
ಕಷ್ಟಗಳನ್ನೆಲ್ಲ ದಾಟಿ ಬಂದು ಕಲಾವಿದನಾದ ಯಶ್ ಶೆಟ್ಟಿ
ಯಶ್ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಜನಪ್ರಿಯವಾಗಿರುವ ಕನ್ನಡದ ನಾಯಕ ನಟರಿದ್ದಾರೆ. ಅವರಿಗಿಂತಲೂ ಕಷ್ಟದ ಬಾಲ್ಯದೊಂದಿಗೆ ಬೆಳೆದು ಬಂದಿರುವ ಈ ಯಶ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಯುವಖಳನಟನಾಗಿ ಗುರುತಿಸಲ್ಪಡುತ್ತಿದ್ದಾರೆ. ಅಂದಹಾಗೆ ರಾಕಿಂಗ್ ಸ್ಟಾರ್ ಯಶ್‌ಗೆ ಇನ್ನಿಲ್ಲದಂತೆ ಹೆಸರು ತಂದುಕೊಟ್ಟ ಕೆಜಿಎ್ ಚಿತ್ರದಲ್ಲಿ ಕೂಡ ಇವರು ನಟಿಸಿದ್ದಾರೆ.
ಹೆಸರೇ ಸೂಚಿಸುವಂತೆ ಯಶ್ ಶೆಟ್ಟಿ ಕರಾವಳಿಯವರು. ಉಡುಪಿ ಜಿಲ್ಲೆಯ ಹಿರಿಯಡ್ಕದ ಹುಡುಗ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಹೋಟೆಲ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡಿ, ಬಳಿಕ ಸಪ್ಲಯರ್ ಆಗಿ ಆನಂತರ ಕ್ಯಾಶಿಯರ್ ಸ್ಥಾನ ಸೇರಿಕೊಂಡವರು! ಅಷ್ಟೇ ಅಲ್ಲ ಈ ಪಯಣದಲ್ಲಿ ಅವರು ರಾತ್ರಿ ಲಾಡ್ಜ್‌ನಲ್ಲಿ ರೂಂ ಬಾಯ್, ಬೆಳಗ್ಗಿನ ಜಾವ ಹಾಲು ಮಾರುವ ಕಾಯಕ, ಆನಂತರ ಶಾಲೆ.. ಹೀಗೆ ಬದುಕು ರೂಪಿಸಿಕೊಂಡ ಹುಡುಗ! ಕೊನೆಗೆ ಇದೀಗ ಬೆಂಗಳೂರು ಸೇರಿಕೊಂಡು ಪ್ರಮುಖ ಸಿನಿಮಾ ಕಲಾವಿದರ ಪಟ್ಟಿಯಲ್ಲಿ ಒಂದು ಸ್ಥಾನವನ್ನು ಗಿಟ್ಟಿಸಿದ್ದಾರೆ.
ರಂಗಭೂಮಿಯ ಪ್ರತಿಭೆ
ಯಶ್ ಶೆಟ್ಟರ ಮೂಲ ಹೆಸರು ಯಶವಂತ್ ಶೆಟ್ಟಿ. ಈ ಎಲ್ಲ ಬವಣೆಗಳ ನಡುವೆಯೂ ಹಿರಿಯಡ್ಕದ ಎಂಜಿಎಂ ಕಾಲೇಜಿನಲ್ಲಿ ಡಿಗ್ರಿ ಮಾಡಿದ್ದಾರೆ. ಊರಲ್ಲಿ ಒಂದಿಷ್ಟು ಹುಡುಗರು ಸೇರಿಕೊಂಡು ನಾಟಕದ ತಂಡವನ್ನು ಕಟ್ಟಿಕೊಂಡು ಯಕ್ಷಗಾನ, ನಾಟಕಗಳನ್ನು ಪ್ರದರ್ಶಿಸಿದ್ದೇ ಆರಂಭದ ಕಲೆಯ ನಂಟು. ಬಳಿಕ ನೀನಾಸಂ ಸಂಸ್ಥೆಯಿಂದ ನಟನೆ ಕಲಿಯುವ ಆಸಕ್ತಿ ಮೂಡಿತು. ಕಾಲೇಜಿನ ಶಿಕ್ಷಕರೇ ಒಂದಿಷ್ಟು ಹಣ ಸಂಗ್ರಹಿಸಿ ಯಶ್‌ನನ್ನು ನೀನಾಸಂಗೆ ಕಳುಹಿಸಿ ಕೊಟ್ಟರು. ಇಲ್ಲಿ ಒಂದು ವರ್ಷ ತರಬೇತಿ ಮುಗಿಸಿಕೊಂಡ ಮೇಲೆ ಎನ್.