಾಲಲ್ಲಿ ನಡೆಯೋದೇ ಕಷ್ಟ ಎಂಬ ಹಾಗಿತ್ತು. ಆದರೂ ಅವರು ಏನೂ ಆಗಿಲ್ಲ ಎಂಬಂತೆ ಬಂದು ನಟಿಸಿ, ಫೈಟ್ ಸೀನಲ್ಲೂ ಪಾಲ್ಗೊಳ್ಳುತ್ತಿದ್ದ ಅವರ ವೃತ್ತಿ ಮೇಲಿನ ಡೆಡಿಕೇಶನ್ ಮರೆಯೋಕೇ ಸಾಧ್ಯವಿಲ್ಲ. ಇನ್ನು ಶೂಟಿಂಗ್ ಸ್ಪಾಟ್ ನಲ್ಲಿ ಕೆಲವೇ ಮಂದಿ ಆರ್ಟಿಸ್ಟ್ ಗಳಿಗೆ ಮಾತ್ರ ಇರುವಂಥ ಅದ್ಭುತವಾದ ಕ್ಯಾಮೆರಾ ಸೆನ್ಸ್ ಅವರಿಗಿತ್ತು. ಟೈಮಿಂಗ್​ನಲ್ಲಿ ಹೊಡೆದಾಡೋದು, ಫೈಟ್ ಮುಗಿಸಿ ಕೊಡುವ ಭಾವ ಭಂಗಿಗಳು ಆಕರ್ಷಕವಾಗಿರುತ್ತಿದ್ದವು. ಎದುರಾಳಿಗೆ ಏಟಾಗದಂತೆ ಎಚ್ಚರಿಕೆ ವಹಿಸುವ ಮನಸ್ಸು ಅವರದಾಗಿತ್ತು. ಕ್ಯಾಮೆರಾ ಲೆನ್ಸ್ ಗಳ ಬಗ್ಗೆಯೂ ಅರಿವಿತ್ತು. ಬಹುಶಃ ನಿರ್ದೇಶಕನಾಗುವ ಕನಸು ಅವರಿಗೆ ಆರಂಭದಿಂದಲೂ  ಇತ್ತು ಅನಿಸುತ್ತದೆ. ಆದರೆ ಅವರು ಬರೀ ಕತೆ ಹೇಳುವ ನಿರ್ದೇಶಕನಾಗಿರಲಿಲ್ಲ. ಪ್ರತಿ ಫ್ರೇಮು,  ಪ್ರತಿ ಆ್ಯಂಗಲು ಹೇಗಿದ್ದರೆ ಚೆನ್ನಾಗಿರುತ್ತದೆ ಎಂಬ ಕಲ್ಪನೆ ಅವರಿಗೆ ನಟನಾಗಿದ್ದಾಗಲೇ ಇತ್ತು. 50ಎಂ.ಎಂ ಲೆನ್ಸ್,  75 ಎಂ.ಎಂ ಲೆನ್ಸ್, 35 ಎಂ.ಎಂ ಲೆನ್ಸ್ ಎಂದು ಕ್ಯಾಮೆರಾ ಲೆನ್ಸ್ ಬಗ್ಗೆ ಕೂಡ ಹೇಳಿ ಅಚ್ಚರಿ ಮೂಡಿಸ್ತಿದ್ರು. ಅವರು ಆ್ಯಕ್ಟ್ ಮಾಡುವ ಚಿತ್ರಗಳಲ್ಲಿ ಸ್ವತಃ ಫೈಟ್ ಕಂಪೋಸಿಂಗ್ ಮಾಡುತ್ತಿದ್ದರು.

ಗಂಧದ ಗುಡಿಯಂಥ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅವರು ಬೆಳೆದು ನಿಂತ ರೀತಿಯೇ ಅದ್ಭುತ. ಆ ದಿನಗಳಲ್ಲಿ ಶಿವಾಜಿ ಗಣೇಶನ್ ನಟನೆ ಎಂದರೆ ಎಲ್ಲರಿಗೂ ಅಭಿಮಾನ, ಗೌರವ. ಅವರಂಥ ಕಲಾವಿದರು ಬೇರೊಬ್ಬರಿಲ್ಲ ಎಂಬ ನಂಬಿಕೆ ಇತ್ತು. ಆದರೆ ಅಂಥವರ ಚಿತ್ರಗಳನ್ನು ಕನ್ನಡದಲ್ಲಿ ರಿಮೇಕ್ ಮಾಡುವ ವಿಚಾರ ಬಂದಾಗ ಎಲ್ಲ ನಿರ್ದೇಶಕರ ಮೊದಲ ಆಯ್ಕೆ ಟೈಗರ್ ಪ್ರಭಾಕರ್ ಆಗಿರುತ್ತಿದ್ದರು.! ಜ್ಯೂನಿಯರ್ ಆರ್ಟಿಸ್ಟ್ ಆಗಿ ರಂಗಪ್ರವೇಶಿಸಿದ ಅವರು ತ್ರಿಪಾತ್ರಗಳನ್ನು ಮಾಡುವ ಮಟ್ಟಕ್ಕೆ ಬೆಳೆದಿದ್ದರು. ಅದು ಅವರು ಸ್ವತಃ ಅವರು ಶ್ರಮಪಟ್ಟು ಛಲದಿಂದ ಸಾಧಿಸಿದಂಥ ಯಶಸ್ಸು ಎಂದು ಹೇಳಲೇಬೇಕು.

(ಟೈಗರ್ ಪ್ರಭಾಕರ್ ಕುರಿತಾದ ಇನ್ನಷ್ಟು ನೆನಪುಗಳನ್ನು ಮುಂದಿನ ಬಾರಿ ಬೇರೊಬ್ಬ ಕಲಾವಿದರು ಹಂಚಿಕೊಳ್ಳಲಿದ್ದಾರೆ. ತಪ್ಪದೇ ಓದಿ)

Rate UsDon’t love itNot greatGoodGreatLove itRate Us
bottom of page