`ಅನ್ ಲಾಕ್’ ಮೂಲಕ ಚಿತ್ರರಂಗದ ಲಾಕ್ ತೆ ರೆದು ಬಲಗಾಲಿಟ್ಟ ಶ್ರೀಧರ ಶಾಸ್ತ್ರಿ

ಕಿರುಚಿತ್ರಗಳ ಮೂಲಕ ಕನ್ನಡ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸುವ ಸಾಕಷ್ಟು ನಿರ್ದೇಶಕರನ್ನು ನೋಡಿದ್ದೇವೆ. ಆ ಸಂಪ್ರದಾಯದಲ್ಲಿ ಚಂದನವನದೊಳಗೆ ಕಾಲಿಡುತ್ತಿರುವ ನವ ಪ್ರತಿಭೆಯೇ ನಿರ್ದೇಶಕ ಶ್ರೀಧರ ಶಾಸ್ತ್ರಿ. ಈ ಹಿಂದೆ ಮಕ್ಕಳನ್ನು ಪಾತ್ರವಾಗಿಸಿ ಮೂರು ನಿಮಿಷದ ಚಿತ್ರ ಮಾಡಿದ್ದ ಶ್ರೀಧರ ಶಾಸ್ತ್ರಿಯವರ ಈ ಬಾರಿಯ ಚಿತ್ರದ ಹಸರು ಅನ್ ಲಾಕ್ ಎಂದು. ಮೊಬೈಲ್ ಫೋನ್ ಬಳಕೆಯಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ತೋರಿಸಿರುವ ಚಿತ್ರ ಇದು ಎನ್ನುವ ಪ್ರಶಂಸೆ ಈಗಾಗಲೇ ವೀಕ್ಷಕರಿಂದ ಕೇಳಿ ಬಂದಿದೆ. 15 ನಿಮಿಷದ ಈ ಚಿತ್ರದಲ್ಲಿ ಒಂದು ಹಾಡು ಕೂಡ ಇದ್ದು, `ಗೆಟಪ್ ದಿ ಫೋನ್’ ಎನ್ನುವ ಆ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಸದ್ದು ಮಾಡಿದೆ. ಕರ್ನಾಟಕ ಮತ್ತು ಪಾಂಡಿಚೇರಿಗಳಲ್ಲಿ ಸಿದ್ದಮಾಡಲಾಗಿರುವ ಈ ಕಿರುಚಿತ್ರ ಶ್ರೀಧರ ಶಾಸ್ತ್ರಿಗೆ ಹೊಸ ಅವಕಾಶವೊಂದನ್ನು ತಂದುಕೊಟ್ಟಿದೆ. ಈ ಎಲ್ಲ ವಿಚಾರಗಳ ಬಗ್ಗೆ ಪ್ರಶ್ನೆಗಳಿಗೆ ಅವರು ಇಲ್ಲಿ ಉತ್ತರ ನೀಡಿದ್ದಾರೆ.
`ಅನ್ ಲಾಕ್’ ಯಾಕೆ ಯೂಟ್ಯೂಬ್ ನಲ್ಲಿ ಲಭ್ಯವಿಲ್ಲ?
`ಅನ್ ಲಾಕ್’ ಕಿರುಚಿತ್ರವನ್ನು ಒಂದಷ್ಟು ಸರ್ಕಾರಿ ಪ್ರತಿನಿಧಿಗಳು ಮೆಚ್ಚಿದ್ದಾರೆ. ಸಂದೇಶಾತ್ಮಕ ಕಿರುಚಿತ್ರವಾದ ಕಾರಣ, ಶಾಲೆಗಳಲ್ಲಿ ವಿಶೇಷ ಪ್ರದರ್ಶನ ನೀಡಿ ಜಾಗೃತಿ ಮೂಡಿಸಲು, ಸರ್ಕಾರದ ವತಿಯಿಂದ ಬಳಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಅದರ ಬಗ್ಗೆ ತೀರ್ಮಾನವಾದ ಬಳಿಕ ಮಾತ್ರ ಸಾರ್ವಜನಿಕ ಪ್ರದರ್ಶನದ ಬಗ್ಗೆ ಯೋಚಿಸಬಹುದು.
