ಮುಂದಿನ ವಾರದಿಂದ `ಉದಯ’ದಲ್ಲಿ ‘ಅಮ್ನೋರು’
ಕಿರುತೆರೆಯ ಜನಪ್ರಿಯವಾಹಿನಿಯಾದ `ಉದಯ’ದಲ್ಲಿ ಖ್ಯಾತ ನಿರ್ದೇಶಕ ರಮೇಶ್ ಇಂದ್ರ ಅವರ ಧಾರಾವಾಹಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ.
ಕಿರುತೆರೆಯ ಜನಪ್ರಿಯವಾಹಿನಿಯಾದ `ಉದಯ’ದಲ್ಲಿ ಖ್ಯಾತ ನಿರ್ದೇಶಕ ರಮೇಶ್ ಇಂದ್ರ ಅವರ ಧಾರಾವಾಹಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಧಾರಾವಾಹಿಯ ಕಥೆಯಲ್ಲಿ ಅಮ್ನೋರ ಪರಮಭಕ್ತರಾದ ಶಂಕರ ಹಾಗೂ ದಾಕ್ಷಾಯಣಿ ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹ ಮತ್ತು ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ, ಮಾಟಗಾತಿ ಧನಶೇಖರಿ ಮತ್ತು ಶಂಕರನ ಸಹೋದರ ವರದಪ್ಪನಿಂದಲೇ ಪ್ರಾಣವನ್ನು ಕಳೆದುಕೊಂಡಿರುವ ದಂಪತಿಗಳು. ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡುತ್ತಾ, ಮತ್ತೆ ಪುನರ್ಜನ್ಮ ಪಡೆದುಕೊಂಡು ಬರುವ ಜೋಡಿಗಾಗಿ ಕಾಯುತ್ತಿರುತ್ತದೆ. ಘೋರ ಮಾಟಗಾತಿ ಧನಶೇಖರಿ ವರದಪ್ಪನ ಜೊತೆ ಸೇರಿ ರುದ್ರಾಕ್ಷಿ ಮಾಲೆ ಹಾಗೂ ಅಮ್ನೋರ ವಿಗ್ರಹವನ್ನು ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿಕೊಳ್ಳುತ್ತಿರುವರು. ಶಂಕರ ಹಾಗೂ ದಾಕ್ಷಾಯಣಿ ಅಮ್ನೋರ ವಿಗ್ರಹವನ್ನು ಪ್ರತಿಷ್ಠಾಪಿಸಲು ಪುನಃ ಹುಟ್ಟಿ ಬರುತ್ತಾರಾ? 27 ವರ್ಷ–ಕಾಯುತ್ತಿರುವ ರುದ್ರಾಳ ಆಸೆಯು ನೆರವೇರುತ್ತಾ? ತದ್ವಿರುದ್ಧ ಆಲೋಚನೆಗಳನ್ನು ಹೊಂದಿರುವ ನಾಯಕ ಮತ್ತು ನಾಯಕಿ ಜೊತೆಯಾಗಿ ದೇವಸ್ಥಾನ ಪುನಃಶ್ಚೇತನಗೊಳಿಸುತ್ತಾರ? ಎನ್ನುವುದನ್ನು ಹೇಳಲಾಗುತ್ತದೆ. ಆದರೆ ನಂಬಿಕೆಯ ವಿಚಾರದಲ್ಲಿ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಮೂಢ ನಂಬಿಕೆಯ ಪ್ರೋತ್ಸಾಹ ಇರುವುದಿಲ್ಲ. ಇಷ್ಟಕ್ಕೂ ನಂಬಿಕೆ ಮತ್ತು ಮೂಢ ನಂಬಿಕೆಗಳು ವೈಯಕ್ತಿಕವಾದವು ಎನ್ನುವುದು ನಿರ್ದೇಶಕರ ಅಭಿಪ್ರಾಯ.
ಈ ಧಾರಾವಾಹಿಯು ಮೇಲುಕೋಟೆ ಹಾಗೂ ಇನ್ನಿತರ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಲವಾರು ಖ್ಯಾತ ದೇವಿ ಮಹಾತ್ಮೆ ಸಾರುವ ಧಾರಾವಾಹಿಗಳನ್ನು ನೀಡಿರುವ ರಮೇಶ್ ಇಂದ್ರ ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿ ವಹಿಸಿರುವ ಪ್ರಾಜೆಕ್ಟ್ ಇದು. ಅನೂಪ್ ಸೀಳಿನ್ ಕಥೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಯಾಕರ್ ಛಾಯಾಗ್ರಹಣವಿದೆ.
_edited.jpg)
ನಾಯಕಿಯಾಗಿ ಹೊಸ ಪ್ರತಿಭೆ ಅಕ್ಷರ ನಟಿಸುತ್ತಿದ್ದು, ನಾಯಕನಾಗಿ ಶಶಿ ನಟಿಸುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕರಾದ ಕೀರ್ತಿರಾಜ್ ಸೇರಿದಂತೆ ರೇಖಾ ರಾವ್, ಹರ್ಷಿತಾ, ಸಂಗೀತ ಭಟ್, ಅನಂತ್ ವೇಲು, ಶರ್ಮಿಳಾ, ಮಧು ಹೆಗಡೆ, ರೋಹಿಣಿ, ವಿಜಯಲಕ್ಷ್ಮಿ, ವಿಕ್ರಮ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡ ಧಾರಾವಾಹಿ ಅಮ್ನೋರು. ಇದೇ ಜನವರಿ 20 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