ಎಸ್.ಡಿ.ಬಗ್ಗೆ ತಿಳಿದುಕೊಂಡರು. ಅಲ್ಲಿಯೂ ನಟನೆ ಕಲಿತರು. ಆ ಮೂರು ವರ್ಷಗಳಲ್ಲಿ ನಸೀರುದ್ದೀನ್ ಶಾ, ರಾಜ್‌ಪಾಲ್ ಯಾದವ್, ಅತುಲ್ ಕುಲಕರ್ಣಿ ಮೊದಲಾದ ಸೀನಿಯರ್‌ಗಳಿಂದ ಕಲಿಯುವ ಅವಕಾಶ ಲಭಿಸಿತು. ತರಬೇತಿ ಆದ ಮೇಲೆ ಏಷ್ಯನ್ ಎಜುಕೇಷನ್ ಥಿಯೇಟರ್ ಸೆಂಟರ್ ಹೆಸರಿನಲ್ಲಿ ಚೈನಾದಲ್ಲಿ ನಡೆಯುವ ಏಷ್ಯಾದ ಎಲ್ಲಾ ದೇಶಗಳ ನಡುವಿನ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು! ಪ್ರಶಸ್ತಿ ಸ್ವೀಕರಿಸಿದ ಬಳಿಕ ಎನ್ ಎಸ್ ಡಿಯಲ್ಲಿಯೇ ನಟನೆಯ ಪಾಠ ಹೇಳಿಕೊಡುವ ಹುದ್ದೆ ಆಫರ್ ಮಾಡಿದರು. ಆದರೆ ಒಪ್ಪದ ಯಶ್ ಮುಂಬೈಗೆ ಹೋದರು. ಹೀಗೆ ಎನ್ ಎಸ್ ಡಿ ಇವರನ್ನು ಕಲಾವಿದನನ್ನಾಗಿ ಮಾಡಿತು.
ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಕ್ಕಳೇ ಮಾಣಿಕ್ಯ’ ಹಾಗೂ ದಿನೇಶ್ ಬಾಬು ನಿರ್ದೇಶನದ ‘ಸ್ವಾತಿಮುತ್ತು’ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಅಲ್ಲಿ ಪರಿಚಯವಾದ ಅಂಬರೀಶ್ ಎನ್ನುವವರು ನೀಡಿದ ‘ಜ್ವಲಂತಂ’ ಚಿತ್ರದ ಘೋರನ ಪಾತ್ರ ಇವರನ್ನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಹಾಗಾಗಿ ಸೋಜಿಗ, ಅಭಿಸಾರಿಕೆ, ಚೌಕ , ನೂರೊಂದು ನೆನಪು, ಜಾನ್ ಜಾನಿ ಜನಾರ್ದನ್, ರೈಲ್ವೇ ಚಿಲ್ಡ್ರನ್, ಸಂಹಾರ, ಅಥರ್ವ, ಇತ್ತೀಚೆಗೆ ದರ್ಶನ್ ಅವರ ಯಜಮಾನದ ತನಕ ತಂದು ನಿಲ್ಲಿಸಿದೆ. ನಿರೂಪ್ ಭಂಡಾರಿ ಜೊತೆ ಚಿತ್ರ ಮತ್ತು ಯಜಮಾನ ಚಿತ್ರದಲ್ಲಿ ದರ್ಶನ್ ಮುಂದೆ ಫೈಟ್ ಮಾಡಿದ್ದು...ಹೀಗೆ ಹೊಸ ಅನುಭವಗಳ ಬಗ್ಗೆ ಹೇಳುವಾಗ ಯಶ್ ಶೆಟ್ಟಿಯ ಉತ್ಸಾಹ ನೂರ್ಮಡಿಯಾಗುತ್ತದೆ. ಇತ್ತೀಚೆಗೆ ತಮಿಳು ಚಿತ್ರವೊಂದರಲ್ಲಿಯೂ ಅವಕಾಶ ಪಡೆದುಕೊಂಡಿದ್ದಾರೆ.