ಈ ಕಿರುಚಿತ್ರಕ್ಕೆ `ಅನ್ ಲಾಕ್’ ಎನ್ನುವ ಹೆಸರೇಕೆ?
ಸಾಮಾನ್ಯವಾಗಿ ಇವತ್ತು ಅನ್ ಲಾಕ್ ಎನ್ನುವ ಪದವನ್ನು ಮೊಬೈಲ್ ಫೋನ್ ಗೆ ಸಂಬಂಧಿಸಿದ ಹಾಗೆ ಬಳಸುತ್ತೇವೆ. ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ, ಮಕ್ಕಳು ಸೇರಿದಂತೆ ದೊಡ್ಡವರಲ್ಲಿಯೂ ಮೊಬೈಲ್ ಫೋನ್ ಹುಚ್ಚಿಗೆ ಬಲಿಯಾಗಿ, ಅದರಿಂದ ದೂರಾಗಲು ಕಷ್ಟಪಡುವವರಿಗೆ `ನೊಮೋ ಫೋಬಿಯ’ ಪೇಶೆಂಟ್ಸ್ ಎನ್ನುತ್ತೇವೆ. `ನೊಮೊ’ ಅಂದರೆ ನೊ ಮೊಬೈಲ್ ಫೊಬಿಯ. ಮೊಬೈಲ್ ಸಿಗದಿದ್ದಾಗ ಮಕ್ಕಳು ಹೇಗೆಲ್ಲ ಆಡುತ್ತಾರೆ ಎನ್ನುವುದನ್ನು ರೋಗ ಲಕ್ಷಣವಾಗಿ ಪರಿಗಣಿಸಿ ಈ ಹೆಸರು ಇಡಲಾಗಿದೆ! ಅದೇ ರೀತಿ ಮೊಬೈಲ್ ಅನ್ ಲಾಕ್ ಆದೊಡನೆ ಅದು ತೆರೆದಿಡುವ ಇಂಥ ಭಯಾನಕ ಪ್ರಪಂಚದ ಬಗ್ಗೆ ಎಚ್ಚರಿಸುವ ಚಿತ್ರಕ್ಕೆ ಈ ಹೆಸರೇ ಸೂಕ್ತ ಎನಿಸಿತು.


ಮೊಬೈಲ್ ಫೋನ್ ಸಮಸ್ಯೆಯ ಚಿತ್ರ ಸ್ಥಳೀಯವಾಗಿ ಎಷ್ಟರ ಮಟ್ಟಿಗೆ ಪ್ರಸ್ತುತವೆನಿಸುತ್ತದೆ?
ಇತ್ತೀಚೆಗೆ ಮೊಬೈಲ್ ಕೊಟ್ಟಿಲ್ಲ ಎನ್ನುವ ಕಾರಣದಿಂದ ಹುಡುಗನೊಬ್ಬ ತಂದೆಯನ್ನೇ ಕೊಂದಿರುವುದು ಕರ್ನಾಟಕದಲ್ಲೇ ನಡೆದಿದೆ. ತಮಿಳುನಾಡಲ್ಲಿ ನಡೆದ ಘಟನೆಯಲ್ಲಿ ಪ್ರಿ ವೆಡ್ಡಿಂಗ್ ಫೊಟೋಗಾಗಿ ಬಾವಿ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳಬೇಕಾದರೆ ಭಾವೀಪತ್ನಿ ಬಾವಿಗೆ ಜಾರಿದ್ದಳು. ಆಕೆಯ ಹಿಂದೆಯೇ ಬಾವಿಗೆ ಧುಮುಕಿದ ವರ ಆಕೆಯನ್ನು ಬದುಕಿಸಲಾಗದಿದ್ದರೂ ತನ್ನ ಮೈಕೈಗಳಿಗೆ ಏಟು ಮಾಡಿಕೊಂಡಿದ್ದ! ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿ ದೆಹಲಿಯಲ್ಲಿ ಮೊಬೈಲ್ ಡಿ ಎಡಿಕ್ಷನ್ ಸೆಂಟರ್ ತೆರೆದಿದ್ದಾರೆ. ನಮ್ಮ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಶಟ್ ಕ್ಲಿನಿಕ್ಸ್ ಮೂಲಕ ಇಂಟರ್ನೆಟ್ ಆ್ಯಂಡ್ ಮೊಬೈಲ್ ಡಿ ಎಡಿಕ್ಷನ್ ಸೆಂಟರ್ ಶುರುವಾಗಿದೆ. ಹಾಗಾಗಿ ಇಂಥದೊಂದು ಗಂಭೀರ ವಿಚಾರವನ್ನು ಚಿತ್ರದ ಮೂಲಕ ತಿಳಿಸಲೇಬೇಕೆಂದು ತೀರ್ಮಾನಿಸಿದೆ.
ನಿಮಗೆ ಸಿನಿಮಾರಂಗದ ಜತೆಗಿರುವ ಸಂಬಂಧವೇನು?
ನನ್ನದು ಮೂಲತಃ ಮೂಲತಃ ರಾಯಚೂರು. ಬೆಂಗಳೂರಿಗೆ ಬಂದ ಮೇಲೆ ಇಲೆಕ್ಟ್ರಿಕಲ್ಸ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಮಾಡಿ ಇಲೆಕ್ಟ್ರಾನಿಕ್ ಸಿಟಿಯಲ್ಲಿ ವೃತ್ತಿಯಲ್ಲಿದ್ದೆ. ಸಿನಿಮಾ ಮೇಲಿನ ಆಸಕ್ತಿಯಿಂದ ಮಲ್ಲೇಶ್ವರದಲ್ಲಿ ಫಿಲ್ಮ್ ಮೇಕಿಂಗ್, ಎನಿಮೇಶನ್ ಮತ್ತು ವಿ ಎಫ್ ಎಕ್ಸ್ ತರಬೇತಿ ಪಡೆದುಕೊಂಡೆ. `ಸ್ವಚ್ ಸಂಕಲ್ಪ್ ಸೆ ಸ್ವಚ್ ಸ್ಥಿತಿ’ ಎನ್ನುವುದು ನನ್ನ ಮೊದಲ ಕಿರುಚಿತ್ರ. ಅದು ಮೂರೇ ನಿಮಿಷ ಕಾಲಾವಧಿಯದ್ದಾಗಿತ್ತು. ಮೊಬೈಲ್ ಬಗ್ಗೆ ಎರಡನೇ ಚಿತ್ರ ಮಾಡುವಾಗ ಸಮಾನಾಸಕ್ತರನ್ನು ಸೇರಿಸಿಕೊಂಡು ಚಿತ್ರ ಮಾಡಿದೆ.