ಸಿನಿಮಾರಂಗದಿಂದ ಪ್ರಶಂಸೆ
ಕೆಜಿಎಫ್ ನಲ್ಲಿ ಪ್ರಮುಖ ವಿಲನ್ ಪಾತ್ರವೊಂದಕ್ಕೆ ಆಹ್ವಾನಿಸಿದ್ದರು. ಆದರೆ ಆ ಸಂದರ್ಭದಲ್ಲಿ ನಾನು ನಾಯಕನಾಗಿರುವ ‘ಸೂಜಿದಾರ’ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದ ಕಾರಣ ನಿರಾಕರಿಸಬೇಕಾಗಿ ಬಂದಿತ್ತು. ಮತ್ತೆ ಸಣ್ಣದೊಂದು ಪಾತ್ರಕ್ಕೆ ಆಹ್ವಾನಿಸಿದಾಗ ಒಪ್ಪಿಕೊಂಡೆ ಯಶ್ ಶೆಟ್ಟಿ. ರವಿಚಂದ್ರನ್ ಮತ್ತು ಉಪೇಂದ್ರ ಕಾಂಬಿನೇಶನಲ್ಲಿ ತೆರೆಗೆ ಸಿದ್ಧವಾಗುತ್ತಿರುವ ರವಿಚಂದ್ರ ಚಿತ್ರದಲ್ಲಿ ಉಪ್ಪಿಯ ವಿರುದ್ಧ ಪ್ರಮುಖ ಖಳನಾಗಿ ಮನಸೆಳೆಯುವ ಅವಕಾಶ ಇವರಿಗೆ ಲಭಿಸಿದೆ. ಕನಕಪುರ ಶ್ರೀನಿವಾಸ್ ನಿರ್ಮಾಣದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಪ್ರಸ್ತುತ ಚಿತ್ರದಲ್ಲಿ ಪ್ರದೀಪ್ ರಾವತ್ ಅವರ ದೊಡ್ಡ ಮಗನ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಚಿತ್ರದಲ್ಲಿ ತುಂಬ ಶಾರ್ಟ್ ಟೆಂಪರ್ ಯುವಕ ಇವರು! ನಿರ್ದೇಶಕರಿಂದ ಸೆಟ್‌ನಲ್ಲೇ ಪ್ರಶಂಸೆಗೆ ಒಳಗಾಗಿರುವ ಪಾತ್ರ ಇದು. ಮಿನರ್ವ ಮಿಲ್‌ನಲ್ಲಿ ರವಿವರ್ಮ ಸಂಯೋಜನೆಯ ಫೈಟ್ ಸೀಕ್ವೆನ್‌ಸ್‌ನಲ್ಲಿ ಪಾಲ್ಗೊಂಡ ಬಳಿಕ ಅವರ ಬಳಿಗೆ ಬಂದ ಉಪೇಂದ್ರ `ನೀನು ಖಳನ ಪಾತ್ರಕ್ಕೆ ತುಂಬ ಚೆನ್ನಾಗಿ ಹೊಂದುತ್ತೀಯ. ನಿನಗೆ ಖಂಡಿತವಾಗಿ ಒಳ್ಳೆಯ ಭವಿಷ್ಯ ಇದೆ’ ಎಂದಿರುವುದು ಇವರಿಗೆ ಹೊಸ ಚೈತನ್ಯ ತಂದಿದೆ. ಸೂಜಿದಾರ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದೆ. ಸದ್ಯದಲ್ಲೇ ತೆರೆಗೆ ಬರಲಿರುವ ವಿ ರವಿಚಂದ್ರನ್ ನಾಯಕರಾಗಿರುವ ಕೆ.ಮಂಜು ಅವರ ‘ಆ ದೃಶ್ಯ’ ಚಿತ್ರ ಮತ್ತು ಶಿವರಾಜ್ ಕುಮಾರ್ ನಾಯಕರಾಗಿರುವ ಪಿ.ವಾಸು ಸಿನಿಮಾ ಹೀಗೆ ಪ್ರಮುಖ ನಾಯಕರ ಚಿತ್ರಗಳಲ್ಲೆಲ್ಲ ಗುರುತಿಸಿಕೊಳ್ಳುವಂಥ ಪಾತ್ರ ನಿಭಾಯಿಸಿದ್ದಾರೆ.