ಒಟ್ಟು `ಅನ್ ಲಾಕ್’ ಚಿತ್ರತಂಡದ ಬಗ್ಗೆ ಹೇಳಿ
ನಮ್ಮ ಚಿತ್ರದ ನಿರ್ಮಾಪಕರು ಅಮರೇಶ್ ರೈತನಗರ. ಆದರೆ ನಿರ್ದೇಶಕ ವಿಭಾಗದ ಒಟ್ಟು ತಂತ್ರಜ್ಞರನ್ನು ಫೇಸ್ ಬುಕ್ ಮೂಲಕವೇ ಆಯ್ಕೆ ಮಾಡಿರುವುದು ವಿಶೇಷ. ಅವರನ್ನೆಲ್ಲ ಒಂದು ಕಡೆ ಸೇರಿಸಿ ಚಿತ್ರದ ಯೋಜನೆ ಹಾಕಿದೆ. ಕತೆ, ಚಿತ್ರ ಕತೆ ಸಂಭಾಷಣೆ ನನ್ನದೇ. ಸೋಮವಾರದಿಂದ ಶುಕ್ರವಾರದ ತನಕ ಚಿತ್ರೀಕರಣ ಮತ್ತು ಶನಿವಾರ ಭಾನುವಾರ ಚಿತ್ರದ ಕುರಿತಾದ ಚರ್ಚೆ ನಡೆಸುತ್ತಿದ್ದೆವು. ಪ್ರಧಾನ ಪಾತ್ರದಲ್ಲಿ `ಅಗ್ನಿಸಾಕ್ಷಿ’ ಖ್ಯಾತಿಯ ರಾಜೇಶ್ ಧ್ರುವ ಮತ್ತು ಪದ್ಮಶ್ರೀ ಜೈನ್ ಮತ್ತು ಬಾಲನಟ ಸಮರ್ಥ್ ಜೋಶಿ ಅಭಿನಯಿಸಿದ್ದಾರೆ. ಈಗಾಗಲೇ `ಕಥಾಸಂಗಮ’ದ ಚಿತ್ರದ ಶೀರ್ಷಿಕೆ ಸಂಗೀತ ಮತ್ತು ಅದರಲ್ಲಿ `ಪಡುವಾರಹಳ್ಳಿ’ ಎನ್ನುವ ಚಿತ್ರದ ಬಿಜಿಎಮ್ ಮೂಲಕ ಗುರುತಿಸಿಕೊಂಡಿರುವ ಗಿರೀಶ್ ಹೊತ್ತೂರು ಅದಕ್ಕೂ ಮೊದಲೇ ಸಂಗೀತ ನೀಡಿರುವ ಚಿತ್ರ ನಮ್ಮದು. ಒಂದಷ್ಟು ಕಿರುಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವಂಥ ಸತೀಶ್ ರಾಜೇಂದ್ರನ್ ನಮ್ಮ ಚಿತ್ರದ ಕ್ಯಾಮೆರಾಮ್ಯಾನ್. ಆಶಿಕ್ ಮತ್ತು ಉಜ್ವಲ್ ಎನ್ನುವ ಇಬ್ಬರು ಹೊಸಬರು ಸೇರಿ ಸಂಕಲನ ನಿರ್ವಹಿಸಿದ್ದಾರೆ.
ನಿಮ್ಮ ಮುಂದಿನ ಸಿನಿಮಾ ಯೋಜನೆಗಳೇನು?
ನಿರೀಕ್ಷೆಯಂತೆ ಅನ್ ಲಾಕ್ ಚಿತ್ರದ ಗುಣಮಟ್ಟ ಗಮನಿಸಿ ಒಂದಷ್ಟು ಅವಕಾಶಗಳು ಬಂದಿವೆ. ಒಂದು ಒಳ್ಳೆಯ ಸಬ್ಜೆಕ್ಟ್ ಯೋಜನೆಯಲ್ಲಿದೆ. ಅದರ ಬಗ್ಗೆ ಹೆಚ್ಚು ಹೇಳಲು ಇನ್ನೂ ಕಾಲ ಕೂಡಿ ಬಂದಿಲ್ಲ. ಥ್ರಿಲ್ಲರ್ ಸಬ್ಜೆಕ್ಟ್ ಆಯ್ದುಕೊಂಡಿದ್ದೇನೆ. ಈ ಬಾರಿ ಸ್ಟಾರ್ ನಟರನ್ನು ಪಾತ್ರವಾಗಿಸುವ ಪ್ರಯತ್ನ ನಡೆಸಿದ್ದೇನೆ. ಫೆಬ್ರವರಿಯಲ್ಲಿ ಚಿತ್ರೀಕರಣ ಶುರು ಮಾಡುವ ಪ್ಲ್ಯಾನ್ ಇದೆ.