ಎಲ್ಲರೂ ಪ್ರತಿಭಾವಂತರೇ..!
ಯಶ್ ಶೆಟ್ಟಿ ಪ್ರಕಾರ ಪ್ರತಿಭೆ ಎನ್ನುವುದು ಎಲ್ಲ ಮಕ್ಕಳಲ್ಲಿಯೂ ಇರುತ್ತದೆ. ಆದರೆ ಅದೃಷ್ಟ ಎನ್ನುವುದು ಬರುತ್ತಾ ಹೋಗುತ್ತಾ ಇರುತ್ತದೆ. ಪ್ರತಿಭೆಯನ್ನು ಹೊರತರುವಲ್ಲಿ ನಮ್ಮದೇ ನೈಪುಣ್ಯತೆಯನ್ನು ರೂಢಿಸಿಕೊಂಡರೆ ನಾವು ಯಾವತ್ತಿಗೂ ಸೋಲು ಸಂದರ್ಭಗಳಿರುವುದಿಲ್ಲ. ಪ್ರತಿಭ ಕೈ ಕೊಟ್ಟಾಗ ನಾವು ನಮ್ಮ ನೈಪುಣ್ಯತೆಯನ್ನು ಬಳಸಬೇಕು. ಹಾಗಂತ ತಾವು ನೈಪುಣ್ಯವಂತ ಎಂದು ಅವರು ನಂಬುವುದಿಲ್ಲ. ಯಾಕೆಂದರೆ ಅವರಿಗೆ ಕರಾವಳಿಯ ತಮ್ಮ ಮಾತೃಭಾಷೆಯೇ ಸದ್ಯದ ಸವಾಲಾಗಿದೆ! ಪಾತ್ರವಾಗಿ ಎಷ್ಟೇ ಹೊಂದಿಕೊಂಡರೂ ಸಂಭಾಷಣೆಯಲ್ಲಿ ತುಳುವಿನ ಶೈಲಿ ಕಾಡುತ್ತದೆ. ವಾಯ್ಸ್ ಮಾಡ್ಯುಲೇಶನ್ ಮೂಲಕ ಈ ಸವಾಲನ್ನು ಎದುರಿಸುವ ಪ್ರಯತ್ನ ನಿರಂತರ ಸಾಗಿದೆ. ಆದರೆ ಹುಟ್ಟಿನಿಂದ ಮೂರು ದಶಕದ ರೂಢಿಯಾಗಿರುವ ಭಾಷೆಯಾದ ಕಾರಣ, ಏನೋ ಸ್ವಲ್ಪ ಗಟ್ಟಿಯಾಗಿ ಉಳಿದುಕೊಂಡಿದೆ ಅಷ್ಟೇ. ಅವರಿಗಿರುವ ಹಠಮಾರಿತನ, ಕಲೆಯೆಡೆಗಿನ ಆಸಕ್ತಿ ಅದನ್ನು ಸಾಧಿಸುವಂತೆ ಮಾಡಬಹುದು. ಹಾಗೆ ನೋಡಿದರೆ ಆರಡಿ ಎತ್ತರದ ಈ ಹೈದ ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟದ ಆಟಗಾರ. ಆದರೆ ಅಲ್ಲಿ ಮುಂದುವರಿಯದಿರಲು ಸಿನಿಮಾದೆಡೆಗಿನ ಆಸಕ್ತಿಯೇ ಪ್ರಮುಖ ಕಾರಣವಾಗಿತ್ತು. ಅಂಥದೊಂದು ಶುದ್ಧ ಆಸಕ್ತಿ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಮುಂದೆ ಇನ್ನಷ್ಟು ದೊಡ್ಡ ಮಟ್ಟಕ್ಕೆ ಕರೆದೊಯ್ಯಲಿದೆ. ಅವರಿಗೆ ನಮ್ಮ ಶುಭ ಹಾರೈಕೆಗಳು.



